7

ಕೋರಂ ಕೊರತೆ: ಮುಂದೂಡಿದ್ದ ಸಭೆ ಮತ್ತೆ ಮುಂದಕ್ಕೆ

Published:
Updated:

ಚಿತ್ರದುರ್ಗ: ವಾರದ ಹಿಂದೆ ಸದಸ್ಯರ ಕೋರಂ ಕೊರತೆಯ ಕಾರಣ ಗುರುವಾರಕ್ಕೆ ಮುಂದೂಡಲಾಗಿತ್ತು. ಗುರುವಾರವೂ ಕೋರಂ ಕೊರತೆ ಮುಂದುವರಿದಿದ್ದರಿಂದ ಸಭೆಯನ್ನು ಮತ್ತೊಂದು ವಾರ ಮುಂದಕ್ಕೆ  ಹಾಕಲಾಗಿದೆ. ಡಿ.28ಕ್ಕೆ ಸಭೆ ನಡೆಯಲಿದೆ.

ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಮುಂದೂಡಿದ ಸಾಮಾನ್ಯ ಸಭೆಗೆ ಅಧ್ಯಕ್ಷೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಷ್ಟೇ ಬಂದಿದ್ದರು. ಸದಸ್ಯರು ಬಂದಿರಲಿಲ್ಲ. 11.15ರ ನಂತರ ಬಿಜೆಪಿ ಸದಸ್ಯರು, 11.20ರ ಹೊತ್ತಿಗೆ ಕಾಂಗ್ರೆಸ್‌ನ ಕೆಲ ಸದಸ್ಯರು ಆನಂತರ ಪಕ್ಷೇತರ ಸದಸ್ಯರು ಬಂದರು. ಜಿಲ್ಲಾ ಪಂಚಾಯ್ತಿ ಸಿಬ್ಬಂದಿ ಅವರ ಸಹಿ ಪಡೆದರು. 11.30ರ ಹೊತ್ತಿಗೆ 17 ಮಂದಿ ಮಾತ್ರ ಇದ್ದರು. ಮತ್ತೆ ಐದು ನಿಮಿಷದಲ್ಲಿ 8 ಮಂದಿ ಬಂದಿದ್ದಾರೆ.

‘ನಿಯಮಾನುಸಾರ ಸಭೆ ನಡೆಸಲು ನಿಗದಿಪಡಿಸಿದ ಸಮಯದಿಂದ 30 ನಿಮಿಷದ ಒಳಗೆ ಸಭೆಯಲ್ಲಿ 26 ಸದಸ್ಯರ ಕೋರಂ ಇರಬೇಕು. ಈ ಅವಧಿಯಲ್ಲಿ 17 ಸದಸ್ಯರು ಹಾಜರಿ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಕೋರಂ ಕೊರತೆ ಕಾರಣ ಸಭೆಯನ್ನು ಮುಂದೂಡಲಾಗಿದೆ. ಮುಂದೂಡಿದ ಸಭೆಯ ದಿನಾಂಕವನ್ನು ಅಧ್ಯಕ್ಷೆ ತಿಳಿಸುತ್ತಾರೆ’ ಎಂದು ಈ ವೇಳೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ ಪ್ರಕಟಿಸಿದರು. ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದ್ದು, ಮುಂದಿನ ಸಭೆಯನ್ನು ಇದೇ 28ರಂದು ಆಯೋಜಿಸಲಾಗುತ್ತದೆ’ ಎಂದು ಸೌಭಾಗ್ಯ ಬಸವರಾಜನ್ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಅಜ್ಜಪ್ಪ, ಮಹೇಶ್ವರಯ್ಯ ಮತ್ತು ಪಕ್ಷೇತರ ಸದಸ್ಯೆ ಜಯಪ್ರತಿಭಾ ಅವರು ‘ಐದು ನಿಮಿಷ ತಡವಾಗಿ ಬಂದಿದ್ದೇವೆ. ಹಿಂದಿನ ಅದೆಷ್ಟೋ ಸಭೆಗಳಲ್ಲಿ 12 ಗಂಟೆಗೆ ಬಂದವರು ಸಹಿ ಹಾಕಿದ ಉದಾರಣೆ ಇದೆ. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕಾನೂನು ಯಾಕೆ ಮಾಡ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರ, ‘ಸಭೆಗೆ ವಿಳಂಬವಾಗಿ ಬಂದವರಿಗೆ ಹಾಜರಿ ಪುಸ್ತಕಕ್ಕೆ ಸಹಿ ಹಾಕಲು ಅವಕಾಶವಿಲ್ಲ’ ಎಂದರು. ಗದ್ದಲ ಮುಂದುವರಿಯಿತು. ಆಡಳಿತ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆದರು. ಸಿಇಒ ರವಿಂದ್ರ ಸಭೆಯಿಂದ ನಿರ್ಗಮಿಸಿದರು.

ನಂತರ ಅಧ್ಯಕ್ಷೆ ಸೌಭಾಗ್ಯ, ಅಧಿಕಾರಿಗಳನ್ನು ಸಭಾಂಗಣದಲ್ಲಿರುವಂತೆ ಸೂಚಿಸಿ, ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಸದಸ್ಯರೆಲ್ಲ ನಿರ್ಗಮಿಸಿದ ನಂತರ ಸಭೆ ಆರಂಭವಾಯಿತು. ಹೊರಗೆ ಹೋಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ನಾಗೇಂದ್ರನಾಯ್ಕ್, ಸದಸ್ಯರಾದ ಯೋಗೀಶ್ ಬಾಬು, ಶಿವಮೂರ್ತಿ, ಬಿಜೆಪಿಯ ಅಜ್ಜಪ್ಪ, ಗುರುಮೂರ್ತಿ ಮತ್ತಿತರರು ವಾಪಸ್ ಸಭಾಂಗಣಕ್ಕೆ ಬಂದು ‘ಸಾಮಾನ್ಯ ಸಭೆಗೆ ನಮ್ಮ ಸಹಮತವಿಲ್ಲ ಎಂದು ಸಭೆ ಮುಂದೂಡಿದ್ದರೂ ಹೇಗೆ ಅಧಿಕಾರಿಗಳೊಂದಿಗೆ ಸಭೆ

ನಡೆಸುತ್ತೀರಿ?’ ಎಂದು ಪ್ರಶ್ನಿಸಿದರಲ್ಲದೇ ಸಭೆ ನಿಲ್ಲಿಸುವಂತೆ ಒತ್ತಾಯಿಸಿದರು. ಸದಸ್ಯರ ಒತ್ತಡಕ್ಕೆ ಮಣಿದ ಸೌಭಾಗ್ಯ, ಸಭೆ ಸ್ಥಗಿತಗೊಳಿಸಿ, ಕೆಲವು ಅಧಿಕಾರಿಗಳಿಗೆ ತಮ್ಮ ಕಚೇರಿಗೆ ಬರುವಂತೆ ಸೂಚಿಸಿದರು.

ಸಿಇಒ ‘ಕೋರಂ ಕೊರತೆ’ ಪ್ರಕಟಣೆಯ ಚರ್ಚೆ

ಮುಂದೂಡಿದ ಸಾಮಾನ್ಯ ಸಭೆಯಲ್ಲಿ ಕೋರಂ ಕೊರತೆಯನ್ನು ಯಾರಾದರೂ ಸದಸ್ಯರು ಪ್ರಶ್ನಿಸಿದರೆ ಮಾತ್ರ ಸಭೆ ಮುಂದೂಡಬೇಕೆಂದು ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿ ರವೀಂದ್ರ ನಿಯಮಾವಳಿ ಪುಸ್ತಕ ಓದಿ ಹೇಳಿದರು. ಆನಂತರ, ಯಾವ ಸದಸ್ಯರೂ ಕೋರಂ ಕೊರತೆ ಪ್ರಶ್ನಿಸಲಿಲ್ಲ. ಆದರೂ, ರವೀಂದ್ರ ‘ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ’ ಎಂದು ಪ್ರಕಟಿಸಿದರು.

‘ಈ ವಿಷಯದಲ್ಲಿ ಅಧಿಕಾರಿಗಳು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆಯೇ’ ಎಂದು ಸುದ್ದಿಗಾರರು ಅಧ್ಯಕ್ಷೆ, ಸೌಭಾಗ್ಯ ಅವರನ್ನು ಪ್ರಶ್ನಿಸಿದರು. ‘ಹಾಗೇನಿಲ್ಲ. ಅವರೂ ಇಲ್ಲಿಗೆ ಹೊಸಬರು’ಎಂದು ಸೌಭಾಗ್ಯ ಹೇಳಿಕೆ ನೀಡಿದರು.

ಮುಖ್ಯ ಕಾರ್ಯಕ್ರಮ ಅಧಿಕಾರಿ (ಸಿಪಿಒ) ಅವರೊಂದಿಗೆ ಚರ್ಚಿಸಿ, ಈ ಗೊಂದಲಕ್ಕೆ ಸಮರ್ಪಕವಾಗಿ ಉತ್ತರ ನೀಡುವಂತೆ ಒತ್ತಾಯಿಸಿದ ನಂತರ, ಸಿಪಿಓ ಓಂಕಾರಪ್ಪ ನಿಯಮಾವಳಿಗಳನ್ನು ಓದಿದರು. ಆದರೂ ಸಮರ್ಪಕ ಉತ್ತರ ಸಿಗಲಿಲ್ಲ. ಕೊನೆಗೆ ಸೌಭಾಗ್ಯ ಅವರು ಆರ್‌ಡಿಪಿಆರ್ ಅಧಿಕಾರಿಯಿಂದ ಮಾಹಿತಿ ಪಡೆದರು. ‘ನಿಯಮಾವಳಿಗಳ ಬಗ್ಗೆ ನನಗೂ ಗೊಂದಲವಿದೆ. ಮುಂದಿನ ಸಭೆ ವೇಳೆಗೆ ಎಲ್ಲ ನಿಯಮಗಳನ್ನು ಲಿಖಿತ ರೂಪದಲ್ಲಿ ಪಡೆದುಕೊಂಡು ನಿಮಗೆ ತಿಳಿಸುತ್ತೇನೆ’ ಎನ್ನುತ್ತಾ ಚರ್ಚೆಗೆ ತೆರೆ ಎಳೆದರು.

ಸಭೆಗೂ ಮುನ್ನ ‘ಗೌಪ್ಯ ಸಭೆ’

ಮುಂದೂಡಲಾದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನವೇ ಆಡಳಿತಾ ರೂಢ ಜಿಲ್ಲಾ ಪಂಚಾಯ್ತಿ ಸದಸ್ಯರು ಜಿಲ್ಲಾ ಪಂಚಾಯ್ತಿ ಕಟ್ಟಡದ ಆವರಣದಲ್ಲಿರುವ ಸಂಸದ ಬಿ.ಎನ್. ಚಂದ್ರಪ್ಪ ಅವರ ಕಚೇರಿಯಲ್ಲಿ ಸಭೆ ಸೇರಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ವಿಚಾರವನ್ನೂ ಚರ್ಚೆ ಮಾಡಿದರು ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry