7

ಕ್ರಿಸ್‌ಮಸ್‌ ಹಬ್ಬದ ಖರೀದಿ ಭರಾಟೆ ಬಲು ಜೋರು

Published:
Updated:
ಕ್ರಿಸ್‌ಮಸ್‌ ಹಬ್ಬದ ಖರೀದಿ ಭರಾಟೆ ಬಲು ಜೋರು

ತುಮಕೂರು: ಕ್ರಿಸ್‌ಮಸ್‌ ಹಬ್ಬದ ಸಡಗರ ನಗರದೆಲ್ಲೆಡೆ ಆವರಿಸಿದೆ. ಅಂಗಡಿಗಳಲ್ಲಿ ಸಾಂತಾಕ್ಲಾಸ್‌ ವೇಷದ ಸಾಮಗ್ರಿಗಳು, ನಾನಾ ಗಾತ್ರದ ಕ್ರಿಸ್‌ಮಸ್‌ ಟ್ರೀ, ಬೇರೆ ಬೇರೆ ವಿನ್ಯಾಸದ ನಕ್ಷತ್ರಗಳು, ಶುಭ ಸಂಕೇತದ ಗಂಟೆಗಳು, ಅಲಂಕಾರಿಕ ದೀಪಗಳು ನಳನಳಿಸುತ್ತಿವೆ. ನೋಟು ರದ್ಧತಿ ಹಾಗೂ ಜಿಎಸ್‌ಟಿ ನಡುವೆಯೂ ಹಬ್ಬದ ವ್ಯಾಪಾರ ಜೋರಾಗಿಯೇ ನಡೆದಿದೆ.

ಕ್ರಿಸಮಸ್‌ ಆಚರಣೆಯ ಸಾಮಾಗ್ರಿಗಳು, ಹಬ್ಬದ ಉಡುಗೊರೆಗಳು, ವಿಭಿನ್ನ ವಿನ್ಯಾಸ ಹಾಗೂ ಬಣ್ಣದ ಕ್ಯಾಂಡಲ್‌ಗಳು, ಗೃಹಾಲಂಕರಾಕ್ಕೆ ಅಗತ್ಯವಾದ ತೋರಣ, ರಿಬ್ಬನ್‌, ಗಂಟೆಗಳ ಮಾರಾಟದ ಭರಾಟೆ ಎಲ್ಲೆಲ್ಲೂ ಕಳೆಕಟ್ಟಿದೆ.

ನಗರದ ಕೆಲವು ಅಂಗಡಿಗಳಲ್ಲಿ ಕ್ರಿಸ್‌ಮಸ್‌ ಅಲಂಕಾರಿಕಾ ವಸ್ತುಗಳು, ಕೊಡುಗೆಗಳು ಮನಸೂರೆಗೊಳ್ಳುವಂತಿವೆ. ಬಗೆಬಗೆಯ ಗಂಟೆಗಳು, ವಿದ್ಯುದ್ದೀಪಾಲಂಕಾರದ ದೀಪಗಳು ಮನ ಸೆಳೆಯುತ್ತವೆ. ಅಂಗಡಿಗೆ ಬಂದವರು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.

ನಕ್ಷತ್ರಗಳ ಬೆಲೆ ಕನಿಷ್ಠ ₹ 50 ರಿಂದ ₹ 1000 ಇದೆ. ಕ್ರಿಸಮಸ್‌ ಟ್ರೀಗಳು ಎತ್ತರಕ್ಕೆ ತಕ್ಕಂತೆ ₹ 100 ರಿಂದ ₹ 10 ಸಾವಿರದವರೆಗೂ ಮಾರಾಟವಾಗಿವೆ. ನಗರದ ಎಂ.ಜಿ ರಸ್ತೆಯ ನ್ಯೂ ಶಾಂತಿ ಬ್ಯಾಂಗಲ್ಸ್‌ ಫ್ಯಾನ್ಸಿ ಸ್ಟೋರ್‌ನಲ್ಲಿನ ಸಾಂತಾಕ್ಲಾಸ್‌ ವೇಷ ಭೂಷಣದ ಗೊಂಬೆ ₹ 12 ಸಾವಿರಕ್ಕೆ ಮಾರಾಟವಾಗಿದ್ದು ವಿಶೇಷ.

‘ಜಿಎಸ್‌ಟಿ ಜಾರಿಯಿಂದ ವಸ್ತುಗಳ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೂ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ. ಸಾಂತಾಕ್ಲಾಸ್‌ ಟೋಪಿ, ಗೃಹಾಲಂಕಾರಿಕ ವಸ್ತುಗಳನ್ನು ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ’ ಎಂದು ನ್ಯೂ ಶಾಂತಿ ಬ್ಯಾಂಗಲ್ಸ್‌ ಸ್ಟೋರ್‌ ಮಾಲೀಕ ಹೇಮಂತ್‌ ಹೇಳುತ್ತಾರೆ.

‘ನೋಟು ರದ್ದತಿ ಹಾಗೂ ಜಿಎಸ್‌ಟಿಯಿಂದ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ವ್ಯಾಪಾರ ಚೆನ್ನಾಗಿದೆ. ಗ್ರಾಹಕರು ಹೆಚ್ಚಿನ ಮೊತ್ತ ಪಾವತಿಸಲು ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದಾರೆ’ ಎಂದು ನಗರದ ಎಂ.ಜಿ.ರಸ್ತೆಯ ವಿಸ್ಮಯ ಫ್ಯಾನ್ಸಿ ಸ್ಟೋರ್‌ ಮಾಲೀಕ ಮಹದೇವಪ್ಪ ಹೇಳಿದರು.

ಆನ್‌ಲೈನ್‌ನಲ್ಲೂ ಮಾರಾಟ: ಬಿಡುವಿಲ್ಲದ ಕೆಲಸಗಳ ನಡುವೆ ಕೆಲವರು ಮಾರುಕಟ್ಟೆಗಳಿಗೆ ಹೋಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಸಮಯಾವಕಾಶವೇ ಇಲ್ಲ. ಹೀಗಾಗಿ ತಮಗೆ ಬೇಕಾದ ನಕ್ಷತ್ರ, ಕ್ರಿಸ್‌ಮಸ್ ಟ್ರೀ, ಗಂಟೆ, ಉಡುಗೊರೆ ಹಾಗೂ ಕ್ಯಾಂಡಲ್‌ ಇತ್ಯಾದಿಗಳನ್ನು ಆನ್‌ಲೈನ್ ಮೂಲಕ ಬುಕಿಂಗ್ ಮಾಡಿರುವುದು ವಿಶೇಷವಾಗಿದೆ.

ಬಹುತೇಕ ಅಂಗಡಿ ಹಾಗೂ ಶಾಪಿಂಗ್‌ ಮಾಲ್‌ಗಳಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಸಾಕಷ್ಟು ರಿಯಾಯಿತಿ ಪ್ರಕಟಿಸಿವೆ. ಹಾಗಾಗಿ  ಮಾಲ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಶಾಪಿಂಗ್‌ ಭರದಲ್ಲಿ ಸಾಗಿತ್ತು. ಬಹುತೇಕ ನಗರದ ಫ್ಯಾನ್ಸಿ ಸ್ಟೋರ್‌ಗಳಲ್ಲಿ ವಿವಿಧ ಬಗೆಯ ಅಲಂಕಾರಿಕ ವಸ್ತುಗಳು, ಕೃತಕ ನಕ್ಷತ್ರಗಳು, ಉಡುಗೊರೆ, ಕ್ರಿಸಮಸ್‌ ಟ್ರೀ, ಮೇಣದ ಬತ್ತಿ, ಗಂಟೆಗಳ ವ್ಯಾಪಾರ ಜೋರಾಗಿಯೇ ನಡೆಯಿತು.

ಗೋದಲಿ ವಸ್ತುವಿಗೆ ಹೆಚ್ಚಿದ ಬೇಡಿಕೆ

ಕ್ರಿಸ್‌ಮಸ್ ಆಚರಿಸಲು ಏಸು ದೇವರು ಜನಿಸಿದ ಸ್ಥಳವಾಗಿರುವ ಗೋದಲಿಯನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸುತ್ತಾರೆ. ಈ ಕಾರಣದಿಂದ ನಗರದ ಪ್ರಮುಖ ಚರ್ಚ್ ಮತ್ತು ಮನೆಗಳು ಮದುವಣಗಿತ್ತಿಯಂತೆ ರಂಗು ರಂಗಾಗಿ ಸಿಂಗಾರಗೊಳಿಸಲಾಗಿದೆ.

ಇದಕ್ಕಾಗಿ ಸುತ್ತಲೂ ಕ್ರಿಸ್‌ಮಸ್‌ ಟ್ರಿ ಇಡಬೇಕು. ಜತೆಗೆ ವಿದ್ಯುತ್ ದೀಪ ಹಾಕಿ ಸಿಂಗರಿಸಬೇಕು. ಜತೆಗೆ ಮನ ಸೆಳೆಯುವ ಅಲಂಕಾರ, ಗೊಂಬೆಗಳ ಜೋಡಣೆ, ಗೋದಳಿ ತಯಾರಿ (ಕ್ರಿಬ್) ಎಲ್ಲವೂ ಬೇಕಾಗಿರುವುದರಿಂದ ಈ ವಸ್ತುಗಳ ಬೇಡಿಕೆ  ಹೆಚ್ಚಿದೆ.

ರಾಘವೇಂದ್ರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry