7

ತುಮಕೂರು ವಿಶ್ವವಿದ್ಯಾಲಯ ಕುಲಪತಿ ಆಯ್ಕೆಗೆ ಹಗ್ಗಜಗ್ಗಾಟ: ಸಭೆ ಮುಂದಕ್ಕೆ

Published:
Updated:
ತುಮಕೂರು ವಿಶ್ವವಿದ್ಯಾಲಯ ಕುಲಪತಿ ಆಯ್ಕೆಗೆ ಹಗ್ಗಜಗ್ಗಾಟ: ಸಭೆ ಮುಂದಕ್ಕೆ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಸಂಬಂಧ ಡಿ.25ರಂದು ಬೆಂಗಳೂರಿನಲ್ಲಿ ನಡೆದ ಶೋಧನಾ ಸಮಿತಿಯ ಸಭೆಯಲ್ಲಿ ಸದಸ್ಯರ ನಡುವಿನ ಹಗ್ಗ ಜಗ್ಗಾಟದಿಂದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಕುಲಪತಿ ಆಯ್ಕೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚನೆಯಾಗಿದೆ. ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ, ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಡಾ.ಸತೀಶ್ ಕುಲಕರ್ಣಿ, ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಜೈರೂಪ್ ಸಿಂಗ್ ಸದಸ್ಯರಾಗಿದ್ದಾರೆ.

ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಪ್ರೊ.ಲಿಂಗೇಗೌಡ, ಪ್ರೊ.ಸಿದ್ದೇಗೌಡ, ಡಾ.ಬಸವರಾಜ ಕಲ್ಗುಡಿ, ಡಾ.ಶರತ್ ಅನಂತಮೂರ್ತಿ, ಡಾ.ಸಂಗಮೇಶ್ ಪಾಟೀಲ್ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಗೆ ಬಂದಿವೆ. ಮೂರು ಹೆಸರುಗಳನ್ನು ಶಿಫಾರಸು ಮಾಡುವುದು ಸಮಿತಿಯ ಕೆಲಸ. ವಿಶೇಷವಾಗಿ ಡಾ.ಬಸವರಾಜ ಕಲ್ಗುಡಿ, ಡಾ.ಸಂಗಮೇಶ್ ಪಾಟೀಲ್ ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸುವಾಗ ವಿವಾದ ಉಂಟಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಾ.ಸಂಗಮೇಶ್ ಪಾಟೀಲ್ ಅವರ ಅಕಾಡೆಮಿಕ್ ಸಾಧನೆಗಿಂತ ಡಾ.ಕಲ್ಗುಡಿ ಅವರ ಸಾಧನೆ ಸಾಕಷ್ಟು ದೊಡ್ಡದು ಎಂದು ವಾದಿಸಿದ ಹೊರ ರಾಜ್ಯದ ಸದಸ್ಯರು ಅವರ ಹೆಸರನ್ನು ಅಂತಿಮಗೊಳಿಸಲು ಪಟ್ಟು ಹಿಡಿದರು. ಡಾ.ಸಂಗಮೇಶ್ ಪಾಟೀಲ್ ಅವರ ಬಯೋಡೇಟಾ ನೋಡಿದಾಗ ತೃಪ್ತಿಕರವಾಗಿಲ್ಲ ಎಂದು ಕೆಲವರು ವಾದಿಸಿದರು. ಸಿದ್ದೇಗೌಡ ಅವರ ಹೆಸರು ಸಹ ಪ್ರಸ್ತಾಪವಾಗಿತ್ತು. ಆದರೆ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪಾಟೀಲ್ ಅವರ ಹೆಸರನ್ನು ಎರಡು ತಿಂಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಸರ್ಕಾರ ಶಿಫಾರಸು ಮಾಡಿತ್ತು. ರಾಜ್ಯಪಾಲರು ಒಪ್ಪದೆ ಕಡತವನ್ನು ವಾಪಸ್ ಮಾಡಿದರು. ಈ ವಿಷಯವೂ ಪ್ರಮುಖವಾಗಿ ಸಭೆಯಲ್ಲಿ ಕಾವೇರಿದ ಚರ್ಚೆಗೆ ಅವಕಾಶ ನೀಡಿದೆ.

ಒಮ್ಮೆ ತಿರಸ್ಕೃತವಾದ ಹೆಸರನ್ನು ಮತ್ತೆ ಏಕೆ ಸೇರಿಸಬೇಕು ಎಂದೂ ಕೆಲವರು ಸದಸ್ಯರು ವಾದಿಸಿದ್ದಾರೆ. ಈ ವೇಳೆ ಕಾವೇರಿದ ಚರ್ಚೆಯೂ ಸಭೆಯಲ್ಲಿ ನಡೆಯಿತು. ಪಾಟೀಲರ ಹೆಸರನ್ನು ಸೇರಿಸಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಒತ್ತಡ ಇತ್ತು ಎನ್ನುವ ವದಂತಿಯೂ ಹಬ್ಬಿದೆ.

ಈ ನಡುವೆ ಡಾ.ಬಸವರಾಜ ಕಲ್ಗುಡಿ ಅವರಿಗೆ ಅವರತ್ತ ಮೂರೂವರೆ ವರ್ಷವಾಗಿದೆ. ಅವರು ಕುಲಪತಿಯಾಗಿ ನಾಲ್ಕು ವರ್ಷ ಪೂರೈಸುವುದಿಲ್ಲ ಎಂಬ ವಾದವನ್ನು ಒಬ್ಬ ಸದಸ್ಯರು ಮಂಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ ನಾಲ್ಕು ವರ್ಷ ಪೂರೈಸಲೇ ಬೇಕು ಎನ್ನುವ ನಿಯಮ ಇಲ್ಲ. ವಿಶ್ವವಿದ್ಯಾಲಯ ಕಾಯ್ದೆಯಲ್ಲಿ 67 ವರ್ಷ ಮೀರಿದವರನ್ನು ಕುಲಪತಿ ಮಾಡಬಾರದು ಎಂಬ ಅಂಶ ಇದೆ. ತುಮಕೂರು ವಿಶ್ವವಿದ್ಯಾಲಯ ಕುಲಪತಿ ಆಯ್ಕೆಗೆ ಕೊಟ್ಟ ಅಧಿಕೃತ ಜಾಹೀರಾತಿನಲ್ಲಿ 67ದ ಒಳಗೆ ಅಥವಾ ನಾಲ್ಕು ವರ್ಷ ಅವಧಿ ಯಾವುದು ಮುಂಚೆಯೋ ಅಲ್ಲಿಯವರೆಗೆ ಕುಲಪತಿ ಆಗಿರಬಹುದು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

ಕ್ರಿಸ್‌ಮಸ್ ರಜೆ ದಿನ ಸಭೆ ನಡೆದಿದ್ದರಿಂದ ಸರ್ಕಾರ ಮಟ್ಟದ್ಲಲಿ ಉನ್ನತ ಅಧಿಕಾರಿಗಳು ರಜೆಯಲ್ಲಿದ್ದರು. ಕುಲಪತಿ ವಯೋಮಿತಿಯ ಆಯ್ಕೆ ಸಂಬಂಧ ಕಾಯ್ದೆಯಲ್ಲಿರುವ ಅಂಶಗಳ ಬಗ್ಗೆ ತಿಳಿಯಲು ಇದು ಅಡ್ಡಿಯಾಗಿದೆ. ಈ ಕಾರಣಕ್ಕೆ ಸಭೆ ಮುಂದೂಡಲಾಯಿತು ಎನ್ನಲಾಗುತ್ತಿದೆ.

ಈ ಹಿಂದೆ ಕೆಲವರನ್ನು ಕಡಿಮೆ ಅವಧಿಗೆ ಕುಲಪತಿ ಮಾಡಿದ್ದ ಉದಾಹರಣೆಗಳು ಇವೆ. ಆದ್ದರಿಂದ ನಿಯಮಾನುಸಾರ ಕಲ್ಗುಡಿ ಹೆಸರು ಸೇರಿಸಲು ಯಾವುದೇ ಅಡ್ಡಿ ಇಲ್ಲ ಎನ್ನುವ ವಾದವನ್ನು ಒಬ್ಬ ಸದಸ್ಯರು ಮಂಡಿಸಿದರು. ನಂತರ ಅರ್ಹತೆಯ ವಿಷಯ ಚರ್ಚೆಗೆ ಬಂದಿತು. ಪಾಟೀಲ್ ಅವರಿಗಿಂತ ಕಲ್ಗುಡಿ ಉತ್ತಮ ಎನ್ನುವ ವಾದ– ವಾಗ್ವಾದ ನಡೆದು ಸಭೆಯನ್ನು ಮುಂದೂಡಲಾಯಿತು ಎಂದು ಬಲ್ಲ ಮೂಲಗಳ ಮಾಹಿತಿ ನೀಡಿವೆ. ಉನ್ನತ ಶಿಕ್ಷಣ ಸಚಿವರ ಒತ್ತಡವೂ ಈ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry