7

‘ಜಿಲ್ಲೆಗೆ ₹ 37 ಕೋಟಿ ಅನುದಾನ’

Published:
Updated:

ಬಾಗಲಕೋಟೆ: ‘ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಾಗಲಕೋಟೆ ವಿಭಾಗದಲ್ಲಿ ಹೊಸ ಬಸ್ ಖರೀದಿ ಹಾಗೂ ಬಸ್ ನಿಲ್ದಾಣ ಕಟ್ಟಡಕ್ಕೆ ₹ 37 ಕೋಟಿ ಅನುದಾನ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಇಲ್ಲಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಕ್ಕೆ ನೀಡಲಾದ ನಾಲ್ಕು ಹೊಸ ನಾನ್ ಎಸಿ ಸ್ಲೀಪರ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ, ನಂತರ ನವನಗರದ ಬಸ್ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಂಸ್ಥೆ ನಷ್ಟದಲ್ಲಿದ್ದರೂ ಜನರಿಗೆ ಉತ್ತಮ ಸೇವೆಗಳನ್ನು ನೀಡುತ್ತಾ ಬಂದಿದೆ. ಸರ್ಕಾರ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ’ ಎಂದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ಬಾಗಲಕೋಟೆ ವಿಭಾಗದಿಂದ ಈಗಾಗಲೇ 642 ಬಸ್‌ಗಳು ಸಂಚರಿಸುತ್ತಿವೆ. 627 ಹಳ್ಳಿಗಳಿಗೆ ಒಟ್ಟು 624 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. 73 ಸಾವಿರ ಬಸ್‌ಪಾಸ್‌ಗಳನ್ನು ನೀಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಗೆ 80 ಹೊಸ ಬಸ್‌ಗಳನ್ನು ನೀಡಲಾಗುವುದು. ಈಗಾಗಲೇ 8 ನಾನ್ ಎಸಿ ಸ್ಲೀಪರ್‌ಗಳು ಸೇರಿದಂತೆ 43 ಹೊಸ ಬಸ್‌ಗಳನ್ನು ನೀಡಲಾಗಿದೆ. ಉಳಿದ 37 ಬಸ್‌ಗಳನ್ನು ಶೀಘ್ರದಲ್ಲಿಯೇ ನೀಡಲಾಗುತ್ತಿದೆ. ಅಲ್ಲದೇ 60 ಹಳೆಯ ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ. ಬಾಗಲಕೋಟೆ ನಗರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 20 ಮಿನಿ ಬಸ್‌ಗಳನ್ನು ನೀಡಲಾಗಿದೆ’ ಎಂದರು.

‘ಸಂಸ್ಥೆಯಿಂದ ನಿರ್ಮಿಸಲಾಗುತ್ತಿರುವ 24 ಹೊಸ ಬಸ್ ನಿಲ್ದಾಣದ ಪೈಕಿ ಬಾಲಕೋಟೆಯಲ್ಲಿ 9 ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ₹ 37.65 ಕೋಟಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಪ್ರತಿ ತಿಂಗಳು 2ನೇ ತಾರೀಖಿನಂದು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿರಿಯ ನಾಗರಿಕರು ಮತ್ತು ಮಹಿಳೆಯರ ಆಹವಾಲು ಸ್ವೀಕರಿಸುವ ಸಲುವಾಗಿ ಪ್ರತಿ ತಿಂಗಳು 29ನೇ ತಾರೀಖಿನಂದು ಸಂವೇದನೆ, ಪ್ರತಿ ತಿಂಗಳ 2ನೇ ತಾರೀಖಿನಂದು ಬಸ್ ನಿಲ್ದಾಣದಲ್ಲಿ ಜನಸ್ಪಂದನ, ಅಲ್ಲದೇ ಪ್ರತಿ 6 ತಿಂಗಳಿಗೊಮ್ಮೆ ಜನಪ್ರತಿನಿಧಿಗಳನ್ನೊಳಗೊಂಡು ವಿಭಾಗ ಮಟ್ಟದಲ್ಲಿ ಸಾರಿಗೆ ಅದಾಲತ್ ಸಭೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ಗೋವಾ ರಾಜ್ಯಕ್ಕೆ ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದುಡಿಮೆಗೆ ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ‘ಬಾಗಲಕೋಟೆ–ಗೋವಾ’ ಸಂಚಾರಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಬಾಗಲಕೋಟೆ–ಬೆಂಗಳೂರು ಮಾರ್ಗವಾಗಿ ಹೊಸ ಎಸಿ ಬಸ್‌ಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರಗೆ ಮನವಿ ಮಾಡಿದರು.

ಈ ವೇಳೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಣಾಧಿಕಾರಿ ವಿಕಾಸ್ ಸುರಳಕರ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಬಳ್ಳಾರಿ, ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಗೋಪಾಲಕೃಷ್ಣ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry