ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಣ್ಣೆ ಬೀಜ ಉತ್ಪಾದನೆ: ತೃಪ್ತಿದಾಯಕ ಪ್ರಗತಿ

Last Updated 22 ಡಿಸೆಂಬರ್ 2017, 8:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ವರ್ಷಗಳ ಬರಗಾಲದ ನಡುವೆಯೂ ರಾಜ್ಯದಲ್ಲಿ ಎಣ್ಣೆ ಕಾಳು ಉತ್ಪಾದನೆ ಮತ್ತು ಕ್ಷೇತ್ರ ವಿಸ್ತರಣೆಯಲ್ಲಿ ತೃಪ್ತಿದಾಯಕ ಸಾಧನೆಯಾಗಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಬಿ.ಕೆ.ಶ್ರೀವಾಸ್ತವ ತಿಳಿಸಿದರು.

ಶೇಂಗಾ ಬೆಳೆಯುವ ಹಿರಿಯೂರು, ಮರಡಿಹಳ್ಳಿ, ತಾಳವಟ್ಟಿ, ಐಮಂಗಲಕ್ಕೆ ಭೇಟಿ ನೀಡಿದ ನಂತರ ಗುರುವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘2014–15ರಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ರಾಷ್ಟ್ರೀಯ ಎಣ್ಣೆ ಬೀಜ ಮತ್ತು ಪಾಮ್ ಆಯಿಲ್ ಮಿಷನ್ ಅನುಷ್ಠಾನಗೊಳಿಸಿದ ನಂತರ, ಎಣ್ಣೆಬೀಜ ಪ್ರದೇಶ ವಿಸ್ತರಣೆ ಮತ್ತು ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ. ಎಣ್ಣೆಬೀಜ ಬೆಳೆಯುವ ಕೃಷಿಕರನ್ನು ಉತ್ತೇಜಿಸಲು ವಿವಿಧ ಹಂತಗಳಲ್ಲಿ ನೆರವು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಳು ವರ್ಷಗಳಿಂದ ಎಣ್ಣೆ ಬೀಜ ಉತ್ಪಾದನೆಯಲ್ಲಿ ತೃಪ್ತಿಕರ ಸಾಧೆನೆಯಾಗಿದೆ’ ಎಂದು ತಿಳಿಸಿದರು.

ಏಳು ವರ್ಷಗಳ ಸರಾಸರಿ ಮಾಹಿತಿ ಪ್ರಕಾರ ರಾಜ್ಯದಲ್ಲಿ 13.81 ಲಕ್ಷ ಹೆಕ್ಟೇರ್‌ನಷ್ಟು ಎಣ್ಣೆಕಾಳು ಬೆಳೆಯುವ ಪ್ರದೇಶವಿತ್ತು. 2016ರಲ್ಲಿ ಆ ಪ್ರದೇಶ 13 ಲಕ್ಷ ಹೆಕ್ಟೇರ್ ಪ್ರದೇಶದಷ್ಟು ಉಳಿದುಕೊಂಡಿದೆ. ಎರಡು ವರ್ಷಗಳ ಬರಗಾಲದ ನಡುವೆಯೂ ಎಣ್ಣೆ ಕಾಳು ಬೆಳೆಯುವ ಪ್ರದೇಶ ಕುಸಿದಿಲ್ಲ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಏಳು ವರ್ಷಗಳಲ್ಲಿ ಸರಾಸರಿ ವಾರ್ಷಿಕ 9.46 ಲಕ್ಷ ಟನ್ ಎಣ್ಣೆಕಾಳು ಉತ್ಪಾದನೆಯಾಗಿದೆ. 2016ರಲ್ಲಿ ವಾರ್ಷಿಕ 7.5 ಲಕ್ಷ ಟನ್ ಉತ್ಪಾದನೆಗೆ ಇಳಿದಿದೆ. ಮೊದಲು ಹೆಕ್ಟೇರ್‌ಗೆ 685 ಕೆ.ಜಿ ಉತ್ಪಾದನೆಯಾಗುತ್ತಿತ್ತು, ಕಳೆದ ವರ್ಷ 600 ಕೆ.ಜಿಗೆ ಇಳಿದಿದೆ. ಎಣ್ಣೆಕಾಳು ಕೃಷಿಗೆ ವಿವಿಧ ಹಂತಗಳಲ್ಲಿ ಮಿಷನ್ ನೀಡುತ್ತಿರುವ ಸೌಲಭ್ಯಗಳಿಂದಾಗಿ ತೃಪ್ತಿದಾಯಕ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು. ‌

ಕೇಂದ್ರ ಸರ್ಕಾರದ ಎಣ್ಣೆಬೀಜ ಮತ್ತು ಪಾಮ್ ಆಯಿಲ್ ಮಿಷನ್ ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರಲ್ಲಿ ಎಣ್ಣೆಕಾಳುಗಳ ಉತ್ಪಾದನೆ, ಬೆಳವಣಿಗೆ ಪ್ರದೇಶ ವಿಸ್ತರಣೆಗೆ ಉತ್ತೇಜನ. ತಾಳೆ ಮರಗಳನ್ನು ಬೆಳೆಸಲು ಮತ್ತು ಮರಗಳ ನಡುವೆ ಶುಂಠಿ, ಅರಿಶಿಣದಂತಹ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಸಲು ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ಮಿನಿ ಮಿಷನ್ 1 , 2, ಮತ್ತು 3 ಎಂದು ಹೆಸರಿಸಲಾಗಿದೆ ಎಂದರು.

ಹೊಳಲ್ಕೆರೆ ಸಹಾಯಕ ಕೃಷಿ ನಿರ್ದೇಶಕ ಕೆಂಗೇಗೌಡ, ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಕೃಷಿ ಅಧಿಕಾರಿ ಪ್ರಸನ್ನ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT