7

ಅಂತಿಂಥ ಸ್ಟುಡಿಯೊ ಇದಲ್ಲ

Published:
Updated:
ಅಂತಿಂಥ ಸ್ಟುಡಿಯೊ ಇದಲ್ಲ

ಈಚೆಗೆ ನಟ ಸುನಿಲ್‌ ರಾವ್‌ ಹಾಗೂ ನಟಿ ಸಿಂಧು ಲೋಕನಾಥ್‌ ನಟಿಸಿದ ‘ಲೂಸ್‌ ಕನೆಕ್ಷನ್ಸ್‌’ ವೆಬ್‌ ಧಾರಾವಾಹಿಯು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ಪ್ರಸಾರಗೊಂಡಿತು. ಆರಂಭದಲ್ಲಿ ಪ್ರೇಕ್ಷಕರು ‘ಇದೇನಪ್ಪಾ’ ಎಂದು ಆಶ್ಚರ್ಯಗೊಂಡರು. ಆದರೆ ಎರಡನೇ ಸಂಚಿಕೆಗೆ ಲಕ್ಷಗಟ್ಟಲೆ ವೀಕ್ಷಕರನ್ನು ಸಂಪಾದಿಸಿತು ಈ ವೆಬ್‌ ಧಾರಾವಾಹಿ. ಈ ಧಾರಾವಾಹಿ ರೂಪಿಸಿದ್ದು ‘ಸಖತ್‌ ಸ್ಟುಡಿಯೊ’.

ಇದು ಇಂಟರ್ನೆಟ್ ಜಮಾನ. ಅಂಗೈಲಿ ಹಿಡಿದ ಮೊಬೈಲ್‌ ಇಡೀ ಜಗತ್ತನ್ನು ತೆರೆದಿಡುತ್ತೆ. ಜನರನ್ನು ತಲುಪಲು ಇದು ಸುಲಭದ ವಿಧಾನವೂ ಹೌದು. ಬಹುತೇಕರು ಮನರಂಜನೆಗಾಗಿ ಜಾಲತಾಣಗಳ ಮೊರೆಹೋಗಿದ್ದಾರೆ. ಈ ಬೆಳವಣಿಗೆ ಗಮನಿಸಿದ ಆರ್‌ಜೆ ಪ್ರದೀಪ ಹಾಗೂ ಅವರ ಸ್ನೇಹಿತ ರವಿ ವೆಬ್‌ ಧಾರಾವಾಹಿಗಳು ಹಾಗೂ ಕಿರುಚಿತ್ರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲೆಂದೇ ‘ಸಖತ್ ಸ್ಟುಡಿಯೊ’ ಆರಂಭಿಸಿದರು.

ಸಕತ್‌ ಸ್ಟುಡಿಯೊದ ಮೊದಲ ವೆಬ್‌ ಧಾರಾವಾಹಿ ‘ಲೂಸ್‌ ಕನೆಕ್ಷನ್‌’. ಇದು ಕನ್ನಡದ ಮೊದಲ ವೆಬ್‌ ಧಾರಾವಾಹಿಯೂ ಹೌದು. ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ 20 ಕಂತುಗಳಲ್ಲಿ ಪ್ರಸಾರವಾದ ಈ ಧಾರಾವಾಹಿಯನ್ನು ಲಕ್ಷಾಂತರ ಜನರು ವೀಕ್ಷಿಸಿದರು. ಈಗ ‘ಡಾಕ್ಟರ್‌ ಪಾಲ್‌’ ಪ್ರಸಾರವಾಗುತ್ತಿದೆ. ಹಾಸ್ಯರಸ ತೊಟ್ಟಿಕ್ಕುವ ಈ ಧಾರಾವಾಹಿಯು ವಿಕ್ರಮ್‌ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈಗಾಗಲೇ 6 ಕಂತು ಪ್ರಸಾರವಾಗಿದೆ.

ರಮೇಶ್‌ ಅರವಿಂದ್‌ ಅವರ ‘ಪುಷ್ಪಕ ವಿಮಾನ’ ಸಿನಿಮಾದ ‘ಝಿಲ್ಕಾ ಝಿಲ್ಕಾ ರೇ’ ಹಾಡು ನೆನಪಿದೆಯೇ? ಇದೇ ಹಾಡಿನ ರಿಮಿಕ್ಸ್‌ಗೆ ರಚಿತಾರಾಮ್‌ ಹೆಜ್ಜೆ ಹಾಕಿರುವ ಆಲ್ಬಂ ಸಾಂಗ್‌ ‘ಸಖತ್‌ ಸ್ಟುಡಿಯೊ’ದಲ್ಲಿದೆ. ಈ ವಿಡಿಯೊ ಆಲ್ಬಂಗೆ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ.

‘ನಮ್ಮ ವೆಬ್‌ ಚಾನೆಲ್‌ನಲ್ಲಿ ಪ್ರಸಾರವಾಗುವ ವಿಡಿಯೊಗಳ ಗುಣಮಟ್ಟದ ಬಗ್ಗೆ ಹೆಚ್ಚು ಗಮನಕೊಡುತ್ತೇವೆ. ಮುಖ್ಯಧಾರೆಯ ಸಿನಿಮಾ ಹಾಗೂ ಧಾರಾವಾಹಿಗಳ ಗುಣಮಟ್ಟಕ್ಕೆ ಇವು ಕಡಿಮೆಯಿರುವುದಿಲ್ಲ. ಕಥೆಯ ಆಯ್ಕೆಯಲ್ಲೂ ಎಚ್ಚರಿಕೆ ವಹಿಸುತ್ತೇವೆ’ ಎನ್ನುತ್ತಾರೆ ಪ್ರದೀಪ್‌.

‘ವೆಬ್‌ ಧಾರಾವಾಹಿ ಅಥವಾ ಕಿರುಚಿತ್ರ ನಿರ್ಮಾಣಕ್ಕೆ ಕನ್ನಡದಲ್ಲಿ ಅವಕಾಶಗಳು ಕಡಿಮೆ ಇದ್ದವು. ಬೇರೆ ಭಾಷೆಗಳಲ್ಲಿ ತುಂಬ ಪ್ರಯೋಗಗಳು ನಡೆಯುತ್ತಿವೆ. ಅಲ್ಲಿಯ ಜನರು ಸ್ವೀಕರಿಸಿದ್ದಾರೆ. ಹೀಗಾಗಿ ಕನ್ನಡದಲ್ಲೂ ಪ್ರತಿಭಾವಂತರಿಗೆ ಯಾಕೆ ವೇದಿಕೆ ನೀಡಬಾರದು ಎಂಬ ಚಿಂತನೆ ಸಖತ್‌ ಸ್ಟುಡಿಯೊ ರೂಪದಲ್ಲಿ ಸಾಕಾರಗೊಂಡಿತು. ಹೊಸ ವಿಷಯ, ವಿಚಾರಗಳಿಗೆ ನಮ್ಮ ಸ್ಟುಡಿಯೊ ಸದಾ ತೆರೆದಿರುತ್ತದೆ. ಕೆಲ ಕತೆಗಳು ಸಿನಿಮಾ ಅಥವಾ ಧಾರಾವಾಹಿಗೆ ಹೊಂದಿಕೆಯಾಗುವುದಿಲ್ಲ. ಅವುಗಳಿಗೆ ಭಿನ್ನ ಮಾಧ್ಯಮ ಬೇಕು. ಅಂತರ್ಜಾಲ ಉತ್ತಮ ಆಯ್ಕೆಯಾಬಲ್ಲದು’ ಎನ್ನುವುದು ಅವರ ವಿವರಣೆ.

‘ಲೂಸ್‌ ಕನೆಕ್ಷನ್‌’ ಮೊದಲು ಪ್ರಸಾರಗೊಂಡಾಗ ಜನಕ್ಕೆ ‘ಇದೇನೀದು’ ಎಂದು ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟವಾಯಿತು. ಲೂಸ್‌ ಕನೆಕ್ಷನ್‌ ಸಂಚಿಕೆಯನ್ನು ಬುಧವಾರ ಸಂಜೆ 6ಗಂಟೆಗೆ ಬಿಡುಗಡೆ ಮಾಡುತ್ತಿದ್ದೇವು. ಎರಡು– ಮೂರು ಸಂಚಿಕೆಗಳಾದ ಮೇಲೆ ಜನರು ಬುಧವಾರ ಬರುವುದನ್ನೇ ಕಾಯುತ್ತಿದ್ದರು. ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು. ವೆಬ್‌ ಸಿರೀಸ್‌ ನೋಡಿ ಪುನೀತ್‌ ರಾಜ್‌ಕುಮಾರ್‌, ಶ್ರುತಿ ಹರಿಹರನ್‌ ಹಾಗೂ ಇತರ ಅನೇಕ ನಟ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಖ್ಯಾತ ನಟ, ನಟಿಯರು ವೆಬ್‌ ಸೀರಿಸ್‌ಗಳಲ್ಲಿ ನಟಿಸಲಿದ್ದಾರೆ’ ಎಂಬ ವಿಶ್ಲೇಷಣೆ ಅವರದು.

ಕಿರುಚಿತ್ರ ನಿರ್ಮಾಣಕ್ಕೂ ‌ಸಖತ್‌ ಸ್ಟುಡಿಯೋ ವೇದಿಕೆ ಕಲ್ಪಿಸುತ್ತದೆ. ಸಖತ್ ಸ್ಟುಡಿಯೊ ನಿರ್ಮಿಸಿರುವ ಸುಮಾರು 40 ಕಿರುಚಿತ್ರಗಳು ಯುಟ್ಯೂಬ್ ಚಾನೆಲ್‌ನಲ್ಲಿದೆ. ವೆಬ್‌ಸೈಟ್ ಮತ್ತು ಆ್ಯಪ್ ಬಿಡುಗಡೆ ಮಾಡುವ ಸಿದ್ಧತೆಯೂ ನಡೆದಿದೆ.

ಸಖತ್ ಚಾನೆಲ್ ನೋಡಲು ಯುಟ್ಯೂಬ್‌ನಲ್ಲಿ sakkath studio ಎಂದು ಸರ್ಚ್ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry