7
ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿರೋಧ, ಉದ್ವಿಗ್ನ ಸ್ಥಿತಿ ನಿರ್ಮಾಣ

ಚಿಕ್ಕಬಳ್ಳಾಪುರ ಬಂದ್‌ಗೆ ಬಹುತೇಕರ ಬೆಂಬಲ

Published:
Updated:
ಚಿಕ್ಕಬಳ್ಳಾಪುರ ಬಂದ್‌ಗೆ ಬಹುತೇಕರ ಬೆಂಬಲ

ಚಿಕ್ಕಬಳ್ಳಾಪುರ: ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ವಿರೋಧಿಸಿ ‘ಪ್ರಗತಿಪರ ಪರಿಸರ ಚಿಂತಕರ ವೇದಿಕೆ’ ಬುಧವಾರ ಕರೆ ನೀಡಿದ್ದ ‘ಚಿಕ್ಕಬಳ್ಳಾಪುರ ಬಂದ್‌’ಗೆ ನಗರದ ಬಹುಪಾಲು ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳ ಬಾಗಿಲು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘಗಳು, ಕನ್ನಡಪರ ಸಂಘಟನೆಗಳು, ಜೆಡಿಎಸ್, ಬಿಜೆಪಿ ಮತ್ತು ವಿವಿಧ ಸಂಘ ಸಂಸ್ಥೆಗಳು ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಆದರೆ ಈ ಬಂದ್‌ ವಿಫಲಗೊಳಿಸಬೇಕು ಎಂದು ಮಂಗಳವಾರ ರಾತ್ರಿಯಿಂದಲೇ ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ.

ನಗರದಲ್ಲಿರುವ ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಶಾಖೆಗಳು ಬಾಗಿಲು ತೆರೆಯಲಿಲ್ಲ. ನಿತ್ಯಕ್ಕಿಂತ ವಾಹನ ಸಂಚಾರ ವಿರಳವಾಗಿ ಕಂಡುಬಂತು. ನಸುಕಿನಲ್ಲೇ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಟೈರ್‌ ಸುಟ್ಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಬಂದ್‌ ವಿರೋಧಿಸಿ ನಗರಾದ್ಯಂತ ಬೈಕ್‌ ರ‍್ಯಾಲಿ ನಡೆಸಿ ವರ್ತಕರಿಗೆ ಬಾಗಿಲು ತೆಗೆಯುವಂತೆ ಪ್ರೋತ್ಸಾಹಿಸಲು ಮುಂದಾದರು. ಆದರೆ ಅವರ ಆಸೆ ಕೈಗೂಡಲಿಲ್ಲ. ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಬಂದ್‌ ಬೆಂಬಲಿಸಿ ಬೈಕ್‌ ರ‍್ಯಾಲಿ ನಡೆಸಿದರು.

ಲಘು ಲಾಠಿ ಪ್ರಹಾರ

ಕಾಂಗ್ರೆಸ್‌ ಕಾರ್ಯಕರ್ತರ ಬೈಕ್‌ ರ‍್ಯಾಲಿಯು ವಿವಿಧ ಸಂಘಟನೆಗಳ, ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಅಂಬೇಡ್ಕರ್ ವೃತ್ತದ ಸಮೀಪಕ್ಕೆ ಬರುತ್ತಿದ್ದಂತೆ ಪರಸ್ಪರ ವಿರೋಧಿ ಘೋಷಣೆಗಳು ಜೋರಾಗಿ ಕೇಳಿ ಬಂದವು. ಸ್ಥಳದಲ್ಲಿದ್ದ ಎಸ್ಪಿ ಕಾರ್ತಿಕ್‌ ರೆಡ್ಡಿ ಅವರು ಕಾಂಗ್ರೆಸ್‌ ಕಾರ್ಯಕರ್ತರ ಮನವೊಲಿಸಿ ಅಲ್ಲಿಂದ ಕಳುಹಿಸಲು ಮುಂದಾದರು.

ಈ ವೇಳೆ ಎರಡು ಕಡೆಗಳಿಂದ ಘೋಷಣೆಗಳು ತಾರಕಕ್ಕೆ ಏರಿದವು. ನೂಕಾಟ ತಳ್ಳಾಟ ಕಾಣಿಸಿಕೊಂಡ ತಕ್ಷಣವೇ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಮನಗಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಈ ವೇಳೆ ಮೂರು ಜನರು ಗಾಯಗೊಂಡರು.

ನಂತರ ಶಾಸಕ ಡಾ.ಕೆ.ಸುಧಾಕರ್‌ ಅವರು ತಮ್ಮ ಬೆಂಬಲಿಗರೊಂದಿಗೆ ಪಿಎಲ್‌ಡಿ ಬ್ಯಾಂಕ್‌ನಿಂದ ಅಂಬೇಡ್ಕರ್ ವೃತ್ತದ ವರೆಗೆ ಬಂದ್ ವಿರೋಧಿಸಿ ಮೆರವಣಿಗೆ ನಡೆಸಿದರು. ಇದಕ್ಕೂ ಮೊದಲು ಪೊಲೀಸರು ವೃತ್ತದಲ್ಲಿದ್ದ ಪ್ರತಿಭಟನಾಕಾರರನ್ನು ಎಂ.ಜಿ.ರಸ್ತೆ ಕಡೆ ಕಳುಹಿಸಿ ಕೊಟ್ಟರು. ಶಾಸಕರು ವೃತ್ತದಿಂದ ನಿರ್ಗಮಿಸುತ್ತಿದ್ದಂತೆ ಪೊಲೀಸರು ಎಂ.ಜಿ.ರಸ್ತೆಯ ಪೊಲೀಸ್‌ ವೃತ್ತದ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ‘ಕೇವಲ ಎರಡು ಹಂತದಲ್ಲಿ ಸಂಸ್ಕರಿಸಿದ ನೀರಿನ ಬಳಕೆಯಿಂದ ಪರಿಸರ ಮತ್ತು ಜೀವ ವೈವಿಧ್ಯತೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳೇ ವರದಿ ನೀಡಿದ್ದಾರೆ’ ಎಂದು ಹೇಳಿದರು.

‘ಆದರೆ ಜನಪ್ರತಿನಿಧಿಗಳು ಹೋರಾಟಗಾರರನ್ನು ಬಂಧನದಲ್ಲಿಟ್ಟು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಬೆಂಗಳೂರಿನ ತ್ಯಾಜ್ಯ, ರಾಸಾಯನಿಕ ಯುಕ್ತ ನೀರನ್ನು ತಂದು ಈ ಜಿಲ್ಲೆಯ ಜನರ ಬದುಕಿನ ಜತೆ, ಮುಂದಿನ ಪೀಳಿಗೆಯೊಂದಿಗೆ ಚೆಲ್ಲಾಟ ಆಡಲು ಹೊರಟಿದ್ದಾರೆ’ ಎಂದು ದೂರಿದರು.

‘ಅನೇಕ ದಶಕಗಳಿಂದ ಹೋರಾಡುತ್ತ ಬಂದರೂ ಬಯಲು ಸೀಮೆ ಜಿಲ್ಲೆಗಳಿಗೆ ಯಾವುದೇ ಶಾಶ್ವತ ನೀರು ಒದಗಿಸುವ ನೀರಿನ ಮೂಲ

ಗಳನ್ನು ಒದಗಿಸಿಲ್ಲ. ಈಗಲಾದರೂ ನಮಗೆ ಶುದ್ಧ ಕುಡಿಯುವ ನೀರು ಕೊಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಜನರ ಆಶೋತ್ತರಗಳಿಗೆ ಧ್ವನಿಯಾಗಬೇಕಿದ್ದ, ಆತಂಕ ನಿವಾರಿಸಬೇಕಿದ್ದ ಶಾಸಕರೇ ಬಂದ್‌ ವಿಫಲ ಮಾಡಿ ಕರೆ ನೀಡಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರು ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ನಗರ ಹೊರವಲಯದ ಅಣಕನೂರು ಬಳಿ ಇರುವ ಎಸ್‌ಪಿ ಕಚೇರಿ ಆವರಣದಲ್ಲಿ ಕೂಡಿ ಹಾಕಿ ಸಂಜೆ ಬಿಡುಗಡೆಗೊಳಿಸಿದರು. ಮುಂಜಾಗ್ರತೆ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್, ಸಾಮಾಜಿಕ ಹೋರಾಟಗಾರ ಎ.ಟಿ.ಕೃಷ್ಣನ್‌, ನೀರಾವರಿ ಹೋರಾಟಗಾರರಾದ ಲಕ್ಷ್ಮಯ್ಯ, ಮಳ್ಳೂರು ಹರೀಶ್, ಕಲಾ ನಾಗರಾಜ್, ಜೆಡಿಎಸ್ ಮುಖಂಡರಾದ ನಾರಾಯಣಸ್ವಾಮಿ, ಬಂಡ್ಲು ಶ್ರೀನಿವಾಸ್, ಕಿಸಾನ್ ಕೃಷ್ಣಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲ ನೀಡದ ಆಟೊ ಪ್ರಚಾರ

ಬಂದ್‌ ವಿಫಲಗೊಳಿಸುವ ಉದ್ದೇಶದಿಂದ ಕೆಲವರು ಮಂಗಳವಾರ ರಾತ್ರಿ ನಗರದಾದ್ಯಂತ ನಾಳೆಯ ಬಂದ್ ರದ್ದಾಗಿದೆ. ವರ್ತಕರು ಬಾಗಿಲು ಮುಚ್ಚಬೇಡಿ ಎಂದು ಆಟೊ ಪ್ರಚಾರ ನಡೆಸಿದರು. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸುಧಾಕರ್ ಅವರು ಬಂದ್‌ ವಿರುದ್ಧ ಅಸಮಾಧಾನದ ಮಾತುಗಳನ್ನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.

ಅದರಲ್ಲಿ ಸುಧಾಕರ್, ‘ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ಪದೇ ಪದೇ ಬಂದ್‌ ಕರೆ ನೀಡುತ್ತಿದ್ದಾರೆ. ಇದಕ್ಕೆ ಜನಸಾಮಾನ್ಯರು ಮಾನ್ಯತೆ ಕೊಡಬಾರದು. ಯಾರಾದರೂ ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಲು ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾಳೆ ಯಾರು ಬಂದ್ ಮಾಡುತ್ತಾರೋ ನಾನು ನೋಡುತ್ತೇನೆ. ಸಾರ್ವಜನಿಕರು ನಿರ್ಭಿತಿಯಿಂದ ದಿನಚರಿ ಮುಂದುವರಿಸಬೇಕು’ ಎಂದು ಹೇಳಿದ್ದರು.

ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ

ಈ ದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಕರಾಳ ದಿನ. ಸರ್ಕಾರ ಸಂವಿಧಾನ ಬದ್ಧ ಹೋರಾಟದ ಹಕ್ಕನ್ನು ಮೊಟಕುಗೊಳಿಸುವ, ಪ್ರಜಾಪ್ರಭುತ್ವದ ಮೌಲ್ಯವನ್ನು ಧಮನಗೊಳಿಸುವ ಕೆಲಸವನ್ನು ಶಾಸಕರು ಪೊಲೀಸರನ್ನು ಬಳಸಿಕೊಂಡು ಮಾಡುತ್ತಿದ್ದಾರೆ. ದೌರ್ಜನ್ಯ, ದಾದಾಗಿರಿ ಮಾಡುವುದರಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಇದಕ್ಕೆಲ್ಲ ಕಿವಿಗೊಡಬೇಡಿ ಈ ಭಾಗದ ನೀರಿನ ಬವಣೆ ನೀಗುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರ ಮಹತ್ವದ ಯೋಜನೆಗೆ ಜಾರಿಗೆ ಮುಂದಾದರೆ ರೈತ ವಿರೋಧಿ ಮನಸ್ಥಿತಿಯ ಕೆಲ ಕಿಡಿಗೇಡಿಗಳು, ರಾಜಕೀಯ ದುರುದ್ದೇಶದಿಂದ ಬಂದ್‌ಗೆ ಕರೆ ನೀಡಿದ್ದಾರೆ. ಪದೇ ಪದೇ ಬಂದ್ ಆಚರಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ. ನಾಗರಿಕರು ಇದಕ್ಕೆಲ್ಲ ಕಿವಿಗೊಡಬಾರದು.

–ಡಾ.ಕೆ.ಸುಧಾಕರ್, ಶಾಸಕ

*

ನಾಚಿಕೆಗೇಡಿನ ಸಂಗತಿ

ನಮಗೆ ಆ ಕೊಳಚೆ ನೀರು ಬೇಡ. ಬೆಂಗಳೂರಿನಲ್ಲೇ ಕುಡಿಯುವ ನೀರಿಗೆ ಕೊರತೆ ಇದೆ. ಅಲ್ಲೇ ಬಳಕೆ ಮಾಡಿಕೊಳ್ಳಲಿ. ಕಮಿಷನ್‌ ಆಸೆಗಾಗಿ ಜನರ ಆರೋಗ್ಯ ನಿರ್ಲಕ್ಷಿಸುವ ಜತೆಗೆ ಅವರ ದಾರಿ ತಪ್ಪಿಸುತ್ತಿರುವುದು ದುರಂತ. ಕಾಂಗ್ರೆಸ್‌ನವರು ಪ್ರತಿರೋಧ ತೋರಿದ್ದು ಖಂಡನೀಯ. ನಾಚಿಕೆಗೇಡಿನ ಸಂಗತಿ. ಹೇಡಿಯಂತೆ ನಡೆದುಕೊಂಡಿದ್ದಾರೆ.

–ಡಾ.ಜಿ.ವಿ.ಮಂಜುನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

*

ಪೊಳ್ಳು ಬೆದರಿಕೆಗೆ ಬಗ್ಗುವುದಿಲ್ಲ

ಬಂದ್‌ ವಿಚಾರದಲ್ಲಿ ರಾಜಕೀಯ ದುರುದ್ದೇಶವಿಲ್ಲ. ಗೂಂಡಾಗಳನ್ನು ಛೂ ಬಿಟ್ಟವರ ಪೊಳ್ಳು ಬೆದರಿಕೆಗೆ ನಾವು ಬಗ್ಗುವುದಿಲ್ಲ. ಪ್ರತಿಭಟನೆ ಮಾಡುವ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕಲು ಯಾರಿಗೂ ಹಕ್ಕಿಲ್ಲ. ಇದು ಖಂಡನೀಯ. ಚಿಕ್ಕಬಳ್ಳಾಪುರ ಜನತೆ ಇದನ್ನು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ.

–ಕೆ.ಪಿ.ಬಚ್ಚೇಗೌಡ, ಮಾಜಿ ಶಾಸಕ

*

ಪ್ರಜ್ಞಾವಂತರಿಗೆ ಅಭಿನಂದನೆ

ಏತ ನೀರಾವರಿ ಯೋಜನೆಯೇ ಅವೈಜ್ಞಾನಿಕ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಯೋಜನೆ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಇದನ್ನು ಅರಿತು ಪ್ರಜ್ಞಾವಂತ ಜನ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

–ಎ.ಟಿ.ಕೃಷ್ಣನ್‌, ಸಾಮಾಜಿಕ ಹೋರಾಟಗಾರ

*

ಜನರ ಶಾಪಕ್ಕೆ ಗುರಿಯಾಗುತ್ತಾರೆ

ಬಂದ್‌ಗೆ ವಿರೋಧ ವ್ಯಕ್ತಪಡಿಸಿ ಆಸ್ಪತ್ರೆ ತ್ಯಾಜ್ಯ, ಕಾರ್ಖಾನೆಗಳ ರಾಸಾಯನಿಕಗಳು, ಹೆಬ್ಬಾಳದ ಕೆರೆ ಪಕ್ಕದ ಚಿತಾಗಾರ ಸ್ವಚ್ಛಗೊಳಿಸಿದ ನೀರು ಬೇಕು ಎಂದು ಕೇಳುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಶಾಪ ಹಾಕುತ್ತಾರೆ. ಅವರ ವಂಶಗಳು ನಿರ್ನಾಮವಾಗುತ್ತವೆ.

–ಮಳ್ಳೂರು ಹರೀಶ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry