7
ವಿಭಾಗ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ರಾಂಪುರೆ ಅಭಿಪ್ರಾಯ

ಎಲ್ಲ ಪಕ್ಷಗಳಿಂದಲೂ ದಲಿತರಿಗೆ ಅನ್ಯಾಯ

Published:
Updated:

ಕಲಬುರ್ಗಿ: ‘ಸಂವಿಧಾನದತ್ತ ಮೀಸಲಾತಿಯಿಂದ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಸದರು, ಶಾಸಕರು ಶೋಷಿತರ ಪರವಾಗಿ ನಿಲ್ಲುತ್ತಿಲ್ಲ. ಎಲ್ಲ ಪಕ್ಷಗಳಲ್ಲಿನ ದಲಿತ ನಾಯಕರು ಆಯಾ ಪಕ್ಷಗಳ ಹೈಕಮಾಂಡ್‌ಗೆ ನಿಷ್ಠರಾಗಿದ್ದಾರೆ’ ಎಂದು ಅಂಬೇಡ್ಕರ್‌ ವಾದಿ ಬಿ.ಬಿ.ರಾಂಪುರೆ ಅಭಿಪ್ರಾಯಪಟ್ಟರು.

ಇಲ್ಲಿನ ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಶನಿವಾರ ಹಮ್ಮಿಕೊಂಡಿದ್ದ ‘ಕೋರೆಗಾಂವ ವಿಜಯೋತ್ಸವ 200 ವರ್ಷಗಳು–ಮುಂದೇನು?’ ವಿಷಯ ಕುರಿತ ವಿಭಾಗ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದಲಿತರನ್ನು ಮತ ಬ್ಯಾಂಕ್‌ ಎಂದು ಪರಿಗಣಿಸಲಾಗಿದೆ. ಮತ ಪಡೆದ ನಂತರ ದಲಿತರತ್ತ ಯಾರೂ ತಿರುಗಿ ನೋಡುತ್ತಿಲ್ಲ. ವಿಜಯಪುರದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಬಹುತೇಕ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಆದರೆ, ಮೀಸಲಾತಿಯಿಂದ ಆಯ್ಕೆಯಾದ ಸಂಸದ ಹಾಗೂ ಶಾಸಕರು ಈ ಬಗ್ಗೆ ಚಕಾರ ಎತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘2018ರಲ್ಲಿ ಮತ್ತೆ ಚುನಾವಣೆ ಬರುತ್ತಿದೆ. ಯಾವ ಪಕ್ಷಗಳ ಅನ್ಯಾಯ ಮಾಡಿವೆ ಎಂಬುದನ್ನು ದಲಿತರು ತಿಳಿದುಕೊಳ್ಳಬೇಕು. ಮತವನ್ನು ಮಾರಿಕೊಳ್ಳಬಾರದು. ಮತದಾನ ಎಂಬ ಅಸ್ತ್ರವನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಹುಜನ ಚಳವಳಿ ಮುಖಂಡ ಪ್ರೊ.ಹರಿರಾಮ ಮಾತನಾಡಿ, ‘1818ರಲ್ಲಿ ಪೇಶ್ವೆಗಳ ಜಾತೀಯತೆ ಹಾಗೂ ಅಸಮಾನತೆ ವಿರುದ್ಧ 500 ಮಹರ್ ಸೈನಿಕರು ದಂಗೆ ಎದ್ದಿದ್ದರು. ಪೇಶ್ವೆಗಳನ್ನು ಸೆದೆಬಡಿದು ತಕ್ಕ ಪಾಠ ಕಲಿಸಿದ್ದರು. ಈ ಕೋರೆಗಾಂವ ವಿಜಯೋತ್ಸವಕ್ಕೆ ಈಗ 200 ವರ್ಷಗಳು. ಆದರೆ, ಪೇಶ್ವೆ ಮನಸ್ಥಿತಿಯ ನಾಯಕರು ಈಗಲೂ ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋರೆಗಾಂವ ಯುದ್ಧ ದಲಿತರಿಗೆ ಸ್ಫೂರ್ತಿದಾಯಕ. ಅಂಥ ಚಳವಳಿಗಾಗಿ ಮತ್ತೆ ಸಂಘಟಿತರಾಗಬೇಕಾಗಿದೆ. ಯುದ್ಧದ ಬದಲು ಚುನಾವಣೆಗಳಲ್ಲಿ ನಮ್ಮ ಶಕ್ತಿ ತೋರಿಸಬೇಕಾಗಿದೆ. ಈ ಮೂಲಕ ಮನುವಾದಿಗಳನ್ನು ಅಧಿಕಾರದಿಂದ ದೂರ ಉಳಿಸುವ ಕೆಲಸ ಮಾಡಬೇಕಾಗಿದೆ’ ಎಂದು ಅವರು ಹೇಳಿದರು.

ಕೆ.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬಹುಜನ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳ ಸಂಘಟನೆಯ ಜತೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳುತ್ತಿದೆ. ವಿಚಾರ ಸಂಕಿರಣ, ಜಾಗೃತಿ ಜಾಥಾ ಹಾಗೂ ಪ್ರತಿಭಟನೆಗಳ ಮೂಲಕ ದಲಿತ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ.ರಾಹುಲ ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ, ರಾಜ್ಯ ಕಾರ್ಯದರ್ಶಿ ಹಣಮಂತ ಬೋಧನಕರ್, ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ನಿಂಬಾಳಕರ್, ಶಿಕ್ಷಕ ಮನೋಜಕುಮಾರ ಭಾಗೇಕರ್, ಉಪನ್ಯಾಸಕ ಡಾ.ರವೀಂದ್ರನಾಥ ಹೊಸ್ಮನಿ, ಶ್ರೀನಿವಾಸ, ಆಳಂದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಿವಮೂರ್ತಿ ಶೀಲವಂತ, ಜಿಲ್ಲಾ ಘಟಕದ ಸಂಯೋಜಕ ಅನೀಲ ಟೆಂಗಳಿ, ಅಧ್ಯಕ್ಷ ಪೃಥ್ವಿರಾಜ ಬೋಧನಕರ್ ಇದ್ದರು. ಕೆ.ಮಹೇಶ ಸ್ವಾಗತಿಸಿದರು.

***

ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು. ಅದರ ಬದಲಾವಣೆಗೆ ಅವಕಾಶ ನೀಡಬಾರದು. ಸಂವಿಧಾನದ ವಿರುದ್ಧ ಬರುವ ಹೇಳಿಕೆಗೆಳನ್ನು ದಲಿತ ಸಮುದಾಯ ಖಂಡಿಸಬೇಕು.

-ಬಿ.ಬಿ.ರಾಂಪುರೆ, ಅಂಬೇಡ್ಕರ್‌ ವಾದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry