7

ಇದು ‘ಸ್ವರ್ಗದ ಮೃಷ್ಟಾನ್ನ’

Published:
Updated:
ಇದು ‘ಸ್ವರ್ಗದ ಮೃಷ್ಟಾನ್ನ’

ನಗರದ ವಿಠ್ಠಲ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಶಾಲೆ ಆವರಣದಲ್ಲಿ ನಡೆಯುತ್ತಿರುವ 43ನೇ ವಾರ್ಷಿಕ ಕೇಕ್ ಉತ್ಸವವು ತಿಂಡಿಪ್ರಿಯರ ಸ್ವರ್ಗದಂತಿದೆ. ಬಹು ವಿನ್ಯಾಸದ ಕೇಕ್‌ಗಳನ್ನು ಕಣ್ತುಂಬಿಕೊಂಡು ಮುಂದಡಿ ಇಡುತ್ತಿದ್ದಂತೆ, ವಿವಿಧ ತಿನಿಸುಗಳ ಘಮ ನಾಲಿಗೆಯ ರುಚಿ ಮೊಗ್ಗುಗಳನ್ನು ಅರಳಿಸುತ್ತದೆ. ಎಲ್ಲ ತಿನಿಸು ಘಮಗಳ ನಡುವೆಯೂ ಬರಸೆಳೆಯುವುದು ಪುಳಿಯೋಗರೆ ಸುವಾಸನೆ.

ಪುಳಿಯೋಗರೆ ಘಮದ ಬೆನ್ನತ್ತಿ ಮಳಿಗೆಯುತ್ತ ಸಾಗುತ್ತಿದ್ದಂತೆ ‘ರೀ ಸ್ವಾಮಿ ಒಂದ್ಸಲ ರುಚಿ ನೋಡ್ರಿ ಇದು ಸ್ವರ್ಗ ಲೋಕದ ಮೃಷ್ಟಾನ್ನ, ಇಷ್ಟವಾಗದಿದ್ದರೆ ಹಣ ವಾಪಸ್‌’ ಎಂಬ ಆಕರ್ಷಕ ಶೀರ್ಷಿಕೆಯೊಂದು ಆಪ್ತವಾಗಿ ಸ್ವಾಗತಿಸುತ್ತದೆ. ಮೇಲುಕೋಟೆಗೆ ಹೋಗಿ ಅಲ್ಲಿನ ಇತಿಹಾಸ ಪ್ರಸಿದ್ಧ ಪುಳಿಯೋಗರೆ, ಸಕ್ಕರೆ ಪೊಂಗಲ್ ಸವಿಯಬೇಕು ಎಂಬ ಬಯಕೆ ಹೊತ್ತವರ ಆಸೆಗೆ ನೀರೆರೆಯುವಂತಿದೆ ಅನ್ನಪೂರ್ಣೇಶ್ವರಿ ಮಳಿಗೆ.

ಆದರದಿಂದ ಬರಮಾಡಿಕೊಳ್ಳುವ ಮಳಿಗೆಯ ಮಾಲೀಕರಾದ ರಮೇಶ್ ಹಾಗೂ ಗೀತಾ ನಗುಮೊಗದೊಂದಿಗೆ ಏನು ಬೇಕು ಎಂದು ಪ್ರಶ್ನಿಸುತ್ತಾರೆ. ಮಳಿಗೆಯಲ್ಲಿ ಪುಳಿಯೋಗರೆ, ಸಕ್ಕರೆ ಪೊಂಗಲ್, ಖಾರ ಪೊಂಗಲ್ ಜೊತೆಗೆ ಮೊಸರನ್ನ ಸಿಗುತ್ತದೆ. ಆದರೆ, ಅವುಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದು ಪೋಳಿಯೋಗರೆ ಹಾಗೂ ಸಕ್ಕರೆ ಪೊಂಗಲ್‌ಗೆ.

ಶೇಂಗಾ, ಗೋಡಂಬಿ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿಗಳಿಂದ ಅಲಂಕೃತಗೊಂಡ ಆಕರ್ಷಕ ವರ್ಣದ ಪುಳಿಯೋಗರೆ ನೋಡುತ್ತಿದ್ದಂತೆ ಬಾಯಲ್ಲಿ ನೀರೂರಿತ್ತು. ಪುಳಿಯೋಗರೆ ತಟ್ಟೆಯು ಕೈಸೇರುತ್ತಿದ್ದಂತೆ ಹೆಚ್ಚು ಸಮಯ ಕಾಯಲಾರದೆ ಬಾಯಿಗಿಟ್ಟರೆ, ಕರಿಬೇವು, ಜೀರಿಗೆ, ಸಾಸಿವೆ ಹಾಗೂ ಎಳ್ಳಿನ ಘಮ ಬಾಯಿಯನ್ನು ಆವರಿಸಿತ್ತು. ಬೆಲ್ಲ ಹಾಗೂ ಹುಣಸೆಹಣ್ಣಿನ ಹದವಾದ ಮಿಶ್ರಣ, ನಡುವಿನಲ್ಲಿ ಸಿಗುವ ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ಶೇಂಗಾಗಳು ಬೇರೊಂದು ರುಚಿಯ ಅನುಭವ ನೀಡುತ್ತಿತ್ತು. ಇದುವರೆಗೂ ಸವಿದ ಪುಳಿಯೋಗರೆಯ ರುಚಿಯನ್ನು ಮರೆಸಿ, ಇದೇ ಸ್ವಾದ ನಾಲಿಗೆಯಲ್ಲಿ ಶಾಶ್ವತವಾಗಿ ನೆಲೆಸುವಂತಿತ್ತು.

ಉಪ್ಪು, ಖಾರ ಮತ್ತು ಹುಳಿಯ ಹದ ಮಿಳಿತದಂತಿದ್ದ ಪುಳಿಯೋಗರೆ ತಿಂದು ಮುಗಿಸುತ್ತಿದ್ದಂತೆ, ಸಕ್ಕರೆ ಪೊಂಗಲ್‌ ತಂದು ‘ನಮ್ಮ ಮೇಲುಕೋಟೆಯ ವಿಶೇಷ ಸಕ್ಕರೆ ಪೊಂಗಲ್ ರುಚಿ ನೋಡ್ರಿ’ ಎಂದು ರಮೇಶ್‌ ಸಿಹಿ ಪೊಂಗಲ್ ನೀಡಿದರು. ತುಪ್ಪದ ಸುವಾಸನೆಯಿಂದ ಘಮಿಸುತ್ತಿದ್ದ ಸಿಹಿ ಪೊಂಗಲ್‌ನ್ನು ಬೇಡ ಎನ್ನಲು ಮನಸಾಗಲಿಲ್ಲ. ಏಲಕ್ಕಿ ಘಮ, ಹದ ಸಿಹಿ, ಹೆಸರುಬೇಳೆ ಸವಿ, ತಿನ್ನುವಾಗ ನಡುವೆ ಸಿಗುವ ಒಣಕೊಬ್ಬರಿ ಚೂರು ಮತ್ತು ಗೋಡಂಬಿ ಪೊಂಗಲ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸಿದ್ದವು.

ಮೇಳದಲ್ಲಿ ಪುಳಿಯೋಗರೆ ಹಾಗೂ ಸಕ್ಕರೆ ಪೊಂಗಲ್‌ನ ರುಚಿ ಸವಿದ ಯಾರೂ ಬರಿಗೈನಲ್ಲಿ ತರೆಳುವ ನೋಟಗಳೇ ಇರಲಿಲ್ಲ. ಪುಳಿಯೋಗರೆ ಗೊಜ್ಜು, ಪುಡಿಗಳ ಖರೀದಿಯಲ್ಲಿ ಕೆಲವರು ನಿರತರಾದರೆ, ಮತ್ತೆ ಹಲವರು ರುಚಿಯನ್ನು ಪ್ರಶಂಶಿಸುತ್ತಾ ಮಾಡುವ ಬಗಯನ್ನು ಪ್ರಶ್ನಿಸುತ್ತಿದ್ದರು.

ರಮೇಶ್‌, ಮಾಲಿಕ

ರಮೇಶ್ ಅವರದ್ದು, ಅಡುಗೆ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ. ಅವರ ತಾಯಿಯು ಮೇಲುಕೋಟೆಯ ಸಾಂಪ್ರದಾಯಿಕ ಶೈಲಿಯ ಅಡುಗೆ ತಯಾರಿಯಲ್ಲಿ ಎತ್ತಿದ ಕೈ. ಅವರಿಂದ ಬಳುವಳಿಯಾಗಿ ಬಂದ ವಿದ್ಯೆಯನ್ನು ರೂಢಿಸಿಕೊಂಡು ಯಶಸ್ವಿಯಾಗಿರುವ ರಮೇಶ್, ರಾಜ್ಯದ ವಿವಿಧೆಡೆಗಳಲ್ಲಿ ನಡೆಯುವ ಆಹಾರ ಮೇಳಗಳಲ್ಲಿ ಪಾಲ್ಗೊಳ್ಳುತ್ತಾರೆ.

‘ನನ್ನ ತಾಯಿ ಹೇಳಿಕೊಟ್ಟ ರೀತಿಯಲ್ಲಿಯೇ ಪುಳಿಯೋಗರೆ ತಯಾರಿಸುತ್ತಿದ್ದೇನೆ. ಗುಣ ಹಾಗೂ ಪ್ರಮಾಣದಲ್ಲಿ ಯಾವುದೇ ರಾಜಿಯಾಗಿಲ್ಲ. ಹಾಗಾಗಿಯೇ ಸಾಂಪ್ರದಾಯಿಕ ರುಚಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಐದು ಕೆ.ಜಿ. ಸಕ್ಕರೆ ಪೊಂಗಲ್ ತಯಾರಿಸಲು 6 ಗಂಟೆ ಬೇಕಾಗುತ್ತದೆ. ಆಹಾರಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ತಯಾರಿಯಲ್ಲಿನ ದಣಿವು ನೆನಪಾಗುವುದಿಲ್ಲ’ ಎನ್ನುವುದು ರಮೇಶ್ ಅವರ ಸಂತಸದ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry