7

ಗಣಿಗಾಗಿ ಭೂಮಿ ನುಂಗಿದ ಸಿದ್ದರಾಮಯ್ಯ

Published:
Updated:
ಗಣಿಗಾಗಿ ಭೂಮಿ ನುಂಗಿದ ಸಿದ್ದರಾಮಯ್ಯ

ತೀರ್ಥಹಳ್ಳಿ: ‘ಬಡವರಿಗೆ ಭೂಮಿ ಕೊಡಿಸಿದ ದೇವರಾಜ ಅರಸು ಎಲ್ಲಿ; ಗಣಿಗಾಗಿ ಭೂಮಿ ನುಂಗಿದ ಸಿದ್ದರಾಮಯ್ಯ ಎಲ್ಲಿ? ಇವರಿಬ್ಬರ ನಡುವೆ ಹೋಲಿಕೆ ಮಾಡಲು ಸಾಧ್ಯವೇ?’

ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹರಿಹಾಯ್ದರು. ತೀರ್ಥಹಳ್ಳಿಯಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ರೈತರ ಪರವಾಗಿ 40 ವರ್ಷಗಳಿಂದ ನಾನು ಹೋರಾಟ ಮಾಡುತ್ತಿದ್ದೇನೆ. ನನ್ನನ್ನು ಪ್ರಶ್ನಿಸುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ರೈತರ ಹಸಿರು ಶಾಲನ್ನು ಹೆಗಲ ಮೇಲೆ ಹಾಕಿ

ಕೊಂಡು ಪ್ರಮಾಣವಚನ ಸ್ವೀಕರಿಸಿದ್ದೇನೆ.

ರೈತರ ಸಾಲಮನ್ನಾ, ಬಡ್ಡಿರಹಿತ ಸಾಲ, ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಪೂರೈಕೆ ಸೇರಿದಂತೆ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಸುಳ್ಳು ಹೇಳುವ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲು ಜನರು ಒಂದಾಗ ಬೇಕು’ ಎಂದು ಹೇಳಿದರು.

‘ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸೋತ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಪಹಾಸ್ಯಕ್ಕೀಡಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶೇ 79ಕ್ಕೂ ಹೆಚ್ಚು ಮತಗಳು ಲಭಿಸಲಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಸಿದ್ದರಾಮಯ್ಯ ಸರ್ಕಾರವನ್ನು ತೊಲಗಿಸಿದ ನಂತರ ಒಳ್ಳೆಯ ದಿನಗಳು ಆರಂಭವಾಗಲಿವೆ’ ಎಂದು ಅವರು ಹೇಳಿದರು.

‘ಅರಣ್ಯ ಒತ್ತುವರಿ ಮಾಡಿದ ರೈತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 1885ರಲ್ಲಿ ವಿಧಾನಸಭೆಯಲ್ಲಿ 224 ಶಾಸಕರ ಪೈಕಿ ನಾನೊಬ್ಬನೇ ಹೋರಾಟ ಮಾಡಿದ್ದೇನೆ. ಅರಣ್ಯ ಸಚಿವರಾಗಿದ್ದ ರಾಚಯ್ಯ ಅವರು ಒತ್ತುವರಿ ತೆರವುಗೊಳಿಸುವ ಕಾನೂನು ರಚಿಸಲು ಮುಂದಾದಾಗ ರೈತರ ಸ್ಥಿತಿಯನ್ನು ವಿವರಿಸಿ ಕಣ್ಣೀರು ಹಾಕಿದ್ದೆ. ಮಸೂದೆ ಪಾಸು ಮಾಡುವುದನ್ನು ತಡೆದಿದ್ದೆ. ಈಗ ಕಾಗೋಡು ತಿಮ್ಮಪ್ಪ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ಮನೆಯಿಂದ ಹೊರಗೆ ಹೋದ ಹೆಣ್ಣುಮಕ್ಕಳು ಸುರಕ್ಷಿತವಾಗಿ ಮರಳುತ್ತಾರೆ ಎಂಬ ಖಾತರಿ ಇಲ್ಲದಂತಾಗಿದೆ. ಜನರತಲೆ ಹಾಳು ಮಾಡಿ ವೋಟ್‌ ಕಿತ್ತುಕೊಳ್ಳುವ ಕಾಂಗ್ರೆಸ್‌ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.

ಮುಖಂಡ ಆರಗ ಜ್ಞಾನೇಂದ್ರ ಮಾತನಾಡಿ, ‘ಮತ ಖರೀದಿಗೆ ಹೊರಟಿರುವ ಇಬ್ಬರು ನನ್ನ ಎದುರು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಲಿ. ಹಣದ ದರ್ಪ ತೋರುತ್ತಿರುವ ಇಬ್ಬರಿಗೆ ಸವಾಲು ಹಾಕಲು ನಾನು ಸಿದ್ಧನಿದ್ದೇನೆ. ಕ್ಷೇತ್ರದ ಶಾಸಕರು ಎಷ್ಟು ಅಸಮರ್ಥರು ಎಂಬುದು ಜನರಿಗೆ ಮನವರಿಕೆಯಾಗಿದೆ’ ಎಂದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಕೋಣಂದೂರು ಮೋಹನ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಆಯನೂರು ಮಂಜುನಾಥ್‌, ಕುಮಾರ್‌ ಬಂಗಾರಪ್ಪ, ಶೋಭಾ ಕರಂದ್ಲಾಜೆ, ತೇಜಸ್ವಿನಿ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಭಾನುಪ್ರಕಾಶ್‌, ಡಿ.ವೀರಯ್ಯ ಮಾತನಾಡಿದರು.

ಮುಖಂಡರಾದ ಹರತಾಳು ಹಾಲಪ್ಪ, ಎಂ.ಪಿ.ರೇಣುಕಾಚಾರ್ಯ, ಸಿ.ಟಿ.ರವಿ, ಬಿ.ಸ್ವಾಮಿರಾವ್‌, ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾದ್ಯಕ್ಷ ಬೇಗುವಳ್ಳಿ ಸತೀಶ್‌, ಮುಖಂಡರಾದ ದತ್ತಾತ್ರಿ, ಚನ್ನಬಸಪ್ಪ, ಡಿ.ಎಸ್‌.ಅರುಣ್‌, ಗುರುಮೂರ್ತಿ, ಮೇಘರಾಜ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry