7

ಪೈಶಾಚಿಕ ಕೃತ್ಯಕ್ಕೆ ಖಂಡನೆ; ವಿಜಯಪುರ ಸ್ತಬ್ಧ

Published:
Updated:
ಪೈಶಾಚಿಕ ಕೃತ್ಯಕ್ಕೆ ಖಂಡನೆ; ವಿಜಯಪುರ ಸ್ತಬ್ಧ

ವಿಜಯಪುರ: ದಲಿತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವಿಜಯಪುರ ಹಾಗೂ ಸಿಂದಗಿಯಲ್ಲಿ ಶನಿವಾರ ನಡೆದ ಬಂದ್‌ ವೇಳೆ, ತೀವ್ರ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಯಿತು. ನಗರದ ಇಂಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಳ್ಳಾರಿ ವಿಭಾಗದ ಬಸ್ಸೊಂದರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದರು.

ನಸುಕಿನಿಂದಲೇ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಅಂಗಡಿ– ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಆಟೊ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಂಗಳೂರು, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ–ಧಾರವಾಡದಿಂದಲೂ ಪ್ರತಿಭಟನಾಕಾರರು ವಿಜಯಪುರಕ್ಕೆ ಬಂದು, ಬಂದ್‌ನಲ್ಲಿ ಭಾಗವಹಿಸಿದರು. ತಮಟೆ ಬಾರಿಸಿ, ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಆಕ್ರೋಶಹೊರಹಾಕಿದರು

ನಗರದ ಗಲ್ಲಿಗಲ್ಲಿಯ ರಸ್ತೆಗಳಲ್ಲಿ ಟೈರ್‌ ಸುಟ್ಟರು. ಕಲ್ಲುಗಳನ್ನು ಅಡ್ಡವಾಗಿಟ್ಟು ಸಂಚಾರ ತಡೆದರು. ಯುವಕರು ಬೈಕ್‌ಗಳಲ್ಲಿ ಸಂಚರಿಸಿ, ಘೋಷಣೆಗಳನ್ನು ಕೂಗಿದರು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿದ್ದರೆ, ಇಲ್ಲಿನ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದ ವಿವಿಧೆಡೆ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಜಮಾಯಿಸಿ, ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ಪ್ರತಿಭಟಿಸಿದರು.

ಮೈಕ್‌ ಕಸಿದುಕೊಂಡರು: ಸ್ಥಳಕ್ಕೆ ಬಂದ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಲು ಮೈಕ್‌ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆಯೇ, ಸಂಘಟಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಇದು ರಾಜಕೀಯೇತರ ಸಂಘಟನೆಗಳ ಪ್ರತಿಭಟನೆ. ನಿಮಗೆ ಇಲ್ಲಿ ಅವಕಾಶವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳ ಕೆಲವರು, ಅಧಿಕಾರಿಗಳು ಹಾಗೂ ರಾಜಕೀಯ ನೇತಾರರ ಹೆಸರು ಪ್ರಸ್ತಾಪಿಸಿ ಮಾತನಾಡಿದ್ದಕ್ಕಾಗಿ ಸ್ಥಳೀಯ ಸಂಘಟನೆಗಳ ಮುಖಂಡರು ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಬಸನಗೌಡ ಪಾಟೀಲ ಯತ್ನಾಳ, ಅರುಣ ಶಹಾಪುರ, ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಿಬಿಐ ತನಿಖೆಗೆ ಆಗ್ರಹ: ಬಿಜೆಪಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಸಿಐಡಿ ತನಿಖೆ ಮೇಲೆ ವಿಶ್ವಾಸವಿಲ್ಲ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಮೇಶ ಜಿಗಜಿಣಗಿ ಒತ್ತಾಯಿಸಿದರು. ಸಂತ್ರಸ್ತೆಯ ಕುಟುಂಬಕ್ಕೆ ಬಿಜೆಪಿ ವತಿಯಿಂದ ₹ 1 ಲಕ್ಷ ಮೊತ್ತದ ಪರಿಹಾರ ಚೆಕ್‌ ವಿತರಿಸಿದ ಮಾತನಾಡಿದ ಸಚಿವರು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆದ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿದರು.

ಉತ್ತರ ವಲಯ ಐಜಿಪಿ ರಾಮಚಂದ್ರರಾವ್‌ ಸಂತ್ರಸ್ತ ಬಾಲಕಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು. ‘ಇದೊಂದು ಸೂಕ್ಷ್ಮ ಪ್ರಕರಣ. ಬಂಧಿತರ ವಿಚಾರಣೆ ನಡೆದಿದೆ. ತನಿಖೆ ಪೂರ್ಣಗೊಳ್ಳುತ್ತಿದ್ದಂತೆ ಮಾಹಿತಿ ನೀಡುತ್ತೇವೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ನಿರ್ಣಯ ಅಂಗೀಕಾರ

‘ಪ್ರಕರಣದ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ತಿಂಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಿ, ಆರೋಪಿಗಳಿಗೆ ಜಾಮೀನು ಸಿಗದಂತೆ ಮಾಡಬೇಕು

ಕಾಲಮಿತಿಯೊಳಗೆ ವಿಚಾರಣೆ ಪೂರ್ಣಗೊಂಡು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳ ರಕ್ಷಣೆಗೆ ಮುಂದಾಗುವವರನ್ನು ಗುರುತಿಸಿ ಗಡಿಪಾರು ಮಾಡಬೇಕು. ಮತಾಂಧ ಸಂಘಟನೆಗಳನ್ನು ನಿಷೇಧಿಸಿ. ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾರೆ ಎನ್ನಲಾದ ಎಸ್‌ಪಿ, ತನಿಖಾಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಸಂತ್ರಸ್ತೆಯ ಕುಟುಂಬಕ್ಕೆ, ಮುಖ್ಯ ಸಾಕ್ಷಿಗೆ ರಕ್ಷಣೆ ನೀಡಬೇಕು. ಇಂಥ ಘಟನೆ ಮರುಕಳಿಸದಂತೆ ಕಠಿಣ ಕಾನೂನು ರೂಪಿಸಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

* * 

ಇಂಥ ಘಟನೆಗಳು ಎಂದೆಂದೂ ಮರುಕಳಿಸಬಾರದು. ಆರೋಪಿಗಳ ಮರ್ಮಾಂಗ ಕತ್ತರಿಸಿ ಹಾಕುವುದೇ ಕಠಿಣ ಶಿಕ್ಷೆ

ಶೈಲಾ ಸ್ಥಾವರಮಠ, ಹಿಂದೂ ಜಾಗರಣಾ ವೇದಿಕೆಯ ಸಿಂದಗಿ ಮಹಿಳಾ ಘಟಕದ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry