ತೆರೆಗೆ ಬರಲು ಸಜ್ಜಾಗುತ್ತಿದೆ ‘ನಾಗವಲ್ಲಿ v/s ಆಪ್ತಮಿತ್ರರು’

7

ತೆರೆಗೆ ಬರಲು ಸಜ್ಜಾಗುತ್ತಿದೆ ‘ನಾಗವಲ್ಲಿ v/s ಆಪ್ತಮಿತ್ರರು’

Published:
Updated:
ತೆರೆಗೆ ಬರಲು ಸಜ್ಜಾಗುತ್ತಿದೆ ‘ನಾಗವಲ್ಲಿ v/s ಆಪ್ತಮಿತ್ರರು’

‘ಆಪ್ತಮಿತ್ರ’ ಸಿನಿಮಾದಲ್ಲಿ ಕಂಡ ನಾಗವಲ್ಲಿಯನ್ನು ಮರೆಯಲು ಯಾರಿಂದಾದರೂ ಸಾಧ್ಯವಿಲ್ಲ. ಅಂಥ ಪಾತ್ರ ಅದು. ‘ನಟ ವಿಷ್ಣುವರ್ಧನ್ ಮತ್ತು ನಟಿ ಸೌಂದರ್ಯಾ ಅವರ ಸಾವಿಗೂ ನಾಗವಲ್ಲಿಗೂ ಸಂಬಂಧ ಇದೆಯೇ’ ಎಂಬ ಪ್ರಶ್ನೆ ಕೂಡ ಒಂದು ಹಂತದಲ್ಲಿ ಕೆಲವರಲ್ಲಿ ಮೂಡಿತ್ತು.

‘ಈ ಪ್ರಶ್ನೆಗೆ ನಮ್ಮ ಸಿನಿಮಾದಲ್ಲಿ ಉತ್ತರವಿದೆ’ ಎನ್ನುತ್ತಿದೆ ‘ನಾಗವಲ್ಲಿ v/s ಆಪ್ತಮಿತ್ರರು’ ಚಿತ್ರತಂಡ. ಈ ಸಿನಿಮಾವನ್ನು ಫೆಬ್ರುವರಿ ಮೊದಲ ವಾರದ ವೇಳೆಗೆ ತೆರೆಗೆ ತರಬೇಕು ಎನ್ನುವುದು ಚಿತ್ರತಂಡದ ಹಂಬಲ.

ಸಿನಿಮಾ ಹಾಡುಗಳ ಬಿಡುಗಡೆ ನೆವದಲ್ಲೇ ಸಿನಿಮಾ ಬಗ್ಗೆಯೂ ಮಾಹಿತಿ ನೀಡಲು ತಂಡ ಸುದ್ದಿಗೋಷ್ಠಿ ಕರೆದಿತ್ತು. ‘ನಾಗವಲ್ಲಿ ಬದುಕಿದ್ದ ಕೇರಳದ ಅನಂತ ಪದ್ಮನಾಭ ಅರಮನೆಯಲ್ಲೇ ಸಿನಿಮಾ ಚಿತ್ರೀಕರಣ ನಡೆಸಿದ್ದೇವೆ. ಇದೊಂದು ಮನೋವೈಜ್ಞಾನಿಕ ಚಿತ್ರ’ ಎಂದರು ನಿರ್ದೇಶಕ ಶಂಕರ್ ಅರುಣ್.

ಈ ಸಿನಿಮಾಕ್ಕಾಗಿ ಕೇರಳದಲ್ಲಿ 25 ದಿನ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲಿ ಐದು ದಿನಗಳ ಚಿತ್ರೀಕರಣ ಅರಮನೆಯಲ್ಲೇ ನಡೆದಿದೆ ಎಂದು ತಂಡ ಹೇಳಿಕೊಂಡಿದೆ. ಇದು ಡಾ. ವಿಷ್ಣು ಅಭಿಮಾನಿಗಳಿಗಾಗಿ ಮಾಡಿರುವ ಸಿನಿಮಾ ಎಂಬುದು ತಂಡದ ಅಂಬೋಣ.

ಈ ಸಿನಿಮಾದ ನಾಯಕ ಕೂಡ ವಿಷ್ಣು ಅವರ ಅಭಿಮಾನಿ. ಅಂದಹಾಗೆ, ನಾಯಕನ ಪಾತ್ರಕ್ಕೆ ಜೀವ ತುಂಬಿದವರು ವಿಕ್ರಂ ಕಾರ್ತಿಕ್. ನಾಯಕಿ ವೈಷ್ಣವಿ ಮೆನನ್.

‘ಮೊದಲು ನಾನು ದೇವರನ್ನು ಹೆಚ್ಚು ನಂಬುತ್ತಿರಲಿಲ್ಲ. ಆದರೆ, ಈ ಸಿನಿಮಾದ ಕಾರಣದಿಂದಾಗಿ ನನ್ನಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಿವೆ. ದೇವರಲ್ಲಿ ನಂಬಿಕೆ ಹೆಚ್ಚಾಗಿದೆ’ ಎಂದರು ವೈಷ್ಣವಿ. ‘ಆಪ್ತಮಿತ್ರ’ ಚಿತ್ರದಲ್ಲಿ ಸೌಂದರ್ಯಾ ಅವರು ತೋರಿದ್ದ ಅಭಿನಯದ ಅರ್ಧದಷ್ಟನ್ನು ಮಾಡಲು ಸಾಧ್ಯವಾದರೆ ತಾವು ಗೆದ್ದಂತೆಯೇ ಎಂದು ವೈಷ್ಣವಿ ನಂಬಿಕೊಂಡಿದ್ದಾರೆ.

ಶ್ವೇತಾ ಅರುಣ್ ನಿರ್ಮಾಣದ ಈ ಸಿನಿಮಾಕ್ಕೆ, ಉತ್ತಮ್ ರಾಜ್‌ ಸಂಗೀತ ನೀಡಿದ್ದಾರೆ. ಶ್ಯಾಮ್ ಅವರು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry