ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಂದು ಸಿಎಂ ಮನೆಗೆ ಮುತ್ತಿಗೆ

Last Updated 24 ಡಿಸೆಂಬರ್ 2017, 6:06 IST
ಅಕ್ಷರ ಗಾತ್ರ

ಯಾದಗಿರಿ: ‘ಸದಾಶಿವ ಆಯೋಗ ವರದಿ ಅವೈಜ್ಞಾನಿಕವಾಗಿದ್ದು, ಸರ್ಕಾರ ಈ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಡಿ.29ರಂದು ಬೆಂಗಳೂರಿನಲ್ಲಿನ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ರಾಠೋಡ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ 101 ಶೋಷಿತ ಸಮುದಾಯಗಳಿವೆ. ಈ ಎಲ್ಲ ಸಮುದಾಯಗಳಿಗೆ ಸಾಂವಿಧಾನಿಕ ಕರಡು ರಚನೆ ಸಂದರ್ಭದಲ್ಲೇ ಮೀಸಲಾತಿ ಹಕ್ಕು ನೀಡಲಾಗಿದೆ. ರಾಜ್ಯದಲ್ಲಿ 1976ರಲ್ಲಿ ಬಿಟ್ಟು ಹೋಗಿದ್ದ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿನ ಶೋಷಿತ ಸಮುದಾಯಗಳಿಗೆ ಸಾಂವಿಧಾನಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಸತ್ಯ ಏನು ಎಂಬುದು ಅರಿಯದೇ ನ್ಯಾಯಮೂರ್ತಿ ಸದಾಶಿವ ಅವರು ಶೋಷಿತ ಸಮುದಾಯಗಳಲ್ಲಿ ವಿಂಗಡನೆ ಮಾಡಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮೈಸೂರು ಅರಸರ ಆಡಳಿತ ಕಾಲದಲ್ಲಿಯೇ ಆದಿ ಕರ್ನಾಟಕ, ಆದಿ ದ್ರಾವಿಡ ಎಂಬುದಾಗಿ ಶೋಷಿತ ಸಮುದಾಯಗಳನ್ನು ಗುರುತಿಸಿ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಂಡೇ ಶೋಷಿತ ಸಮುದಾಯಗಳ ಏಳಿಗೆಗೆ ಮೀಸಲಾತಿ ಕಲ್ಪಿಸಿದ್ದಾರೆ ಎಂಬುದು ಬಹಿರಂಗ ಸತ್ಯ. ಹೀಗಿದ್ದೂ ನ್ಯಾಯಮೂರ್ತಿ ಸದಾಶಿವ ಅವರು ತಮ್ಮ ವರದಿಯಲ್ಲಿ ಸತ್ಯ ಮರೆಮಾಚಿದ್ದಾರೆ’ ಎಂದು ಆರೋಪಿಸಿದರು.

‘ಸದಾಶಿವ ಆಯೋಗ ವರದಿಯಲ್ಲಿ 29 ಉಪಜಾತಿಗಳನ್ನು ಎಡ ಸಮುದಾಯ ಎಂತಲೂ, 26 ಉಪಜಾತಿಗಳನ್ನು ಬಲ ಸಮುದಾಯ ಅಂತಲೂ, ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಸ್ಪರ್ಶ ಸಮುದಾಯ, 42 ಸಮುದಾಯಗಳಿಗೆ ಸಣ್ಣ ಗುಂಪು ಸಮುದಾಯ ಎಂಬುದಾಗಿ ವಿಂಗಡಿಸಿದ್ದಾರೆ. ಈ ವಿಂಗಡನೆಗೆ ಅವರು ಯಾವ ಮಾನದಂಡ ಬಳಸಿದ್ದಾರೆ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾಶಿವ ಆಯೋಗ ಜಾರಿಗೆ ಡಿ.31ರಂದು ಸಮಾಲೋಚನನಾ ಸಭೆ ನಡೆಸುತ್ತಿದ್ದಾರೆ. ಆದರೆ, ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯದ ಯಾವೊಬ್ಬ ಮುಖಂಡರನ್ನು ಸಭೆಗೆ ಆಹ್ವಾನಿಸಿಲ್ಲ. ಯಾವುದೇ ಸಾಧಕ–ಬಾಧಕ ಚರ್ಚಿಸದೇ ವರದಿ ಜಾರಿ ಕುರಿತಂತೆ ನಿರ್ಣಾಯಕ ಸಭೆ ನಡೆಸುತ್ತಿರುವುದನ್ನು ಖಂಡಿಸಿ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ. ಅಂದು ಒಂದು ದಿನ ವಿವಿಧ ಶೋಷಿತ ಸಮುದಾಯದ ಲಕ್ಷಕ್ಕೂ ಹೆಚ್ಚು ಜನರು ಸೇರಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಬಂಜಾರ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾನ್‌ಸಿಂಗ್‌ ಚವಾಣ್, ಭೋವಿ (ವಡ್ಡರ) ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ವೈ.ಕೊಟ್ರೇಶ್‌, ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷ ಕಿಶನ್‌ ರಾಠೋಡ, ನಗರ ಘಟಕ ಅಧ್ಯಕ್ಷ ಶಂಕರ ರಾಠೋಡ, ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ನಾಗಪ್ಪ, ರಾಯಚೂರು ಭೋವಿ ಸಮಾಜ ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಭೀಮರಾಯ ಇದ್ದರು.

‘ಕಾನೂನು ಹೋರಾಟಕ್ಕೂ ಸಿದ್ಧ’

‘ಸರ್ಕಾರ ತರಾತುರಿಯಾಗಿ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಿ ಶೋಷಿತ ಸಮುದಾಯಗಳಿಗೆ ಅನ್ಯಾಯ ಎಸಗಿದರೆ ಸರ್ಕಾರದ ವಿರುದ್ಧ ಶೋಷಿತ ಸಮುದಾಯಗಳು ಕಾನೂನು ಹೋರಾಟಕ್ಕೂ ಸಿದ್ಧಗೊಂಡಿವೆ’ ಎಂದು ಸುಭಾಷ ರಾಠೋಡ ತಿಳಿಸಿದರು.

‘ಜನಗಣತಿ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದರೆ ಅದೊಂದು ಮಾನದಂಡವಾಗುತ್ತಿತ್ತು. ಆದರೆ, ಜನಗಣತಿ ಸಮೀಕ್ಷೆ ನಡೆಸಿರುವ ಸರ್ಕಾರ ಅದನ್ನೂ ಬಹಿರಂಗಗೊಳಿಸದೆ ಸದಾಶಿವ ಆಯೋಗ ವರದಿ ಜಾರಿಗೆ ಸರ್ಕಾರ ಮುಂದಾಗಬಾರದು. ಸದಾಶಿವ ವರದಿಯಲ್ಲಿಯೇ ಜನಗಣತಿಯ ನಂತರ ವರದಿಯನ್ನು ಜಾರಿಗೊಳಿಸಬಹುದು ಎಂಬ ಉಲ್ಲೇಖ ಕೂಡ ಇದೆ. ಯಾವುದೇ ಅಧ್ಯಯನ, ಸಮಾಲೋಚನೆ, ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸದೇ ಪಟ್ಟಭದ್ರರ ಒತ್ತಡಕ್ಕೆ ಸರ್ಕಾರ ಮಣಿದರೆ ರಾಜ್ಯದಲ್ಲಿ ಶೋಷಿತ ಸಮುದಾಯಗಳು ಸಿಡಿದೇಳುತ್ತವೆ ಎಂಬುದನ್ನು ಮನಗಾಣಬೇಕು’ ಎಂದು ಎಚ್ಚರಿಸಿದರು.

ಮಾನನಷ್ಟ ಪ್ರಕರಣ ದಾಖಲಿಸಲು ಸಿದ್ಧತೆ: ‘ನ್ಯಾಯಮೂರ್ತಿ ಸದಾಶಿವ ಅವರು ತಮ್ಮ ವರದಿಯಲ್ಲಿ ಶೋಷಿತ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರೇ ಗುರುತಿಸುವಂತೆ ಸ್ಪರ್ಶ ಜಾತಿಗಳು ಗಂಟಲಲ್ಲಿ ಸಿಲುಕಿರುವ ಸಮುದಾಗಳಾಗಿವೆ ಎಂದು ಬರೆದಿದ್ದಾರೆ. ಅಲ್ಲದೇ ಮಹಿಳೆಯರನ್ನು ಹೆಂಡ ಕುಡಿಯುವವರು ಎಂದು ನಿಂದಿಸಿದ್ದಾರೆ. ಇದರಿಂದ ಶೋಷಿತ ಸಮುದಾಯಗಳಿಗೆ ಅವಮಾನ ಆಗಿದೆ. ಆದ್ದರಿಂದ ಈ ಸಮುದಾಯಗಳ ಮುಖಂಡರು ಕಾನೂನು ಚಿಂತಕರ ಜತೆ ಚರ್ಚಿಸಿದ್ದು, ನ್ಯಾಯಮೂರ್ತಿ ಸದಾಶಿವ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ತಿಳಿಸಿದರು.

* *

ನ್ಯಾಮೂರ್ತಿ ಸದಾಶಿವ ಅವರು ಶೋಷಿತ ಸಮುದಾಯಗಳನ್ನು ವಿಂಗಡಿಸಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬುಜಗಜೀವನರಾಂ ಅವರಿಗೆ ಅಗೌರವ ಉಂಟು ಮಾಡಿದ್ದಾರೆ.
ಸುಭಾಷ ರಾಠೋಡ
ಅಧ್ಯಕ್ಷ ಅಖಿಲ ಭಾರತ ಬಂಜಾರ ಸೇವಾ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT