ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಪುರುಷಾರ್ಥ’ದ ಮತ್ತೊಂದು ಪ್ರಯೋಗ

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಿ.ಪ್ರಸನ್ನ ಅವರ ನಾಟಕಕೃತಿ ‘ಪುರುಷಾರ್ಥ’ ಈ ಹಿಂದೆಯೂ ಪ್ರದರ್ಶನಗೊಂಡಿತ್ತು. ಬೇರೆ ಬೇರೆ ನಿರ್ದೇಶಕರು ಒಂದೇ ನಾಟಕವನ್ನು ತಮ್ಮತನದೊಂದಿಗೆ ಪ್ರಯೋಗ ಮಾಡುವುದು ಉತ್ತಮ ಬೆಳವಣಿಗೆಯೇ. ಈಗ ‘ಪುರುಷಾರ್ಥ’ವನ್ನು ಕೈಗೆತ್ತಿಕೊಂಡವರು ರಂಗಭೂಮಿ, ಕಿರುತೆರೆ ಮತ್ತು ಚಿತ್ರರಂಗದಲ್ಲಿ ನಿರ್ದೇಶನ ಮತ್ತು ನಟನೆಯಲ್ಲಿ ಪಳಗಿರುವ ಬಹುಮುಖ ಕಲಾವಿದೆ ಸಿತಾರಾ ನೀನಾಸಂ.

ಕಿರುತೆರೆಯಲ್ಲಿ ‘ಅಗ್ನಿಸಾಕ್ಷಿ’ಯ ಸನ್ನಿಧಿ ಅತ್ತಿಗೆ ವಾಣಿಯಾಗಿ ಮನೆ ಮಾತಾಗಿರುವ ಸಿತಾರಾ, ಹತ್ತಾರು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ರಂಗಭೂಮಿಯಲ್ಲಿ ಹೆಗ್ಗುರುತಾಗಿ ಉಳಿದಿರುವುದು ಪ್ರಸನ್ನ ಅವರದೇ ಕೃತಿ ‘ತಾಯವ್ವ’ದಲ್ಲಿ ಎಂ.ಡಿ.ಪಲ್ಲವಿ ಅವರೊಂದಿಗಿನ ನಟನೆ. ಸಿತಾರಾ, ರಂಗ ಚಟುವಟಿಕೆಗಳ ಮೂಲಕವೇ ಹೆಚ್ಚು ಪರಿಚಿತರು. ಹೀಗೆ, ನಿರ್ದೇಶನ ಮತ್ತು ನಟನೆಯಲ್ಲಿ ಪಳಗಿದ ಕಲಾವಿದೆ ‘ಪುರುಷಾರ್ಥ’ ಎಂಬ ವಿಶಿಷ್ಟ ವಸ್ತುವುಳ್ಳ ನಾಟಕವನ್ನು ನಿರ್ದೇಶಿಸುವ ಸವಾಲನ್ನು ಕೈಗೆತ್ತಿಕೊಂಡಿದ್ದಾರೆ.

‘ಬಿ.ಪ್ರಸನ್ನ ಅವರೊಂದಿಗೆ ದಶಕದಿಂದಲೂ ಒಡನಾಟ ಹೊಂದಿದ್ದೇನೆ. ಈ ಬಾರಿ ಯಾವುದಾದರೂ ನಾಟಕ ನಿರ್ದೇಶಿಸಿ ರಂಗಕ್ಕೆ ತರಬೇಕು ಎಂಬ ಯೋಚನೆ ಬಂದಾಗ 15 ಕೃತಿಗಳನ್ನು ಓದಿದ್ದೆ. ಕುವೆಂಪು ಅವರ ‘ಬಲಿದಾನ’ವನ್ನು ನಿರ್ದೇಶಿಸುವ ಮನಸ್ಸು ಇತ್ತು. ಆದರೆ ‘ಪುರುಷಾರ್ಥ’ವನ್ನು ಮೊದಲು ಮಾಡಬೇಕು ಎಂದು ಪ್ರಸನ್ನ ಅವರೊಂದಿಗೆ ಚರ್ಚಿಸಿದೆ. ಇಡೀ ನಾಟಕವನ್ನು ಅವರೆದುರು ಓದಿದ್ದೆ. ಪ್ರತಿ ಪ್ರಯೋಗದಲ್ಲಿಯೂ ಹೆಚ್ಚು ಕಡಿಮೆ ಎಂಬುದು ಇದ್ದುದೇ. ಆದರೆ ಶ್ರದ್ಧೆಯಿಂದ ಪ್ರಯತ್ನಿಸುವುದು ಮುಖ್ಯ. ಆ ಶ್ರದ್ಧೆ ನಿನ್ನಲ್ಲಿದೆ ಎಂದು ಹುರಿದುಂಬಿಸಿದರು’ ಎಂದು ಹೆಮ್ಮೆಯಿಂದ ಸಿತಾರಾ ಹೇಳುತ್ತಾರೆ.

ಯಾವುದೇ ಕೃತಿಯನ್ನು ನಿರ್ದೇಶಿಸುವಾಗ ನಾಟಕಕಾರನ ವ್ಯಕ್ತಿತ್ವದ ಪ್ರಭಾವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪ್ರಸನ್ನ ಅವರು ನಾಟಕದಲ್ಲಿ ತಂದಿರುವ ಮೂಲವಸ್ತು ಮತ್ತು ಆಶಯಕ್ಕೆ ಧಕ್ಕೆಯಾಗದಂತೆ ಗಮನಹರಿಸುವುದು ಮುಖ್ಯ ಎಂಬ ವಿಧೇಯತೆಯೊಂದಿಗೇ ಸಿತಾರಾ ಈ ರಂಗಪ್ರಯೋಗಕ್ಕಿಳಿದಿದ್ದಾರೆ. ‘ಪುರುಷಾರ್ಥ’ದಲ್ಲಿ ಮೋಹನಕುಮಾರ, ಗೀತಾಂಜಲಿ ಮತ್ತು ಮಂದಣ್ಣ ಪ್ರಮುಖ ಪಾತ್ರಗಳು. ಶ್ರೀನಿಧಿ ಬೇಲೂರು ಮೋಹನ ಕುಮಾರನಾಗಿಯೂ, ಅಭಿಷೇಕ್‌ ಮಂದಣ್ಣನಾಗಿಯೂ ಅಭಿನಯಿಸಲಿದ್ದಾರೆ. ಗೀತಾಂಜಲಿಯ ಎರಡು ಹಂತದ ಪಾತ್ರಗಳನ್ನು ಸಂಧ್ಯಾ ಮತ್ತು ರಾಜೇಶ್ವರಿ ಮಾಡಲಿದ್ದಾರೆ.

‘ಹೆಣ್ಣಿನಲ್ಲಿ ಗಂಡಿನ ಅಂಶವಿದೆ, ಗಂಡಿನಲ್ಲಿ ಹೆಣ್ಣಿನ ಅಂಶವಿದೆ; ಹೀಗೆ ಒಬ್ಬರಲ್ಲೊಬ್ಬರು ಅಂತರ್ಗತವಾಗದೆ ಹೆಣ್ಣು ಅಥವಾ ಗಂಡಿನ ವ್ಯಕ್ತಿತ್ವ ಪರಿಪೂರ್ಣವಾಗದು. ಮಾತ್ರವಲ್ಲ, ಹೆಣ್ಣು–ಗಂಡಿನ ನಡುವಿನ ಆಕರ್ಷಣೆ ಹಾಗೂ ಲೈಂಗಿಕ ಕೂಡುವಿಕೆಯ ಪ್ರಕ್ರಿಯೆಯು ಮಾನವ ವ್ಯಕ್ತಿತ್ವದ ಪರಿಪೂರ್ಣತೆಯ ತುಡಿತವೂ ಹೌದು. ಈ ಅರ್ಥದಲ್ಲಿ ‘ಪುರುಷಾರ್ಥ’ ನಾಟಕದ ವಸ್ತು ಪರಿಪೂರ್ಣತೆಯ ಹುಡುಕಾಟವೂ ಹೌದು’ ಎಂಬುದು ಸಿತಾರಾ ವಿಶ್ಲೇಷಿಸುತ್ತಾರೆ.

ಒಂದು ಮಗುವಿನ ತಾಯಿ ಗೀತಾಂಜಲಿಯನ್ನು ಪ್ರೇಮಿಸಿದ ಮೋಹನ ಕುಮಾರ, ಅವಳನ್ನು ದಕ್ಕಿಸಿಕೊಳ್ಳುವ ಉದ್ದೇಶದಿಂದ ಹೆಣ್ಣಿನ ವೇಷ ಧರಿಸಿಕೊಂಡು ಅವಳ ಮನೆಯಲ್ಲಿ ಕೆಲಸದಾಳು ಆಗಿ ಸೇರಿಕೊಳ್ಳುವುದು, ಅವರಿಬ್ಬರ ನಡುವಿನ ಉತ್ಕಟ ಪ್ರೇಮ–ಕಾಮದಾಟ, ಇದೆಲ್ಲವನ್ನೂ ತಿಳಿದೂ ಸುಮ್ಮನಿರುವ ಗೀತಾಂಜಲಿಯ ಗಂಡ ಮಂದಣ್ಣನ ಮನೋಭಾವ, ‘ನನ್ನ ಮೇಲುಡುಪು ಮಾತ್ರ ಹೆಣ್ಣಿನದು ನಾನು ಹೆಣ್ಣಲ್ಲ, ಗಂಡು’ ಎಂದು ಹೇಳಿಕೊಂಡೇ ಮೋಹನ ಕುಮಾರ ಮಠ ಸೇರಿಕೊಳ್ಳುವುದು, ಮುಂದೆ ಮೋಹನ ಕುಮಾರ ಮತ್ತು ಗೀತಾಂಜಲಿಯ ವ್ಯಕ್ತಿತ್ವ, ಮನೋಭಾವ ಮತ್ತು ಚಿಂತನೆಯಲ್ಲಾಗುವ ಬದಲಾವಣೆ ಅರ್ಥಾತ್‌ ಇಬ್ಬರ ಪರಿವರ್ತನೆಯ ಸನ್ನಿವೇಶಗಳನ್ನು ನಾಟಕ ಒಳಗೊಂಡಿದೆ.

‘ಮನ ಪರಿವರ್ತನೆಯಾದ ಮೋಹನ ಕುಮಾರ, ಗೀತಾಂಜಲಿಯನ್ನು ತನಗೆ ಬದುಕಿನ ವಾಸ್ತವವನ್ನು ಪರಿಚಯ ಮಾಡಿಕೊಟ್ಟ ದಾರಿದೀಪ ಎಂದೂ, ಗುರು ಎಂದೂ ಆರಾಧಿಸುತ್ತಾನೆ. ಹೀಗೊಂದು ಧನಾತ್ಮಕ ಸಂದೇಶವೂ ಈ ನಾಟಕದಲ್ಲಿದೆ. ಪ್ರಸನ್ನ ಅವರ ಮೇಲಿನ ಅಭಿಮಾನ ಮತ್ತು ನಾಟಕದ ವಸ್ತುವಿನ ಕಾರಣಕ್ಕೆ ‘ಪುರುಷಾರ್ಥ’ವನ್ನು ನಿರ್ದೇಶಿಸುವ ಧೈರ್ಯ ಮಾಡಿದೆ’ ಎಂದು ಸಿತಾರಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT