6

ಸದ್ದು ಮಾಡುತ್ತಿದೆ ‘ರಾಜರಥ’ ಚಿತ್ರದ ಟ್ರೇಲರ್

Published:
Updated:
ಸದ್ದು ಮಾಡುತ್ತಿದೆ ‘ರಾಜರಥ’ ಚಿತ್ರದ ಟ್ರೇಲರ್

‘ಒಂದಾನೊಂದು ಕಾಲ್ದಲ್ಲಿ, ಒಂದಾನೊಂದು ಊರಲ್ಲಿ, ಒಬ್ಳು ಸುಂದರವಾದ ಹುಡ್ಗಿ. ಅವಳಿಗೆ ಒಬ್ಬ ಹುಡ್ಗ ಇದ್ದ. ಆದ್ರೆ ಅವ್ನು ಹೀರೊ ಅಲ್ಲ...’ – ಹೀಗೆ ಸಣ್ಣದೊಂದು ಕನ್‌ಪ್ಯೂಷನ್‌ ಇಟ್ಟುಕೊಂಡೇ ಶುರುವಾಗುವ ‘ರಾಜರಥ’ ಸಿನಿಮಾದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸದ್ದು ಮಾಡುತ್ತಿದೆ.

ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಆರಂಭಿಕ ಹಂತದಿಂದಲೇ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಇತ್ತೀಚೆಗೆ ಬಿಡುಗಡೆಯಾಗಿರುವ ಎರಡೂವರೆ ನಿಮಿಷದ ಟ್ರೇಲರ್ ಆ ನಿರೀಕ್ಷೆಗೆ ಮತ್ತಷ್ಟು ಕೌತುಕದ ಒಗ್ಗರಣೆ ಹಾಕುವಂತಿದೆ.

ಅಂದಹಾಗೆ ಈ ಚಿತ್ರದ ಹೀರೊ ನಿರೂಪ್‌ ಭಂಡಾರಿ. ಆದರೆ ಈ ಚಿತ್ರ ಅವರ ಕಥೆ ಅಲ್ಲವಂತೆ. ಇದು ‘ರಾಜರಥ’ದ ಕಥೆ. ಮೂಕ ರಾಜರಥ ಬಸ್‌ಗೆ ಪುನೀತ್‌ ರಾಜ್‌ಕುಮಾರ್‌ ತಮ್ಮ ಶಾರೀರ ಕೊಟ್ಟು ಅದರ ಕಥೆಯನ್ನು ಕೇಳುವಂತೆ ಮಾಡಿರುವುದೂ ಟ್ರೇಲರ್‌ನ ವಿಶೇಷ.

ಕಾಲೇಜು ಕಥೆ, ಚೆಂದದ ಹುಡುಗಿ, ಜೋಕರ್‌ ಅಂಕಲ್‌, ಒಮ್ಮೆ ನಾಯಕನಂತೆಯೂ ಹಾಗೂ ಮತ್ತೊಮ್ಮೆ ಹಾಸ್ಯಗಾರನಂತೆಯೂ ಕಾಣುವ ನಾಯಕ ಇಂಥ ಪಾತ್ರಗಳನ್ನು ಇಟ್ಟುಕೊಂಡು ರಂಜನಾಪ್ರಧಾನ ಕಥೆಯನ್ನು ರಾಜರಥ ತನ್ನೊಳಗೆ ಇರಿಸಿಕೊಂಡಿರುವ ಸುಳಿವು ಟ್ರೇಲರ್‌ನಲ್ಲಿಯೇ ಸಿಗುವಂತಿದೆ. ಆದರೆ ಇಷ್ಟೇ ಸಿನಿಮಾ ಅಲ್ಲ, ‘ಈ ಕಥೆಗೆ ಇನ್ನೊಂದ್‌ ಮುಖಾನೂ ಇದೆ’ ಎನ್ನುತ್ತಲೇ ’ಈ ಬೆಂಕಿಯಿಂದ ದೀಪಾನೂ ಬೆಳಗಬಹುದು, ಮನೆನೂ ಸುಡಬಹುದು. ನಂಗೆ ಎರಡೂ ಮಾಡಕ್ಕೆ ಬರತ್ತೆ’ ಎನ್ನುವ ಉರಿಜ್ವಾಲೆಯ ಡೈಲಾಗ್‌ ಮೂಲಕ ಆರ್ಯನ ಪಾತ್ರವನ್ನೂ ಪರಿಚಯಿಸಲಾಗಿದೆ. ಅಂದಮೇಲೆ ಆ್ಯಕ್ಷನ್‌ಪ್ರಿಯರಿಗೂ ಇಲ್ಲಿ ಔತಣ ಕಾದಿದೆ ಅಂತಾಯ್ತು. ಜನರಿಗೆ ಇಷ್ಟವಾಗಲು ಇವಿಷ್ಟನ್ನು ಹದವಾಗಿ ಬೆರೆಸಿದರೆ ಸಾಕಲ್ಲವೇ?

ಎರಡೂವರೆ ಗಂಟೆಯ ಸಿನಿಮಾವನ್ನು ಎರಡೂವರೆ ನಿಮಿಷದ ಟ್ರೈಲರ್‌ನಲ್ಲಿ ಅಳೆಯಲು ಸಾಧ್ಯವಿಲ್ಲ. ಯುಟ್ಯೂಬ್‌ನಲ್ಲಿ ಸುಮಾರು 6 ಲಕ್ಷ ಮಂದಿ ಟ್ರೇಲರ್ ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಟ್‌ ಸಿಕ್ಕಿದ ಹಾಗೆ ಬೆಳ್ಳಿತೆರೆಯ ಮೇಲೂ ‘ರಾಜರಥ’ ಹಿಟ್‌ ಆಗುತ್ತದೆಯಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.

ಪುನೀತ್‌ ಅವರ ಮಾತಿನಲ್ಲಿಯೇ ಹೇಳುವುದಾದರೆ ‘ಪಿಕ್ಚರ್‌ ಇನ್ನೂ ಬಾಕಿ ಇದೆ!’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry