7

ಪರಿವರ್ತನಾ ಯಾತ್ರೆಗೆ ಕಾಂಗ್ರೆಸ್‌ ತತ್ತರ

Published:
Updated:
ಪರಿವರ್ತನಾ ಯಾತ್ರೆಗೆ ಕಾಂಗ್ರೆಸ್‌ ತತ್ತರ

ಗದಗ: ‘ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ರೈತರು ಮತ್ತು ನೇಕಾರರ ಅಭಿವೃದ್ಧಿಗಾಗಿ ಆವರ್ತ ನಿಧಿ ಸ್ಥಾಪಿಸುವುದಾಗಿ’ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಇಲ್ಲಿನ ಮಾಳಗೊಂಡ ಸೊಸೈಟಿ ಆವರಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಅಂಗವಾಗಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಪರಿವರ್ತನಾ ಯಾತ್ರೆಯ ಜನ ಬೆಂಬಲಕ್ಕೆ ತತ್ತರಿಸಿರುವ ಸಿದ್ದರಾ ಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಪ್ರತ್ಯೇಕವಾಗಿ ಯಾತ್ರೆ ಮಾಡುತ್ತಿದ್ದಾರೆ. ತಾವು ಹೋದ ಕಡೆ ಹರಕು ಸೀರೆ, ಮುರುಕು ಸೈಕಲ್ ಎಂದು ಟೀಕಿಸುತ್ತಿರುವ ಸಿದ್ದರಾಮಯ್ಯನವರು, ಗದಗ ಜಿಲ್ಲೆ ಸೇರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ, ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ಅವಧಿಗೆ ಹೋಲಿಕೆ ಮಾಡಿ ದಾಖಲೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪ್ರಧಾನಿ ಅವರ ಕಾಲು ಬಿದ್ದಾದರೂ ₹ 1 ಲಕ್ಷ ಕೋಟಿ ಅನುದಾನ ತರುವುದಾಗಿ ಪುನರುಚ್ಚರಿಸಿದರು.

‘ಕಾಂಗ್ರೆಸ್‌ನವರು ಮಹದಾಯಿ ಸಮಸ್ಯೆಯನ್ನು ಮುಂದಿನ ಚುನಾವಣೆವರೆಗೆ ಜೀವಂತವಾಗಿರಿಸುವ ಉದ್ದೇಶ ಹೊಂದಿದ್ದರು. ಆದರೆ, ಈಗ ಅದಕ್ಕೆ ಪರಿಹಾರ ಲಭಿಸಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಹಿಂದೆ ‘ಕೃಷ್ಣೆಯ ಕೂಗು’ ಎಂಬ ಪುಸ್ತಕ ಬರೆದಿದ್ದ ಸಚಿವ ಎಚ್.ಕೆ. ಪಾಟೀಲರಿಗೆ ಈಗೆಲ್ಲಿ ಹೋಯಿತು ಆ ಕಾಳಜಿ, ಗದುಗಿನಲ್ಲಿ 24x7 ನೀರು ಕೊಡುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದೀರಿ, ಆದರೆ, ಇನ್ನೂ ಅರ್ಧದಷ್ಟು ವಾರ್ಡ್‌ಗಳಲ್ಲಿ 15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಅದೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರ ವರೆಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಚುಚ್ಚಿದರು.

‘₹ 5ರಿಂದ ₹ 6 ಲಕ್ಷದಲ್ಲಿ ಸ್ಥಾಪಿಸಬಹುದಾದ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ತಲಾ ₹ 12 ಲಕ್ಷ ವೆಚ್ಚ ಮಾಡಲಾಗಿದೆ. ಇದನ್ನು ತಮಗೆ ಬೇಕಿರುವ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ರಾಜ್ಯದಲ್ಲಿ ಸ್ಥಾಪಿಸಿರುವ ಮೂರು ಸಾವಿರ ಶುದ್ದ ನೀರಿನ ಘಟಕಗಳಲ್ಲಿ ಈಗ ಕೇವಲ 100 ರಿಂದ 200 ಮಾತ್ರ ಸುಸ್ಥಿತಿಯಲ್ಲಿವೆ’ ಎಂದು ಹರಿಹಾಯ್ದರು. ಬಿಜೆಪಿ ಸರ್ಕಾರದಲ್ಲಿ ಶ್ರೀರಾಮುಲು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಎಚ್‌.ಕೆ ಪಾಟೀಲರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು’ಎಂದು ತಿವಿದರು.

‘ಗದಗ ನಗರಸಭೆಗೆ ಕೇಂದ್ರದಿಂದ ₹ 169 ಕೋಟಿ ಅನುದಾನ ಬಿಡುಗಡೆ ಆಗಿದೆ. ಇದರಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಶಿವಕುಮಾರ ಉದಾಸಿ ಹೇಳಿದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಲಕ್ಷ್ಮಣಸವದಿ, ಕಳಕಪ್ಪ ಬಂಡಿ ಮಾತನಾಡಿದರು.

ಪ್ರಸ್ತಾಪಿಸದ ಅಭ್ಯರ್ಥಿ ಹೆಸರು: ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಆಯಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಹೆಸರು ಹೇಳುತ್ತಿದ್ದ ಬಿ.ಎಸ್. ಯಡಿಯೂರಪ್ಪನವರು, ಗದುಗಿನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಇದರಿಂದ ಅಭ್ಯರ್ಥಿ ಆಕಾಂಕ್ಷಿಗಳ ಬೆಂಬಲಿಗರಿಗೆ ಕೊಂಚ ನಿರಾಸೆಯಾಯಿತು.

ಎಚ್.ಕೆ. ಪಾಟೀಲರಿಂದ ಇದನ್ನು ನಿರೀಕ್ಷಿಸಿರಲಿಲ್ಲ: ಸಿ.ಎಂ. ಉದಾಸಿ

ಸಭೆಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ, ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಲಕ್ಷ್ಮಣ ಸವದಿ, ಕಳಕಪ್ಪ ಬಂಡಿ ಸೇರಿದಂತೆ ಬಿಜೆಪಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಮಹದಾಯಿ ವಿಷಯದಲ್ಲಿ ಗೋವಾ ಮುಖ್ಯಮಂತ್ರಿ ಬರೆದಿರುವ ಪತ್ರವನ್ನು ಸ್ವಾಗತಿಸಿ, ಸಹಕಾರದ ಮಾತುಗಳನ್ನಾಡುವ ಬದಲು ಜಿಲ್ಲಾ ಉಸ್ತುವಾರಿ ಸಚಿವರು ಟೀಕೆ– ಟಿಪ್ಪಣಿಗೆ ಮುಂದಾಗಿದ್ದಾರೆ. ಅನುಭವಿ, ಹಿರಿಯ ಸಚಿವರಾದ ಎಚ್.ಕೆ. ಪಾಟೀಲರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಗದುಗಿನಲ್ಲಿ ಮೊದಲು 40 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಬಿಜೆಪಿ ಪ್ರತಿಭಟನೆ ನಡೆಸಿದ ನಂತರ ಈಗ ವಾರಕ್ಕೊಮ್ಮೆ ನೀರು ಕೊಡುತ್ತಾ ಇದ್ದೀರಿ. ನಿಮಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯಾ’ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಎಲ್ಲಿದೆ ಹನುಮಂತಗೌಡ್ರ ಹೈಟೆಕ್ ಶೌಚಾಲಯ: ಸವದಿ ವ್ಯಂಗ್ಯ

ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಸಚಿವ ಎಚ್.ಕೆ. ಪಾಟೀಲ ಅವರನ್ನು ಮಾತು– ಮಾತಿಗೂ ಹನಮಂತಗೌಡ್ರ ಎಂದೇ ಸಂಬೋಧಿಸುತ್ತ, ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಹನುಮಂತಗೌಡ್ರು ಇಡೀ ರಾಜ್ಯದ ತುಂಬೆಲ್ಲಾ ಹೈಟೆಕ್ ಶೌಚಾಲಯ ಕಟ್ಟಿಸುತ್ತೇನೆ ಎಂದಿದ್ದರು. ಆದರೆ, ಎಲ್ಲಿದೆ ಹೈಟೆಕ್‌ ಶೌಚಾಲಯ, ಅದು ಅವರ ಹುಲಕೊಟಿಯ ಮನೆಯಲ್ಲಿ ನಿರ್ಮಿಸಿಕೊಂಡಿದ್ದಾರೆ ಎಂದರು.

ಗದಗ–ಬೆಟಗೇರಿ ಅವಳಿ ನಗರದಲ್ಲಿ ಆಗಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ಗೌಡ್ರು ತಮ್ಮದೇ ಸಾಧನೆ ಎನ್ನುತ್ತಿದ್ದಾರೆ. ಹಾದಿಯಲ್ಲಿ ಹೋಗುವ ಹುಡುಗನಿಗೆ ಇವನು ನನ್ನ ಮಗ ಎಂದರೆ, ಅವರಪ್ಪ ನಿಮ್ಮನ್ನು ಸುಮ್ಮನೆ ಬಿಡುತ್ತಾನೆಯೇ ಎಂದು ಪ್ರಶ್ನಿಸಿದರು. ನಿಮ್ಮ ಅವಧಿಯಲ್ಲಿ ನೀವು ಮಾಡಿರುವ ಅಭಿವೃದ್ಧಿಯನ್ನು ಮಾತ್ರ ನಿಮ್ಮವು ಎಂದು ಕರೆದುಕೊಳ್ಳಿ. ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಕೇಂದ್ರದ್ದೂ ಅಂತಲೂ ಹೇಳಬೇಕು’ ಎಂದು ವ್ಯಂಗ್ಯವಾಡಿದರು.

* * 

ರಾಜ್ಯದಲ್ಲಿ ಅಕ್ರಮ ಮರಳು ದಂಧೆ ಮುಕ್ತವಾಗಿ ನಡೆಯುತ್ತಿದೆ. 2018ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದಕ್ಕೆ ಕಡಿವಾಣ ಹಾಕುತ್ತೇವೆ

ಜಗದೀಶ ಶೆಟ್ಟರ್

ವಿಧಾನಸಭೆ ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry