7

ಪ್ರಭಾವ ಬೀರದ ತೊಗರಿ ಬೆಂಬಲ ಬೆಲೆ

Published:
Updated:
ಪ್ರಭಾವ ಬೀರದ ತೊಗರಿ ಬೆಂಬಲ ಬೆಲೆ

ರಾಯಚೂರು: ಸರ್ಕಾರವು ತೊಗರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿದ್ದರೂ ಮಾರುಕಟ್ಟೆ ತೊಗರಿ ದರದಲ್ಲಿ ಯಾವುದೇ ಏರಿಕೆ ಆಗುತ್ತಿಲ್ಲ! ಪ್ರತಿ ಕ್ವಿಂಟಲ್‌ ಕೆಂಪು ತೊಗರಿ ಗರಿಷ್ಠ ₹4,870 ಕ್ಕೆ ಮಂಗಳವಾರ ಮಾರಾಟವಾಗಿದೆ.

ಕಳೆದ ತಿಂಗಳಿನ ದರಕ್ಕೆ ಹೋಲಿಸಿದರೆ ಮಾರುಕಟ್ಟೆ ದರ ₹5 ಸಾವಿರ ಗಡಿಯಿಂದ ಕೆಳಗೆ ಬಂದಿದೆ. ಇದೀಗ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ ತೊಗರಿಗೆ ₹5,450 ಬೆಂಬಲ ಬೆಲೆ ಘೋಷಿಸಿದೆ ಹಾಗೂ ರಾಜ್ಯ ಸರ್ಕಾರವು ₹550 ಪ್ರೋತ್ಸಾಹ ಧನ ನೀಡುತ್ತಿದ್ದು, ಪ್ರತಿ ಕ್ವಿಂಟಲ್‌ ₹6 ಸಾವಿರ ನೀಡಿ ತೊಗರಿ ಖರೀದಿಸಲಾಗುತ್ತಿದೆ. ತೊಗರಿ ಬೆಳೆದ ರೈತರು ಬುಧವಾರದಿಂದ ನೋಂದಣಿ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 18 ಕೇಂದ್ರಗಳಲ್ಲಿ ತೊಗರಿ ಖರೀದಿ ನಡೆಸಲಾಗುವುದು.

ಬೆಂಬಲ ಬೆಲೆ ಏರಿಕೆಯಿಂದ ದಲ್ಲಾಳಿಗಳು ಮಾರುಕಟ್ಟೆಯಲ್ಲಿ ತೊಗರಿ ಖರೀದಿಸುವ ದರ ಕೂಡಾ ಹೆಚ್ಚಿಸುತ್ತಾರೆ ಎನ್ನುವ ಸಾಮಾನ್ಯ ತಿಳಿವಳಿಕೆ ಇದೀಗ ಸುಳ್ಳಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ ಸ್ಪರ್ಧೆ ಏರ್ಪಡಲಿದೆ. ಇನ್ನೊಂದು ಗಮನ ಸೆಳೆಯುವ ಸಂಗತಿ; ಐದು ಎಕರೆ ಜಮೀನಿನಲ್ಲಿ ತೊಗರಿ ಬೆಳೆದ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಮಾತ್ರ ಬೆಂಬಲ ಬೆಲೆ ನೀಡಿ ತೊಗರಿ ಖರೀದಿಸಲಾಗುತ್ತದೆ. ಹಿಂದಿನ ವರ್ಷ ಖರೀದಿ ಪ್ರಮಾಣಕ್ಕೆ ಮಿತಿ ಇರಲಿಲ್ಲ.

‘ರಾಯಚೂರು ತಾಲ್ಲೂಕಿನಲ್ಲಿ ಐದು, ದೇವದುರ್ಗ ಮತ್ತು ಮಾನ್ವಿ ತಾಲ್ಲೂಕು ಗಳಲ್ಲಿ ತಲಾ ಮೂರು, ಲಿಂಗುಸುಗೂರು ತಾಲ್ಲೂಕಿನಲ್ಲಿ ಐದು ಹಾಗೂ ತೊಗರಿ ಕಡಿಮೆ ಬೆಳೆಯುವ ಸಿಂಧನೂರು ನಗರದಲ್ಲಿ ಒಂದು ತೊಗರಿ ಕೇಂದ್ರ ಆರಂಭಿಸಲಾಗುತ್ತಿದೆ.  ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ ಸಮಿತಿಯು ಈಚೆಗೆ ಸಭೆ ಸೇರಿ ಈ ಬಗ್ಗೆ ನಿರ್ಧರಿಸಿದೆ’ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತೊಗರಿ ಮಾರಾಟ: ಮಾರುಕಟ್ಟೆ ದರಕ್ಕಿಂತ ಹೆಚ್ಚು ಬೆಂಬಲ ಬೆಲೆ ಕೊಟ್ಟು ತೊಗರಿ ಖರೀದಿಸುವುದಾಗಿ ಸರ್ಕಾರವು ಘೋಷಿಸಿದ್ದರೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ರೈತರು ಕಡಿಮೆ ದರದಲ್ಲೆ ತೊಗರಿ ಮಾರಾಟ ಮಾಡುತ್ತಿದ್ದಾರೆ. ನವೆಂಬರ್‌ 1 ರಿಂದ ಡಿಸೆಂಬರ್‌ 26 ರವರೆಗೂ 16,158 ಕ್ವಿಂಟಲ್‌ ತೊಗರಿ ಆವಕ ದಾಖಲಾಗಿದೆ. ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರು ತೊಗರಿ ಮಾರಾಟಕ್ಕೆ ರಾಯಚೂರಿಗೆ ಬರುತ್ತಿದ್ದಾರೆ.

‘ಕಳೆದ ವರ್ಷ ಎಲ್ಲ ರೈತರು ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ್ದ ದಲ್ಲಾಳಿಗಳು ಬೆಂಬಲ ಬೆಲೆಯ ಲಾಭ ಮಾಡಿಕೊಂಡಿದ್ದರು. ಈ ಸಲ ತೊಗರಿಗೆ ಒಳ್ಳೆಯ ದರವನ್ನು ಸರ್ಕಾರ ಘೋಷಿ ಸಿದೆ. ರೈತರು ಕೂಡಲೇ ತೊಗರಿ ಮಾರಾ ಟಕ್ಕೆ ನೋಂದಾಯಿಸಿ ಲಾಭ ಮಾಡಿ ಕೊಳ್ಳಬೇಕು’ ಎಂದು ಜಿಲ್ಲಾ ಹಸಿರು ಸೇನೆ ಮತ್ತು ರೈತ ಸಂಘದ ಪದಾಧಿಕಾರಿ ಲಕ್ಷ್ಮಣ ಕಡ್ಗಂದೊಡ್ಡಿ ಹೇಳಿದರು.

ಎಲ್ಲೆಲ್ಲಿ ತೊಗರಿ ಖರೀದಿ

ರಾಯಚೂರು ನಗರದ ತಾಲ್ಲೂಕು ಕೃಷಿ ಹುಟ್ಟುವಳಿ ಮಾರುಕಟ್ಟೆ ಸಮಿತಿ (ಟಿಎಪಿಸಿಎಂಎಸ್‌), ಮಮದಾಪುರ, ಯರಗೇರಾ, ಗೋನಾಳ, ಮಲ್ಲಾಪುರ, ಶಕ್ತಿನಗರ, ದೇವದುರ್ಗ ಪಟ್ಟಣ, ಮಸರಕಲ್‌, ಗಬ್ಬೂರು, ಮಾನ್ವಿ ಪಟ್ಟಣ, ಕುರ್ಡಿ, ಕವಿತಾಳ, ಲಿಂಗಸುಗೂರು ಪಟ್ಟಣ, ಮುದಗಲ್‌, ಮಸ್ಕಿ, ಹಿರೇ ನಗನೂರ, ಹಟ್ಟಿ ಹಾಗೂ ಸಿಂಧನೂರು ನಗರದಲ್ಲಿ ತೊಗರಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ದಾಖಲೆಗಳು ಅಗತ್ಯ: 2017–18ನೇ ಸಾಲಿನ ಪಹಣಿ , ತೊಗರಿ ಬೆಳೆಯ ಕಂದಾಯ ಅಧಿಕಾರಿಗಳಿಂದ ದೃಢೀಕರಣ ಪತ್ರ, ಮೂಲ ಆಧಾರ್‌ ಕಾರ್ಡ್‌, ಆಧಾರ್‌ ಕಾರ್ಡ್‌ನೊಂದಿಗೆ ಜೋಡಣೆಯಾದ ಬ್ಯಾಂಕ್‌ ಖಾತೆ ಪುಸ್ತಕದ ನಕಲು ಪ್ರತಿ ಒದಗಿಸುವುದು ಕಡ್ಡಾಯ.

ಖರೀದಿ ನಿಯಮ: ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು 2018 ರ ಜನವರಿ 24 ರವರೆಗೂ ಕಾಲಾವಕಾಶವಿದೆ. ನೋಂದಣಿ ಮಾಡಿಕೊಂಡ ರೈತರಿಂದ ಗರಿಷ್ಠ 20 ಕ್ವಿಂಟಲ್‌ ಮಾತ್ರ ತೊಗರಿ ಖರೀದಿಸಲಾಗುತ್ತದೆ. ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೂ ತೊಗರಿ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ಫೆಬ್ರುವರಿ 13 ರವರೆಗೂ ತೊಗರಿ ಖರೀದಿ ನಡೆಯಲಿದೆ.

* * 

ಬೆಂಬಲ ಬೆಲೆಯ ಲಾಭವನ್ನು ಹೆಚ್ಚಾಗಿ ದೊಡ್ಡ ಶ್ರೀಮಂತರು ಹಾಗೂ ನೂರಾರು ಕ್ವಿಂಟಲ್‌ ತೊಗರಿ ಖರೀದಿಸಿದ ದಲ್ಲಾಳಿಗಳು ಪಡೆದುಕೊಳ್ಳುವುದಕ್ಕೆ ಸರ್ಕಾರ ಲಗಾಮು ಹಾಕಿದ್ದು ಒಳ್ಳೆಯದು.

ಲಕ್ಷ್ಕಣಗೌಡ ಕೊಡ್ಗಂದೊಡ್ಡಿ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry