7
ಅಮೃತಾ ಕಾಲೇಜು ಕ್ಯಾಂಪಸ್ ಉದ್ಘಾಟನೆ, ಬ.ವೀ.ವಿ. ಸಂಘದ 111ನೇ ವಾರ್ಷಿಕೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗಿ

‘ಯುವಜನರು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ’

Published:
Updated:
‘ಯುವಜನರು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ’

ಬಿಡದಿ (ರಾಮನಗರ): ಯುವಜನರು ಕೇವಲ ಉದ್ಯೋಗ ಗಳಿಕೆಗೆ ಸೀಮಿತಗೊಳ್ಳಬೇಡಿ. ಸ್ವಂತ ಉದ್ದಿಮೆ ಆರಂಭಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ....ಹೀಗೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್. ಇಲ್ಲಿನ ಅಮೃತಾ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಸೈನ್ಸ್ ಕಾಲೇಜಿನ ಆವರಣದಲ್ಲಿ ಶನಿವಾರ ನೂತನ ಕ್ಯಾಂಪಸ್ ಉದ್ಘಾಟನೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ (ಬವೀವಿ) ಸಂಘದ 111ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಎಂದರೆ ಕೇವಲ ಪಠ್ಯ ಅಲ್ಲ. ಜ್ಞಾನ ಎಂದರೆ ಪದವಿ ಗಳಿಸುವುದಲ್ಲ. ಅದರೊಟ್ಟಿಗೆ ಬದಲಾಗುತ್ತಿರುವ ತಾಂತ್ರಿಕತೆಯನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವುದು ಅತಿಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

1906ರಲ್ಲಿ ಬಾಗಲಕೋಟೆಯಲ್ಲಿ ಸ್ಥಾಪನೆಯಾದ ಬ.ವೀ.ವಿ. ಸಂಘವು ಜ್ಞಾನಜ್ಯೋತಿ ಬಸವೇಶ್ವರರ ಆಶಯಗಳಿಗೆ ಅನುಗುಣವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ದಾನ ಮಾಡುತ್ತಾ ಬಂದಿದೆ. ಅವರಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದು ಮೆಚ್ಚುಗೆಯ ವಿಷಯ. ಜೊತೆಗೆ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ತೆರೆದು ಕಡಿಮೆ ದರದಲ್ಲಿ ಬಡವರಿಗೆ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಕೇಂದ್ರ ಸಂಸದೀಯ, ರಸಗೊಬ್ಬರ ಸಚಿವ ಎಚ್‌.ಎನ್‌. ಅನಂತಕುಮಾರ್ ಮಾತನಾಡಿ ‘ಈ ಭಾಗಕ್ಕೆ ಭೇಟಿ ಕೊಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕೋವಿಂದ್‌ ಪಾತ್ರರಾಗಿದ್ದಾರೆ. ಅವರನ್ನು ಭೇಟಿ ಮಾಡಿದ ಸಂದರ್ಭ ಹಳ್ಳಿಯೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದೆವು. ಅದಕ್ಕೆ ಅವರು ನಾನೂ ಮಣ್ಣಿನ ಮಗ, ಬಂದೇ ಬರುತ್ತೇನೆ ಎಂದು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡರು. ಬಡ ಕುಟುಂಬದಿಂದ ಬಂದ ಅವರು ಹಳ್ಳಿಯಿಂದ ದಿಲ್ಲಿಗೆ ತಲುಪಿದ ಅಸಮಾನ್ಯ ಪುರುಷ. ದಲಿತರು, ಶೋಷಿತರು, ವಂಚಿತರ ಪಾಲಿನ ಜ್ಯೋತಿಯಾಗಿ ಅವರು ಹೊರಹೊಮ್ಮಿದ್ದಾರೆ. ವಕೀಲರಾಗಿ, ರಾಜ್ಯಸಭಾ ಸದಸ್ಯರಾಗಿ ಅಪಾರ ಅನುಭವ ಹೊಂದಿದ್ದಾರೆ’ ಎಂದು ಬಣ್ಣಿಸಿದರು.

‘ನನ್ನ ಸಂಬಂಧಿಕರ ಮಗಳು ಅಮೃತಾಳ ಸವಿನೆನಪಿಗಾಗಿ ಈ ಕಾಲೇಜಿಗೆ ಆಕೆಯ ಹೆಸರಿಟ್ಟಿದ್ದು, ಅದನ್ನು ಬ.ವೀ.ವಿ. ಸಂಘ ವಹಿಸಿಕೊಂಡು ಯಶಸ್ಸಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದರು.

ರಾಜ್ಯಪಾಲ ವಜೂಭಾಯ್ ವಾಲಾ, ಸಂಸದ ಡಿ.ಕೆ. ಸುರೇಶ್, ಬ.ವೀ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ. ಗೌರವ ಕಾರ್ಯದರ್ಶಿ ಮಹೇಶ್‌ ಅಥಣಿ ಹಾಗೂ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry