7

‘ರಾಜಧಾನಿಯಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣ’

Published:
Updated:

ಕೊಳ್ಳೇಗಾಲ: ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು ಹಾಗೂ ಸೇವಾ ಮನೋಭಾವ ರೂಡಿಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.

ನಗರದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಮಾನಸೋತ್ಸವ ಹಾಗೂ ಆರ್. ಸಿದ್ದೇಗೌಡ ಸ್ಮರಣಾರ್ಥ ಮಾನಸ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹೆಚ್ಚು ಕಾಳಜಿ ವಹಿಸಿಬೇಕು. ಸುಮಾರು 2 ಸಾವಿರ ವರ್ಷಗಳ  ಇತಿಹಾಸವಿರುವ ಭಾಷೆಯನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಇಂದು ಕನ್ನಡಿಗರ ಸಂಖ್ಯೆ ಕಡಿಮೆ ಆಗಿರುವುದು ಆತಂಕಕಾರಿ ಸಂಗತಿ ಎಂದರು.

ಬೆಂಗಳೂರಿನಲ್ಲಿ ‘ಇಂಧನ ಉಳಿಸಿ’ ಎಂಬ ನಾಮ ಫಲಕಗಳನ್ನು ಹಾಕುವ ಬದಲು ‘ಕನ್ನಡವನ್ನು ಉಳಿಸಿ’ ಎಂಬ ಫಲಕ ಹಾಕಬೇಕೆಂದು ಹೇಳಿದರು. ‘ದೇವರೆ ಅಗಾಧ ನಿನ್ನ ಕರುಣೆಯ ಕಡಲು ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಗೀತೆ ಹಾಡಿದರು.

‘ಡಾ.ಸಿ.ಎನ್.ಮಂಜುನಾಥ್‌ ಅವರು ಹೃದ್ರೋಗ ತಜ್ಞರಾದರೆ, ನಾನು ಕಾವ್ಯದ ಹೃದಯ ತಜ್ಞ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆರ್. ಸಿದ್ದೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ತಾರತಮ್ಯವಿಲ್ಲದ ಶಿಕ್ಷಣವನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಮಾಡಬೇಕು. ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಹಣ ಮತ್ತು ಅಧಿಕಾರವನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ಸೇವಾ ಮನೋಭಾವ ರೂಢಿಸಿಕೊಂಡಾಗ ನಮ್ಮ ಪದವಿ ಪಾರಿತೋಷಕಗಳಿಗೆ ಮೌಲ್ಯವಿರುತ್ತದೆ ಎಂದರು.

ಹೃದಯ ಭೌಗೋಳಿಕವಾಗಿ ಚಿಕ್ಕದಾಗಿರಬೇಕು. ಆದರೆ ಸಾಮಾಜಿಕವಾಗಿ ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ದೊಡ್ಡದಾಗಿರಬೇಕು. ಆಗ ನಾವು ಸಮಾಜ ಸೇವೆಗೆ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲಿನ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯವೇ ಹೊರತು ಸರ್ಕಾರದ ಕರ್ತವ್ಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಯಮದೂರು ಸಿದ್ದರಾಜು, ಕೆ.ಕೆ.ನಟರಾಜು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry