7

ಹೆಗಡೆ ಮಾತು: ಪ್ರಗತಿಪರರ ಪ್ರತಿಭಟನೆ

Published:
Updated:

ದಾವಣಗೆರೆ: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಇತ್ತೀಚಿನ ಹೇಳಿಕೆಗಳು ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು. 

ಹೆಗಡೆ ಜಾತ್ಯತೀತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಸಂವಿಧಾನ ಬದಲಿಸಬೇಕೆಂಬ ಹೇಳಿಕೆ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಶ್ರೋಕ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಮಹಾಲಿಂಗಪ್ಪ ಮಾತನಾಡಿ, ‘ಡಿಸೆಂಬರ್‌ 25 ಅಂಬೇಡ್ಕರ್‌ ಮನುಸ್ಮೃತಿಯನ್ನು ದಹನ ಮಾಡಿದ ದಿನ. ಇದೇ ದಿವಸ ಅವರದೇ ಹೆಸರಿನ ವೃತ್ತದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಚಿಸಿ ಎಂಬ ಘೋಷಣೆಯೊಂದಿಗೆ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ವಿರೋಧಿಸಲಾಗುತ್ತಿದೆ’ ಎಂದು ಹೇಳಿದರು.

ಧರ್ಮ, ಧರ್ಮಗಳ ನಡುವೆ ಕೋಮುಗಲಭೆಗಳನ್ನು ಸೃಷ್ಟಿಸುವ ಇಂತಹ ಸಂವಿಧಾನ ವಿರೋಧಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಿಪಿಐ ಮುಖಂಡ ಕೆ.ಎಲ್‌.ಭಟ್ ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರಾದ ಬಲ್ಲೂರು ರವಿಕುಮಾರ್, ಮಹಾಂತೇಶ್, ಹಾಲಸ್ವಾಮಿ, ರೇಣುಕಮ್ಮ, ತಿಪ್ಪೇಸ್ವಾಮಿ, ಭರ್ಮಪ್ಪ, ಪಿ.ಕೆ.ಗೌಸ್‌‍ಪೀರ್, ಶ್ರೀನಿವಾಸಮೂರ್ತಿ, ಅನಂತರಾಜು ಅವರೂ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry