7

ಸರ್ಕಾರಗಳಿಂದ ರೈತರ ನಿರ್ಲಕ್ಷ್ಯ

Published:
Updated:

ದೇವನಹಳ್ಳಿ: ಪರಂಪರೆಯಿಂದ ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಬಗ್ಗೆ ಆಡಳಿತ ನಡೆಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತಪದ್ಮನಾಭಾಚಾರ್ಯ ದೂರಿದರು.

ಗುರುಭವನದಲ್ಲಿ ಮಾನವ ಹಕ್ಕುಗಳ ಜಾಗೃತಿ ವೇದಿಕೆ ವತಿಯಿಂದ ಮಂಗಳವಾರ ನಡೆದ ರೈತರ ದಿನಾಚರಣೆ ಮತ್ತು ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನ್ನದ ಮಹತ್ವ ಪ್ರತಿಯೊಬ್ಬರಿಗೂ ಗೊತ್ತು. ರೈತರು ಪಡುತ್ತಿರುವ ಸಂಕಷ್ಟದ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಸರ್ಕಾರ ನೀಡುವ ಕೆಲವೊಂದು ಪ್ರೋತ್ಸಾಹದಾಯಕ ಯೋಜನೆ ಅರ್ಹ ಬಡ ರೈತರಿಗೆ ಸಿಗದೇ ಕೆಲ ಶ್ರೀಮಂತ ರೈತರ ಪಾಲಾಗುತ್ತಿದೆ. ಪ್ರತಿ ತಿಂಗಳ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ಸರ್ಕಾರ ನಡೆಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಅದಿತ್ಯ ಶ್ರೀನಿವಾಸ ಗೌಡ ಮಾತನಾಡಿ, ರೈತರಿಲ್ಲದೆ ದೇಶಕ್ಕೆ ಭವಿಷ್ಯವಿಲ್ಲ. ವಾಡಿಕೆ ಮಳೆ ಕಡಿಮೆ, ಸರ್ಕಾರ ರೈತರ ಬಗ್ಗೆ ತಳೆದಿರುವ ದ್ವಂದ್ವ ನೀತಿ, ಸುಧಾರಿತ ಯೋಜನೆಗಳ ಬಗ್ಗೆ ದೂರದೃಷ್ಟಿ ಚಿಂತನೆ ನಡೆಸದೇ ಇರುವುದರಿಂದ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1,850ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ರೈತರ ಹಿತ ಕಾಯುವ ಸಮಗ್ರ ಯೋಜನೆ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಮಾರುಕಟ್ಟೆ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ, ಬೆಳೆ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವುದು, ಅಧುನಿಕ ಬೇಸಾಯದಲ್ಲಿ ತಾಂತ್ರಿಕ ಜ್ಞಾನ ಅರಿವು ಇಲ್ಲದಿರುವುದು, ರೈತರನ್ನು ಆರ್ಥಿಕ ಸಂಕಷ್ಟದಲ್ಲಿ ದೂಡಿದೆ. ವೇದಿಕೆ ರೈತರ ಹೋರಾಟಕ್ಕೆ ನೈತಿಕ ಬಲ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ಹದಿನೈದು ಸಾಧಕ ಹಿರಿಯ ರೈತರನ್ನು ಸನ್ಮಾನಿಸಲಾಯಿತು. ಜಾಗೃತಿ ವೇದಿಕೆ ರಾಜ್ಯ ಘಟಕ ಕಾರ್ಯದರ್ಶಿ ಶಿವಪ್ರಕಾಶ್, ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲೇಶ್, ಯುವ ಘಟಕ ಅಧ್ಯಕ್ಷ ಮಂಜುನಾಥ್ ಇದ್ದರು.

ಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಮಾತನಾಡಿ, ರಾಜಕೀಯ ಎಲ್ಲಾ ಪಕ್ಷಗಳು ರೈತರ ಬೆನ್ನು ಮುರಿಯುವ ಕೆಲಸ ಮಾಡುತ್ತಿವೆ. ರೈತರ ಸಮಸ್ಯೆಗಳನ್ನು ಕೇಳುವವರಿಲ್ಲ ಎಂದರು.

ಡಿ. 23ರಂದು ದೇವನಹಳ್ಳಿಯಲ್ಲಿ ನಡೆದ ರೈತರ ದಿನಾಚರಣೆಯಲ್ಲಿ ರೈತರನ್ನು ಅವಮಾನಿಸಿದ ರೀತಿ ಖಂಡನೀಯ. ಕೆಲಸ ರಾಜಕೀಯ ಪಕ್ಷಗಳು ರೈತರ ಒಗ್ಗಟ್ಟು ಮುರಿಯುತ್ತಿವೆ. ದೇಶದಲ್ಲಿ ಹುಟ್ಟಿದ ಎಲ್ಲರೂ ದೇಶ ಕಾಯುವ ಯೋಧರನ್ನು ಮತ್ತು ಅನ್ನದಾತರನ್ನು ನೆನಪಿಸಿಕೊಳ್ಳದಿದ್ದರೆ ಜನ್ಮ ಸಾರ್ಥಕವಾಗದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry