ಗೋಕರ್ಣದ ಜ್ಞಾನದೀವಿಗೆಗೆ ಫ್ರಾನ್ಸ್ ತೈಲ!

5

ಗೋಕರ್ಣದ ಜ್ಞಾನದೀವಿಗೆಗೆ ಫ್ರಾನ್ಸ್ ತೈಲ!

Published:
Updated:
ಗೋಕರ್ಣದ ಜ್ಞಾನದೀವಿಗೆಗೆ ಫ್ರಾನ್ಸ್ ತೈಲ!

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿ ಪುರಾತನ ಗ್ರಂಥಾಲಯ ಎನಿಸಿದ ಗಣಪತಿ ಎಂ. ವೇದೇಶ್ವರರ ಗೋಕರ್ಣದ ಸ್ಟಡಿ ಸರ್ಕಲ್ (ವ್ಯಾಸಂಗ ಗೋಷ್ಠಿ) ಈಗ ವಿದೇಶಿ ಪ್ರವಾಸಿಗರ ನೆರವಿನಿಂದ ಪುನಶ್ಚೇತನಗೊಳ್ಳುತ್ತಲಿದೆ. ಅತ್ಯಂತ ಅಮೂಲ್ಯ ವಾದ, ವಿರಳವಾದ ಹಲವು ಮಹತ್ತರ ಪುಸ್ತಕಗಳ್ಳುಳ್ಳ ಈ ಗ್ರಂಥಾಲಯದ ನಿರ್ವಹಣೆ ಮಾಡಲು ಸಾಧ್ಯವಾಗದೇ ದುಸ್ಥಿತಿಗೆ ತಲುಪಿತ್ತು. ಫ್ರೆಂಚ್ ನಾಗರಿಕ ಇಲಿಯಾಸ್‌ ಟ್ಯಾಬೆಟ್‌ ಅವರ ಸಹಾಯದಿಂದ ಈಗ ಹೊಸ ರೂಪ ಪಡೆಯುತ್ತಲಿದೆ.

ಇಲಿಯಾಸ್‌ ಹತ್ತು ವರ್ಷಗಳಿಂದ ಗೋಕರ್ಣಕ್ಕೆ ಆಗಾಗ ಬರುತ್ತಿದ್ದರು. ಒಮ್ಮೆ ಸ್ಟಡಿ ಸರ್ಕಲ್‌ಗೆ ಭೇಟಿಯಿತ್ತಿದ್ದರು. ಅಲ್ಲಿರುವ ಮಹತ್ವದ ಅತಿ ವಿರಳ ಪುಸ್ತಕಗಳನ್ನು ಕಂಡು ದಂಗಾಗಿ ಹೋಗಿದ್ದರು. ಅದರ ಮಾಲೀಕರಾದ ವೇದೇಶ್ವರ ಅವರ ಪರಿಚಯ ಮಾಡಿಕೊಂಡು ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಹಂಬಲದಿಂದ ಫ್ರಾನ್ಸ್ ಸಹವಾಸಿಗಳೊಂದಿಗೆ Pandrata circle ಎಂಬ ಸಂಸ್ಥೆ ಹುಟ್ಟು ಹಾಕಿದರು. ಸ್ಟಡಿ ಸರ್ಕಲ್‌ ಬಗ್ಗೆ ಪರಿವಿಡಿಯನ್ನು ತಯಾರಿಸಿ ಸಾಹಿತ್ಯ ಹಿತಾಸಕ್ತರಿಗೆ ವಿತರಿಸಿದರು. ಅನೇಕ ಕಂಪನಿಗಳ, ದಾನಿಗಳ ಸಹಾಯದಿಂದ ದೇಣಿಗೆ ಸಂಗ್ರಹಿಸಿ ಗೋಕರ್ಣದ ಸ್ಟಡಿ ಸರ್ಕಲ್‌ಗೆ ಹೊಸ ರೂಪ ಕೊಡುತ್ತಿದ್ದಾರೆ. ಫ್ರಾನ್ಸ್‌ನ ರಾಯಭಾರಿ ಕಚೇರಿ ಸಹ ಇವರ ಕೆಲಸ ನೋಡಿ 5000 ಯುರೊ ದೇಣಿಗೆ ನೀಡಿದೆ.

ಗ್ರಂಥಾಲಯದ ಪರಿಚಯ: ಗೋಕರ್ಣದಲ್ಲಿ 1939ನೇ ಇಸವಿಯಲ್ಲಿ ಬಾಲಸಂಘ ಎಂಬ ಹೆಸರಿನ ಗ್ರಂಥಾಲಯ ಪ್ರಾರಂಭವಾಯಿತು. ಇದು ಕುಮಟಾ ತಾಲ್ಲೂಕಿನಲ್ಲಿಯೇ ಪ್ರಥಮ, ಬಹುಶಃ ಜಿಲ್ಲೆಯಲ್ಲಿ ಎರಡನೇ ಗ್ರಂಥಾಲಯ. ನಂತರ ಕರ್ನಾಟಕ ಸಂಘ, ಸ್ಟಡಿ ಸರ್ಕಲ್ ಎಂದು ನಾಮಕರಣ ಪಡೆಯಿತು. ಇದರ ಹರಿಕಾರರೇ ವೇದೇಶ್ವರ. ಇವರು ಕೊಣೆ ಅಣ್ಣ ಎಂದೇ ಪ್ರಸಿದ್ಧಿ ಪಡೆದವರು. ಅಷ್ಟೇ ಅಲ್ಲದೇ ಮಹರ್ಷಿ ದೈವರಾತರ ಅಳಿಯ. 85 ವಯಸ್ಸಿನ ವೇದೇಶ್ವರ ಅವರು ಈಗಲೂ ದಿನಕ್ಕೆ 12 ತಾಸುಗಳನ್ನು ಗ್ರಂಥಾಲಯದಲ್ಲಿ ಕಳೆಯು ತ್ತಾರೆ. ಇವರ ಗ್ರಂಥಾಲಯದಲ್ಲಿ ಇಲ್ಲದ ಪುಸ್ತಕಗಳೇ ಇಲ್ಲ.

ಪುರಾತನ ಶೈಲಿಯ ದೇವನಾಗರಿ ಲಿಪಿಯ 4000ಕ್ಕೂ ಹೆಚ್ಚು ಪುಸ್ತಕ, ಸಂಸ್ಕೃತ ಸಾಹಿತ್ಯದ ಪುಸ್ತಕಗಳು, ತತ್ವಜ್ಞಾನ, ಪುರಾಣ, ವೇದಗಳಿಗೆ ಸಂಬಂಧಪಟ್ಟ ಪುಸ್ತಕಗಳು, 600 ವರ್ಷಗಳ ಹಳೆಯ ನೂರಕ್ಕೂ ಹೆಚ್ಚು ತಾಳೆಗರಿ ಪುಸ್ತಕಗಳು, ಬಾಂಬೆ ಸರ್ಕಾರ ಪ್ರಕಟಿಸಿದ 175 ವರ್ಷದ ಹಿಂದಿನ ಪಠ್ಯ ಪುಸ್ತಕಗಳು, ಹಳೆಗನ್ನಡ, ಹೊಸಗನ್ನಡದ ಅನೇಕ ಮಹತ್ವದ ಪುಸ್ತಕಗಳು ಅಷ್ಟೇ ಅಲ್ಲದೇ ಮರಾಠಿ, ಹಿಂದಿ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಸೇರಿದಂತೆ 38ಕ್ಕೂ ಹೆಚ್ಚು ಭಾಷೆಗಳ ಸಾಹಿತ್ಯ ಸಿರಿ ಇಲ್ಲಿದೆ. ಮದ್ರಾಸ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ವಿ. ರಾಘವನ್ ಅವರ ಎಲ್ಲಾ ಅಮೂಲ್ಯ ಸಾಹಿತ್ಯ ಪುಸ್ತಕಗಳು ಅವರ ನಿಧನದ ನಂತರ ಸ್ಟಡಿ ಸರ್ಕಲ್‌ಗೆ ದಾನವಾಗಿ ಸಿಕ್ಕಿವೆ.

ಈ ಗ್ರಂಥಾಲಯದ ಸಂಗ್ರಹದಲ್ಲಿರುವ ಮತ್ತೊಂದು ಅಮೂಲ್ಯ ಗ್ರಂಥವೆಂದರೆ ಮೈಸೂರು ಮಹಾರಾಜರು ಪ್ರಕಟಿಸಿದ ಋಗ್ವೇದ ಸಾಹಿಣ ಭಾಷ್ಯದ ರಾಯಲ್ ಅಳತೆಯ 36 ಭಾಗಗಳು. ಸಂಹಿತಾ, ಬ್ರಾಹ್ಮಣ, ಅರಣ್ಯಕ, ನಿರುಕ್ತ, ಚಡಂಗ ಸಹಿತವಾಗಿ ಕನ್ನಡದಲ್ಲಿ ಮುದ್ರಿತವಾದ ಪುಸ್ತಕಗಳು ಇವೆ. ಗ್ರೇಟ್ ಬ್ರಿಟನ್ ಮತ್ತು ಅಮೆರಿಕದ ಎನ್‌ಸೈಕ್ಲೋಪಿಡಿಯಾ ಯುನಿವರ್ಸಲ್‌, ಕಲೆ, ಬೇಸಾಯ ಮತ್ತಿತರ ಶಾಖೆಗಳ ವಿಶೇಷ ಎನ್‌ಸೈಕ್ಲೋಪಿಡಿಯಾಗಳು ಸಹ ಇವರ ಸಂಗ್ರಹದಲ್ಲಿ ಲಭ್ಯವಿವೆ.

ವೇದೇಶ್ವರರ ಹಿರಿಮೆಗೆ ಮತ್ತೊಂದು ಗರಿಯೆಂದರೆ ನಮ್ಮ ದೇಶದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಅವರು ಗ್ರಂಥಾಲಯಕ್ಕೆ ಭೇಟಿಯಿತ್ತು ತಮ್ಮ ಸಹಿಯುಳ್ಳ ಪುಸ್ತಕವನ್ನು ಗ್ರಂಥಾಲಯಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್, ನೊಬೆಲ್ ಪ್ರಶಸ್ತಿ ವಿಜ್ಞಾನಿ ಸಿ.ವಿ. ರಾಮನ್, ಜ್ಯೂಲಿಯಸ್‌ ಹಕ್ಸ್‌ಲೇ, ಅರ್ನಾಲ್ಡ್‌ ಟಾಯಿನ್‌ಬೀ, ಕುವೆಂಪು, ಶಿವರಾಮ ಕಾರಂತ ಅವರ ಸಹಿಯುಳ್ಳ ಪುಸ್ತಕಗಳು ಈ ಗ್ರಂಥಾಲಯದ ಸಂಗ್ರಹದಲ್ಲಿ ಇವೆ. ಅನೇಕ ಸಂಸ್ಕೃತ ವಿದ್ವಾಂಸರ ಕೃತಿಗಳು ಲಭ್ಯವಿವೆ.

ಪ್ರತಿ ವರ್ಷವೂ ದೇಶ ವಿದೇಶದ ಅನೇಕ ಪ್ರಕಾಶಕರಿಂದ 600ರಿಂದ 700 ಪುಸ್ತಕಗಳು ಇವರ ಗ್ರಂಥಾಲಯಕ್ಕೆ ಬರುತ್ತ ಲಿವೆ. ಇವರ ಸಂಗ್ರಹದಲ್ಲಿ ಮಕ್ಕಳಿಗೆ, ಅವರ ವಯಸ್ಸಿಗೆ ತಕ್ಕಂಥ ಎಲ್ಲಾ ಪಠ್ಯಗಳು ಲಭ್ಯವಿವೆ. ಆದರೆ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಪುಸ್ತಕಗಳಿದ್ದರೂ ಅದರ ಉಪಯೋಗ ಪಡೆಯುತ್ತಿರುವುದು ಕೆಲವೇ ಕೆಲವು ಜನ ಎಂದು ಬೇಸರದಿಂದ ವೇದೇಶ್ವರರು ನುಡಿಯುತ್ತಾರೆ.ಇಲಿಯಾಸ್ ಟ್ಯಾಬೆಟ್

ಪುಸ್ತಕ ಮಾತ್ರವಲ್ಲದೇ ಸ್ಟಾಂಪ್, ಹಲವು ದೇಶಗಳ ನಾಣ್ಯಗಳೂ ಇವರ ಸಂಗ್ರಹದಲ್ಲಿವೆ. 1984ರಲ್ಲಿ ಉತ್ತಮ ಗ್ರಂಥಾಲಯ ರಾಜ್ಯ ಪ್ರಶಸ್ತಿ, ವೇದೇಶ್ವರ ಅವರಿಗೆ 2003ರಲ್ಲಿ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯಿಂದ ₹1 ಲಕ್ಷ ಅನುದಾನ ತಾಳೆಗರಿ ಪುಸ್ತಕಗಳ ನಿರ್ವಹಣೆಗೆ ಸಿಕ್ಕಿದೆ. ಇದೆಲ್ಲ ಈ ಅದ್ಭುತ ಗ್ರಂಥಾಲಯದ ನಿರ್ವಹಣೆಗೆ ಕೊಟ್ಟ ಚಿಕ್ಕ ಕೊಡುಗೆ ಮಾತ್ರ.

ಇಂತಹ ವಿರಳ, ಮಹತ್ವದ ಗ್ರಂಥ, ಪುಸ್ತಕಗಳನ್ನು ಕಾಯ್ದಿಡಲು ಸ್ಥಳ, ಸಲಕರಣೆಗಳಿಲ್ಲದೆ ತುಂಬಾ ಕಷ್ಟಪಡುತ್ತಿದ್ದರು ವೇದೇಶ್ವರರು. ಪುಸ್ತಕಗಳನ್ನೆಲ್ಲಾ ರಟ್ಟಿನ ಬಾಕ್ಸ್‌ನಲ್ಲಿ ಇಟ್ಟು ಗಂಟು ಕಟ್ಟಿ ಇಡುತ್ತಿದ್ದರು. ಇದನ್ನೆಲ್ಲಾ ಹೇಗೆ ಕಾಪಾಡಿಕೊಂಡು ಹೋಗಬೇಕು ಎಂಬ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಸಹಾಯಕ್ಕಾಗಿ ಹಲವರನ್ನು ಸಂಪರ್ಕಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವರು ಕೊಡುವ ಭರವಸೆ ಭರವಸೆಯಾಗಿಯೇ ಉಳಿದಿತ್ತು. ಅನೇಕ ಸಲ ಸರ್ಕಾರಕ್ಕೆ ವಿನಂತಿಸಿದರೂ ಯಾವುದೇ ಸಹಾಯ ದೊರೆಯಲಿಲ್ಲ. ಸರ್ಕಾರ ನೀಡುವ ವಾರ್ಷಿಕ ಹಣ ಪಡೆಯಬೇಕಾದರೆ ಕೊಡಬೇಕಾದ ಲಂಚವೇ ಜಾಸ್ತಿಯಾಗುತ್ತಿದ್ದು, ಕೆಲವು ವರ್ಷಗಳಿಂದ ಈ ಹಣ ಪಡೆಯುವುದನ್ನೂ ನಿಲ್ಲಿಸಿದ್ದಾರೆ. ವೇದೇಶ್ವರರ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಒದಗಿ ಬಂದವರೇ ಇಲಿಯಾಸ್‌. ಒಬ್ಬಂಟಿಗರಾದ ವೇದೇಶ್ವರರೊಂದಿಗೆ ಕೈಜೋಡಿಸಿದ್ದಾರೆ.

ಇಲಿಯಾಸ್‌ ಮೂಲತಃ ಒಬ್ಬ ನಾಟಕ ಕಲಾವಿದ ಮತ್ತು ನಿರ್ದೇಶಕ. 3 ವರ್ಷಗಳಿಂದ ಕೇರಳದಿಂದ ಕಥಕ್ಕಳಿ ಕಲಿಸು ವವರನ್ನೂ, ಉಡುಪಿಯಿಂದ ಭರತನಾಟ್ಯ ಕಲಿಸುವ ಸುಧೀರ್ ರಾವ್ ಅವರನ್ನು ಗೋಕರ್ಣಕ್ಕೆ ಕರೆಯಿಸಿ, ಫ್ರಾನ್ಸ್‌ನಿಂದ ಬಂದ ವಿದೇಶಿಯರಿಗೆ ತರಬೇತಿ ಕೊಡಿಸುತ್ತಿದ್ದಾರೆ. ಇದಕ್ಕೆಲ್ಲಾ ಅವಶ್ಯವಿರುವ ದೊಡ್ಡ ಕಟ್ಟಡವನ್ನು ಈಗಾಗಲೇ ಕಟ್ಟಿ ನಿಲ್ಲಿಸಿದ್ದಾರೆ. ಸಮುದ್ರದ ತೀರದಲ್ಲಿರುವ ಸುಂದರ ಪರಿಸರ ದಿಂದ ಕೂಡಿದ ರಾಮತೀರ್ಥದ ಮೇಲ್ಭಾಗದಲ್ಲಿ ವಿಶಾಲವಾದ 5000 ಚದರ ಅಡಿಯ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಗ್ರಾನೈಟ್ ಹಾಸಿಗೆಯನ್ನು ಹಾಕಿಸಿದ್ದಾರೆ.

ಈ ಗ್ರಂಥಾಲಯವನ್ನು ಆನ್‌ಲೈನ್‌ ಲೈಬ್ರರಿಯನ್ನಾಗಿ ಪರಿವರ್ತಿಸಿ, ಇಲ್ಲಿರುವ ಪುಸ್ತಕಗಳನ್ನೆಲ್ಲಾ ಗಣಕೀಕೃತ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆನ್‌ಲೈನ್‌ ಪರಿವಿಡಿ ನೋಡಿ ಪುಸ್ತಕ ಹುಡುಕಲು ಸಹಾಯವಾಗಬೇಕೆಂಬುದು ಇವರ ಇಚ್ಛೆ. ಇಷ್ಟೆಲ್ಲಾ ಮಾಡಲು ಯಾವ ಕಾರಣ ಎಂದು ಇವರಲ್ಲಿ ವಿಚಾರಿಸಿದರೆ, ‘ಇಂತಹ ಅದ್ಭುತ ಸಂಗ್ರಹ ಎಲ್ಲಿಯೂ ಸಿಗುವುದಿಲ್ಲ, ಇದನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಈ ಸಂಸ್ಕೃತಿ ಯಾವಾಗಲೂ ಶಾಶ್ವತ’ ಎಂದು ನುಡಿಯುತ್ತಾರೆ.

ವಿದೇಶಿಗರು ಎಂದರೆ ಮೋಜು ಮಸ್ತಿ ಮಾಡಲು ಗೋಕರ್ಣಕ್ಕೆ ಬರುತ್ತಾರೆ. ಇದರಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಲಿದೆ ಎಂದು ಬೊಬ್ಬೆ ಇಡುವ ಜನರಿಗೆ ಇಲಿಯಾಸ್‌ ತಕ್ಕ ಉತ್ತರ ನೀಡಿದ್ದಾರೆ.

⇒ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry