7

ಸ್ಮಾರಕಗಳ ವೀಕ್ಷಣೆಗೆ ಮಕ್ಕಳ ದಂಡು

Published:
Updated:
ಸ್ಮಾರಕಗಳ ವೀಕ್ಷಣೆಗೆ ಮಕ್ಕಳ ದಂಡು

ಬಾದಾಮಿ: ಇಲ್ಲಿನ ಚಾಲುಕ್ಯರ ಸ್ಮಾರಕಗಳಾದ ಗುಹಾಂತರ ದೇವಾಲಯಗಳನ್ನು ವೀಕ್ಷಿಸಲು ನಿತ್ಯ ಸಾವಿರಾರು ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರು ಆಗಮಿಸುವರು. ಡಿಸೆಂಬರ್‌ ಕೊನೆಯ ವಾರದಲ್ಲಿ ಪ್ರವಾಸಿಗರ ಮತ್ತು ಶಾಲಾ ಮಕ್ಕಳ ಸಂಖ್ಯೆಯು ಅಧಿಕವಾಗಿದೆ.

ಶನಿವಾರ ರಾಜ್ಯದ ವಿವಿಧ ಜಲ್ಲೆಗಳಿಂದ ಆಗಮಿಸಿದ ಶಾಲಾ ಮಕ್ಕಳ ದಂಡು ಗುಹಾಂತರ ದೇವಾಲಯಗಳಲ್ಲಿ ಮಕ್ಕಳ ಕಲರವ ಬೆಟ್ಟದಲ್ಲಿ ಪ್ರತಿಧ್ವನಿಸಿತು. ಮಕ್ಕಳು ಮೂರ್ತಿಗಳನ್ನು ವೀಕ್ಷಿಸುವ ತವಕದಲ್ಲಿದ್ದರು.

‘ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾಮಾನ್ಯವಾಗಿ ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವರು’ ಎಂದು ಪ್ರವಾಸಿ ಮಾರ್ಗದರ್ಶಿ ರಾಜು ಕಲ್ಮಠ ಹೇಳಿದರು.

ಆದರೆ ಈ ಬಾರಿ ಅಕ್ಟೋಬರ್‌ ಮತ್ತು ನವೆಂಬರ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯ ಕೊರತೆಯಾಗಿತ್ತು. ಡಿಸೆಂಬರ್‌ ತಿಂಗಳಲ್ಲಿ ಸರ್ಕಾರಿ ರಜೆ ಇರುವುದರಿಂದ ಮತ್ತು ಶಾಲಾ ಮಕ್ಕಳಿಗೆ ಸರ್ಕಾರದಿಂದ ಪ್ರವಾಸ ಭಾಗ್ಯ ಇರುವುದರಿಂದ ಪ್ರವಾಸಿಗರ ಸಂಖ್ಯೆಯು ಹೆಚ್ಚಳವಾಗಿದೆ ಎಂದರು.

ಅಂಬೇಡ್ಕರ್‌ ವೃತ್ತದಿಂದ ಗುಹಾಂತರ ದೇವಾಲಯದ ವರೆಗೂ ಮತ್ತು ಅಂಜುಮನ್‌ ಸಂಸ್ಥೆಯ ಆವರಣ, ಶಾದಿ ಮಹಲ್‌ ಆವರಣದಲ್ಲಿ ನೂರಾರು ವಾಹನಗಳು ನಿಂತಿದ್ದವು. ಅಂಬೇಡ್ಕರ್‌ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿ ಪ್ರವಾಸಿಗರು ಪರದಾಡಿದರು.

ಮಕ್ಕಳು, ವೃದ್ಧರು ನಡೆದುಕೊಂಡು ಸ್ಮಾರಕಗಳ ವೀಕ್ಷಣೆಗೆ ತೆರಳಿದರು. ರಸ್ತೆ ಸುಗಮ ಸಂಚಾರಕ್ಕೆ ಪೊಲೀಸ್‌ ಸಿಬ್ಬಂದಿ ಇರಲಿಲ್ಲ. ನಂತರ ಬಂದ ಪೊಲೀಸರು ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಬಾದಾಮಿಯಲ್ಲಿ ಗುಹಾಂತರ ದೇವಾಲಯ, ಭೂತನಾಥ ದೇವಾಲಯ, ಉತ್ತರದ ಬಾವನ್‌ ಬಂಡೆ ಕೋಟೆಯ ಮೇಲಿನ ಸ್ಮಾರಕ, ಮ್ಯೂಜಿಯಂ ಮತ್ತು ಕಪ್ಪೆಅರಭಟ್ಟನ ಶಾಸನವನ್ನು ವೀಕ್ಷಿಸಲು ಪ್ರವಾಸಿಗರ ದಂಡು ಗುಂಪು ಗುಂಪಾಗಿ ಬಂದು ವೀಕ್ಷಿಸಿದರು.

‘ಸರ್ಕಾರ ಶಾಲಾ ಮಕ್ಕಳಿಗೆ ‘ಕರ್ನಾಟಕ ದರ್ಶನ’ ಪ್ರವಾಸ ಭಾಗ್ಯವನ್ನು ಕೊಟ್ಟಿರುವುದರಿಂದ ಇಲ್ಲಿ ನಿತ್ಯ 20ಕ್ಕೂ ಅಧಿಕ ಶಾಲಾ ಬಸ್ಸುಗಳು ಬರುತ್ತವೆ. ಬಾದಾಮಿಯಲ್ಲಿ ರಸ್ತೆ ದುರಸ್ತಿ ಕೈಗೊಂಡದ್ದರಿಂದ ಈ ಬಾರಿ ಪ್ರವಾಸಿಗರ ಸಂಖ್ಯೆಯು ಕಡಿಮೆಯಾಗಿದೆ’ ಎಂದು ಪ್ರವಾಸಿ ಮಾರ್ಗದರ್ಶಿ ಎಸ್‌.ವೈ. ಸುಳ್ಳದ ಹೇಳಿದರು.

‘ಚಾಲುಕ್ಯರ ಕಲಾವಿದರು ಮೇಣಬಸದಿಯನ್ನು ಒಂದೇ ಕಲ್ಲಿನಲ್ಲಿ ಕೆತ್ತಿರುವುದು ವಿಸ್ಮಯವಾಗಿದೆ. ಆದರೆ ಇಕ್ಕಟ್ಟಾದ ರಸ್ತೆ ಸರಿಪಡಿಸಬೇಕು. ಸ್ವಚ್ಛತೆ ಕಾಪಾಡಬೇಕು’ ಎಂದು ಮೈಸೂರಿನ ಪ್ರವಾಸಿಗ ಹೇಮಂತಕುಮಾರ ಹೇಳಿದರು.

‘ಪಟ್ಟದಕಲ್ಲಿನಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ ಇಲ್ಲ. ರಸ್ತೆಗಳು ಹದಗೆಟ್ಟು ಹೋಗಿವೆ. ಐಹೊಳೆಯಿಂದ ಪಟ್ಟದಕಲ್ಲು, ಬಾದಾಮಿಗೆ ಬರುವಾಗ ಇಲ್ಲಿ ಕೆಶಿಪ್‌ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry