7

‘ ಮತದಾರರು ತಕ್ಕ ಪಾಠ ಕಲಿಸಲಿ’

Published:
Updated:

ಕೂಡ್ಲಿಗಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಶೈವರು, ಧರ್ಮ ಛಿದ್ರಗೊಳಿಸುವ ನಾಯಕರಿಗೆ ತಕ್ಕ ಪಾಠ ಕಲಿಸಬೇಕು. ಈ ಮೂಲಕ ಸಮಗ್ರ ವೀರಶೈವ ಲಿಂಗಾಯತ ಜನಾಂಗ ತಮ್ಮ ಶಕ್ತಿ ಪ್ರದರ್ಶನ ತೋರಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಕೊಟ್ಟೂರು ಪಟ್ಟಣದಲ್ಲಿ ಅಗಡಿ ಹಿರೇಮಠದ ಬಂಧುಗಳು ಸೋಮವಾರ ಅಯೋಜಿಸಿದ್ದ ನಂದೀಶ್ವರ ಸ್ವಾಮಿ ಮತ್ತು ವೀರಭದ್ರೇಶ್ವರ ಸ್ವಾಮಿಯ ರುದ್ರಾಭಿಷೇಕದಲ್ಲಿ ಪಾಲ್ಗೊಂಡ ಬಳಿಕ ನಡೆದ ಧರ್ಮ ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೀರಶೈವರಲ್ಲಿ ಸ್ವಾಭಿಮಾನದ ಕೊರತೆಯಿಂದ ಎಲ್ಲಾ ರಂಗದಲ್ಲಿ ಸ್ಥಾನ ಕಳೆದುಕೊಳ್ಳುವ ಅಪಾಯ ಬಂದೊದಗಿದೆ. ಯಾವುದೇ ಕಾರಣಕ್ಕೂ ಸ್ವಾಭಿಮಾನ ಮತ್ತು ಸಮಗ್ರ ಧರ್ಮಕ್ಕೆ ತೊಂದರೆ ಬರದಂತೆ ಗಮನ ಹರಿಸಬೇಕು.

ಜನಾಂಗದ ಒಳ್ಳೆತನ ಬಳಸಿಕೊಂಡು‌ ಕೆಲ ರಾಜಕಾರಣಿಗಳು ಧರ್ಮ ಒಡೆಯುವ ಹುನ್ನಾರಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಕ್ರಿಯೆಗಳಿಗೆ ಎದುರೇಟು ನೀಡಲೇಬೇಕು. ಅದು ಮುತ್ಸದ್ಧಿತನದಿಂದಾಗಲೀ ಮತ್ತು ಮತ ಚಲಾವಣೆಯಿಂದಾಗಲೀ ಈ ಜರೂರಾಗಿ ನಡೆಯಬೇಕು ಎಂದು ಹೇಳಿದರು.

ವೀರಶೈವ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಪ್ರಾಚೀನ ಸಂಸ್ಕೃತಿ, ಸಂಸ್ಕಾರ ಹೊಂದಿದ ಧರ್ಮಕ್ಕೆ ಒಮ್ಮೆಲೆ ಸಂಚಕಾರ ತಂದೊಡ್ಡುವ ಷಡ್ಯಂತ್ರ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವರಿಗೆ ಹೊರಗಿನ ವೈರಿಗಳು ಇಲ್ಲ. ಜನಾಂಗದಲ್ಲಿಯೇ ಇಂತಹ ವೈರಿಗಳು ಇದ್ದಾರೆ. ಇವರ ಆಟ ಎಷ್ಟೇ ಸಾಗಿದರೂ ಧರ್ಮ ಒಡೆಯುವ ಪ್ರಯತ್ನ ಸಾಗುವುದಿಲ್ಲ ಎಂದು ಹೇಳಿದರು.

ಭೂತಭುಜಂಗ ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗದಗನಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶ ಚರಿತ್ರಾರ್ಹವಾದುದಾಗಿದೆ. ರಾಜಕೀಯ ಕಾರಣಕ್ಕಾಗಿ ವೀರಶೈವ ಸಮಾಜವನ್ನು ಒಡೆಯುವ ಶಕ್ತಿಗಳು ಈಗಲಾದರೂ ಬುದ್ಧಿ ಕಲಿಯಬೇಕು. ಇಲ್ಲದಿದ್ದರೆ ಜನಾಂಗದವರೇ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದರು.

ಚನ್ನಗಿರಿಯ ಕೇದಾರ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಗಾಯಕ ಎನ್.ಎಂ.ಪ್ರಾಣಲಿಂಗ ಸ್ವಾಮಿಯವರನ್ನು ಜಗದ್ಗುರುಗಳು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಅಗಡಿ ಹಿರೇಮಠದ ವೀರೇಶಯ್ಯ, ಎ.ಎಚ್.ಎಂ. ಮಲ್ಲಿಕಾರ್ಜುನಯ್ಯ, ವೀರಯ್ಯ, ಷಡಕ್ಷರಯ್ಯ, ರಾಜಶೇಖರ, ಎ.ಎಚ್.ಎಂ. ಪ್ರಭುಲಿಂಗ ಶಿಕ್ಷಕ ಗಿರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry