5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ನನಸಾಗಲಿದೆ ಎರಡು ದಶಕಗಳ ಕನಸು

Published:
Updated:
ನನಸಾಗಲಿದೆ ಎರಡು ದಶಕಗಳ ಕನಸು

ಹರಪನಹಳ್ಳಿ: ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಬಹು ನೀರಿಕ್ಷಿತ ಯೋಜನೆಗಳಾದ ‘ಗರ್ಭಗುಡಿ ಪಿಕಪ್ ಕಂ ಬ್ರಿಡ್ಜ್’ ಹಾಗೂ ತುಂಗಭದ್ರಾ ನದಿಯಿಂದ 50 ಕೆರೆಗಳಿಗೆ ನೀರು ತುಂಬಿಸುವ ಪ್ರಮುಖ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 26ರಂದು ಶಂಕುಸ್ಥಾಪನೆ ನೇರವೇರಿಸುತ್ತಿರುವುದರಿಂದ ಎರಡು ದಶಕಗಳ ಈ ಭಾಗದ ರೈತರ ಕನಸು ಇದೀಗ ನನಸಾಗುತ್ತಿದೆ.

ಗರ್ಭಗುಡಿ ಏತ ನೀರಾವರಿ ಯೋಜನೆ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರ ಕನಸಿನ ಕೂಸು. ಈ ಯೋಜನೆಗೆ ತಾಂತ್ರಿಕ ತೊಡಕುಗಳ ಎದುರಾದ ಕಾರಣ ಕ್ರಿಯಾ ಯೋಜನೆ ಪದೇ ಪದೇ  ಬದಲಾಗುತ್ತಾ ಬಂದಿತ್ತು. ಇದೀಗ ಸಣ್ಣ ನೀರಾವರಿ ಇಲಾಖೆಯ ಪರಿಷ್ಕೃತ ₹ 51.40 ಕೋಟಿ ವೆಚ್ಚದೊಂದಿಗೆ ತೆಲಂಗಾಣದಲ್ಲಿ ಅಳವಡಿಸಿರುವ ಪೈಪ್‌ಲೈನ್ ಮಾದರಿಯ ಕಾಮಗಾರಿ ಆರಂಭಿಸಲು ಮುಖ್ಯಮಂತ್ರಿ ಹಸಿರು ನಿಶಾನೆ ತೋರಿಸಲಿದ್ದಾರೆ.

ದಿವಂಗತ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರ ಈ ಯೋಜನೆಗಾಗಿ 1998ರಲ್ಲಿ ₹ 9.30 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. 1999ರಲ್ಲಿ ತಾಂತ್ರಿಕ ಅನುಮೋದನೆ ದೊರೆತ ನಂತರ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಯೋಜನೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ಯೋಜನೆಯನ್ನು ಜನ ಪ್ರತಿನಿಧಿಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ.

ಯೋಜನೆಯ ಉದ್ದೇಶವೇನು?: ಕುಡಿಯುವ ನೀರು, ನೀರಾವರಿ, ಸಂಪರ್ಕ ಸೇತುವೆ, ಮೀನುಗಾರಿಕೆ ಅಭಿವೃದ್ಧಿ ಸೇರಿದಂತೆ ವಿವಿಧೋದ್ದೇಶಗಳನ್ನು ಯೋಜನೆ ಒಳಗೊಂಡಿದ್ದು, ಕಿರು ಜಲಾಶಯ ನಿರ್ಮಾಣದಿಂದ ನದಿಪಾತ್ರದಲ್ಲಿ 19 ಕಿ.ಮೀ. ವ್ಯಾಪ್ತಿಯಲ್ಲಿ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹಗೊಳ್ಳಲಿದೆ.

ತಾಲ್ಲೂಕಿನ ಹಲುವಾಗಲು, ಕಡತಿ, ನಂದ್ಯಾಲ, ನಿಟ್ಟೂರು, ತಾವರಗೊಂದಿ ಹಾಗೂ ರಾಣೇಬೆನ್ನೂರು ತಾಲ್ಲೂಕಿನ ಕೆಲವು ಗ್ರಾಮಗಳು ಸೇರಿ ಒಟ್ಟು 4,600 ಎಕರೆಯಷ್ಟು ರೈತರ ಭೂಮಿಗೆ ನೀರುಣಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೇ ಕುಡಿಯುವ ನೀರು, ಮೀನುಗಾರಿಕೆ ಅಭಿವೃದ್ಧಿಯಂತಹ ವಿವಿಧ ಉದ್ದೇಶಗಳನ್ನು ಯೋಜನೆ ಒಳಗೊಂಡಿದೆ. ಅಲ್ಲದೇ ತುಂಗಭದ್ರಾ ನದಿಯಲ್ಲಿ 23 ಕಮಾನುಗಳ, 225 ಮೀಟರ್ ಉದ್ದದ ಸೇತುವೆ ನಿರ್ಮಾಣ ವಾಗುವುದರಿಂದ ಹರಪನಹಳ್ಳಿ- ರಾಣೇಬೆನ್ನೂರು ತಾಲ್ಲೂಕುಗಳ ನಡುವೆ ಪಯಣಿಸಬೇಕಾದ ಅಂತರ 25 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಹರಪನಹಳ್ಳಿ-ಕೊಟ್ಟೂರು-ರಾಣೇಬೆನ್ನೂರು ನಡುವಿನ ವ್ಯಾಪಾರ–ವಹಿವಾಟಿಗೆ ಇದರಿಂದ ಅನುಕೂಲವಾಗಲಿದೆ.

50 ಕರೆಗಳಿಗೆ ತುಂಗಭದ್ರೆ: ಬೃಹತ್ ನೀರಾವತಿ ಇಲಾಖೆಯಿಂದ ಆರಂಭದಲ್ಲಿ 60 ಕೆರೆಗಳು ಎಂದು ನಮೂದಿಸಲಾಗಿತ್ತು. ಕೆರೆಗಳ ಹೆಸರನ್ನು ದಾಖಲಿಸಿರಲಿಲ್ಲ. ಹಾಗಾಗಿ ಕೆರೆಗಳ ಸರ್ವೆ ನಡೆದು, ಯೋಜನೆಗೆ ₹ 227 ಕೋಟಿ ನಿಗದಿಗೊಳಿಸಲಾಗಿದೆ. ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ಬಳಿ ಹರಿಯುವ ತುಂಗಭದ್ರಾ ನದಿ ಪಾತ್ರದ ಚಿಕ್ಕಬಿದರಿ ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಿ, ಪೈಪ್‌ಲೈನ್ ಮೂಲಕ 20 ಕಿ.ಮೀ. ವ್ಯಾಪ್ತಿಯ ಗುಂಡಗತ್ತಿ ಗ್ರಾಮದ ಬಳಿ ನೀರು ಶೇಖರಣೆ ಘಟಕ ನಿರ್ಮಿಸಲಾಗುವುದು. ಅಲ್ಲಿಂದ ಹರಪನಹಳ್ಳಿ ಬಳಿ ಶೇಖರಣೆಗೆಯಾಗಿ ಇಲ್ಲಿಂದ ಕಂಚಿಕೇರಿ ಸೇರಿದಂತೆ ವಿವಿಧ ಭಾಗಗಳಿಗೆ ನೀರು ಹರಿಸುವ ಉದ್ದೇಶವಿದೆ.

ಯಾವ ಯಾವ ಕೆರೆಗಳಿಗೆ ನೀರು?: ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಹರಪನಹಳ್ಳಿ ಹಿರೇಕೆರೆ, ತಿಪ್ಪನಾಯಕನಹಳ್ಳಿ, ಮುತ್ತಿಗಿ, ಹರಪನಹಳ್ಳಿ ಸಣ್ಣಕೆರೆ, ಯಲ್ಲಾಪುರ, ಮಾದಾಪುರ, ಅಲ್ಮರಸಿಕೆರೆ, ಮಾಡ್ಲಿಗೇರೆ, ಚಿಕ್ಕಳ್ಳಿ, ವಡ್ಡಿನದಾದಾಪುರ, ಶೃಂಗಾರದೋಟ, ಬಾಗಳಿ, ಕಲ್ಲಹಳ್ಳಿ, ಯಲ್ಲಾಪುರತಾಂಡ, ತೋಗರಿಕಟ್ಟೆ, ಹುಲಿಕಟ್ಟಿ, ಕನ್ನ ನಾಯಕನಹಳ್ಳಿ, ಚಿರಸ್ತಹಳ್ಳಿ, ಅಲಗಿಲ ವಾಡ, ನೀಲಗುಂದ, ಕುಂಚೂರು, ಹಲು ವಾಗಲು, ತಲವಾಗಲು, ಗುಂಡಗತ್ತಿ, ಯಡಿಹಳ್ಳಿ, ಬೆಣ್ಣೆಹಳ್ಳಿ, ಕ್ಯಾರಕಟ್ಟಿ, ತೌವಡೂರು, ಬೆಂಡಿಗೇರೆ, ಬಿಕ್ಕಿಕಟ್ಟಿ, ಕಂಚಿಕೆರೆ, ಹಳ್ಳಿಕೆರೆ, ಚಿಗಟೇರಿ, ಕನಕನಬಸಾಪುರ, ಅರಸೀಕೆರೆ, ನಿಚ್ಚವ್ವನಹಳ್ಳಿ, ಹಿಕ್ಕಿಂಗೆರೆ, ಮಜ್ಜಿಗೆರೆ, ಕೆ.ಕಲ್ಲಹಳ್ಳಿ, ಉದ್ದಗಟ್ಟಿ, ಬೇವಿನಹಳ್ಳಿ, ಸತ್ತೂರು, ತೆಲಿಗಿ, ನಾರಾಯಣಪುರ, ಕಾನಹಳ್ಳಿ, ಅರಸನಾಳು, ಮದರಿ ಕಟ್ಟೆಕೆರೆ, ನಾಗಲಾಪುರ ವಿವಿಧ ಕೆರೆಗಳು ನದಿ ನೀರಿನಿಂದ ಮೈದುಂಬಲಿವೆ.

*  * 

ಜನರಿಗೆ ನೀಡಿದ್ದ ಭರವಸೆಯಂತೆ ನನೆಗುದಿಗೆ ಬಿದ್ದಿದ್ದ ಎರಡು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇನೆ.

ಎಂ.ಪಿ.ರವೀಂದ್ರ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry