ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಲ್‌ಬಾಗ್‌ ಏಕೆ ಹೀಗಾಯ್ತು’

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಲಾಲ್‌ಬಾಗ್‌ನಲ್ಲಿ ಬೆಳ್ಳಂಬೆಳಿಗ್ಗೆ ಉಲ್ಲಾಸದಿಂದ ಮುಖ ಅರಳಿಸಿಕೊಂಡು ಚೈತನ್ಯದಿಂದ ಬಿರುಸು ನಡಿಗೆ ಹಾಕುತ್ತಿದ್ದವರ ಮುಖದಲ್ಲಿ ಏನೋ ಕಸಿವಿಸಿ. ಮುಂಜಾನೆ ಶುದ್ಧ ಗಾಳಿ, ಹವೆ ಸವಿಯಲು ಬರುವವರ ಮನದಲ್ಲೇನೋ ಕಸಿವಿಸಿ. ಮುಖಗಂಟಿಕ್ಕಿಕೊಂಡು ‘ಏನ್ರೀ... ಕಿರಿಕಿರಿ, ಥೂ...’ ಎಂದು ಲೊಚಗುಟ್ಟುವ ದನಿಗಳು ಕಿವಿಗೆ ಬಿದ್ದವು. ಹಿನ್ನೆಲೆ ಕೆದಕಿದಾಗ ಉದ್ಯಾನದ ಕೆಲ ಹುಳುಕುಗಳು ಕಣ್ಣಿಗೆ ರಾಚಿದವು.

ಲಾಲ್‌ಬಾಗ್‌ನ ಉತ್ತರ ದ್ವಾರ ದೊಡ್ಡದಾದ ಮಾರ್ಗ. ಈ ಮಾರ್ಗದ ಮುಖಾಂತರವೇ ಇಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಿಗೆ ಬಹುತೇಕ ಜನರು ಬರುವುದು– ಹೋಗುವುದು. ಈ ಮಾರ್ಗದಿಂದ ಬರುವ ವಾಯುವಿಹಾರಿಗಳು ದಿನ ಬೆಳಿಗ್ಗೆ ದ್ವಾರದ ಬಳಿ ಆಟೊ, ಟ್ಯಾಕ್ಸಿ ಚಾಲಕರ ಉಪಟಳ ಸಹಿಸಿಕೊಂಡು ಒಳ ನಡೆದರೆ, ಉದ್ಯಾನ ಪ್ರವೇಶ ಮುನ್ನವೇ ಧುತ್ತನೆ ಎದುರಾಗುವುದು ಕಿಷ್ಕಿಂಧೆಯಂತಹ ವ್ಯಾಪಾರ ಸ್ಥಳ.

ಉತ್ತರ ದ್ವಾರದಿಂದ ಲಾಲ್‌ಬಾಗ್ ಒಳಗೆ ಹೆಜ್ಜೆ ಇಟ್ಟವರಿಗೆ, ‘ಇದೇನಿದು; ಲಾಲ್‌ಬಾಗ್ ಯಾವಾಗ ಮಾರುಕಟ್ಟೆ ಆಯಿತು’ ಎಂಬ ಪ್ರಶ್ನೆ ಮೂಡದಿರದು. ಹೂವಾಡಗಿತ್ತಿಯರು, ತಳ್ಳುಗಾಡಿಯಲ್ಲಿ ಕಾಯಿಪಲ್ಯ ಮಾರುವವರು, ತರಹೇವಾರಿ ಹಣ್ಣುಗಳ ಜ್ಯೂಸ್ ಅಂಗಡಿಗಳು, ರಾಗಿ ಅಂಬಲಿ, ಲೋಳೆಸರ, ಗರಿಕೆ ಹುಲ್ಲು, ಬೂದುಗುಂಬಳ ರಸ ಕುಡಿದರೆ ಬೊಜ್ಜು ಕರಗುತ್ತದೆ ಎಂದು ಬೊಬ್ಬೆ ಹಾಕುವವರು, ಖರ್ಜೂರ, ಬಟ್ಟೆ, ಸುಗಂಧದ್ರವ್ಯ ಮಾರಾಟಗಾರರು ವಾಯುವಿಹಾರಿಗಳಿಗೆ ಎಡತಾಕುತ್ತಾರೆ. ಇದನ್ನು ಗಮನಿಸಿದರೆ,
‘ಇದು ವಾಯುವಿಹಾರ ತಾಣವೋ, ಕೆ.ಆರ್.ಮಾರುಕಟ್ಟೆಯೋ’ ಎನ್ನುವ ಗಲಿಬಿಲಿ ಶುರುವಾಗುತ್ತದೆ.

ಇದರ ನಡುವೆ ಕಡ್ಲೆಕಾಯಿ, ಜೋಳ, ಪೇರಳೆ, ನೇರಳೆ, ಬೆಟ್ಟದ ನಲ್ಲಿಕಾಯಿ, ಸೌತೆಕಾಯಿ, ಐಸ್‌ಕ್ರಿಂ ಮಾರಾಟಗಾರರ ಕಿರಿಕಿರಿ. ಇವೆಲ್ಲವನ್ನೂ ತಪ್ಪಿಸಿ ಒಳಹೋಗುವ ಹೊತ್ತಿಗೆ ಏಳು ಕೋಟೆ ದಾಟಿದ ಅನುಭವ ಆಗುತ್ತದೆ. ಇಲ್ಲಿನ ವಾಯುವಿಹಾರಿಗಳನ್ನು ಮಾತಿಗೆ ಎಳೆದರೆ ಅಧಿಕಾರಿಗಳ ಬಗ್ಗೆ ಆಕ್ರೋಶದ ದನಿಗಳು ಕೇಳಿಬರುತ್ತವೆ.

‘20 ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ವಾಕಿಂಗ್ ಮಾಡುತ್ತಿದ್ದೇನೆ. ಇತ್ತೀಚೆಗೆ ಯಾಕೋ ಲಾಲ್‌ಬಾಗ್‌ ಸಂತೆ ತರಹ ಆಗಿದೆ. ತರಕಾರಿ, ಬಟ್ಟೆ ಮಾರಾಟಗಾರರ ಕಾಟ ಜಾಸ್ತಿ ಆಗಿದೆ. ಇದನ್ನೆಲ್ಲಾ ನಿಭಾಯಿಸಿಕೊಂಡು ಒಳಗೆ ಬಂದರೆ ನಾಯಿಗಳ ಕಾಟ ಬೇರೆ. ಬುದ್ಧಿ ಇಲ್ಲದ ಕೆಲವರು ಬನ್‌– ಬಿಸ್ಕತ್ ತಂದು ಹಾಕುವುದರಿಂದ ಸಿದ್ದಾಪುರ ಸ್ಲಂನ ನಾಯಿಗಳೆಲ್ಲಾ ಬೆಳಿಗ್ಗೆ ಹೊತ್ತು ಒಳನುಗ್ಗುತ್ತವೆ. ವಾಯುವಿಹಾರಿಗಳ ಮೇಲೆ ಎರಗುತ್ತವೆ. ನಮ್ಮೋರಿಗೆ ಬುದ್ಧಿ ಬರೋದಿಲ್ಲ ಕಣ್ರೀ’ ಎಂದು ಜಯನಗರ ನಿವಾಸಿ ರಾಮಮೂರ್ತಿ ಬೇಸರ ವ್ಯಕ್ತಪಡಿಸಿದರು.

ಅವರ ಮಾತಿಗೆ ದನಿಗೂಡಿಸಿದ ಬಿಎಚ್ಎಲ್‌ನ ನಿವೃತ್ತ ಮ್ಯಾನೇಜರ್ ದ್ವಾರಕಾನಾಥ್, ಲಾಲ್‌ಬಾಗ್ 240 ಎಕರೆ ಪ್ರದೇಶ ಹೊಂದಿರುವ ಅಪರೂಪದ ಉದ್ಯಾನ. ಇಲ್ಲಿನ ವ್ಯವಸ್ಥೆ ಸರಿ ಮಾಡಲು ಕಾನೂನು ಮಾಡಿದರೆ ಪ್ರಯೋಜನವಿಲ್ಲ; ಸುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಅರಿವು ನಮ್ಮ ಮನಸ್ಸಿನಿಂದಲೇ ಬರಬೇಕು’ ಎಂದರು. ಅವರ ಮಾತನ್ನು ಮತ್ತೊಬ್ಬ ವಾಯುವಿಹಾರಿ ಡಾ.ನಾಗರಾಜ ಶರ್ಮ ಅನುಮೋದಿಸಿದರು.


ಗುರುಮೂರ್ತಿ

‘ಲಾಲ್‌ಬಾಗ್ ಒಂಥರಾ ಮಿನಿ ಹುಚ್ಚಾಸ್ಪತ್ರೆ ಇದ್ದಂಗೆ. ಜೋರಾಗಿ ಕೇಕೆ ಹಾಕಿಕೊಂಡು ಓಡಾಡುತ್ತಾರೆ. ವಿಚಿತ್ರವಾಗಿ ನಗುತ್ತಾರೆ. ಜನರಿಗೆ ಒಂದು ಶಿಸ್ತು ಇಲ್ಲ. ವೃದ್ಧರಿಗೆ ಕಿರಿಕಿರಿಯಾಗುತ್ತದೆ ಎಂಬ ಪರಿಜ್ಞಾನವೂ ಇಲ್ಲದಂತೆ ಕೆಲವರು ವರ್ತಿಸುತ್ತಾರೆ’ ಎನ್ನುವ ಆಕ್ಷೇಪ ಶಾಂತಿನಗರದ ನಿವಾಸಿ 90 ವರ್ಷದ ಗುರುಮೂರ್ತಿ ಅವರದ್ದು.

‘ಈ ಹಿಂದೆ ಪಾರ್ಕಿಂಗ್‌ಗೆ ನಿಗದಿಯಾಗಿದ್ದ ಜಾಗ ಈಗ ನಿರುಪಯುಕ್ತವಾಗಿದೆ. ಇಲ್ಲಿನ ಪೊದೆಗಳಲ್ಲಿ ಹಾವುಗಳು ಸೇರಿಕೊಂಡು ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಬಂಡೆ, ಗೋಪುರ, ಕೆರೆ, ಅಪರೂಪದ ಸಸ್ಯ ಪ್ರಭೇದದಿಂದ ಕೂಡಿರುವ ಲಾಲ್‌ಬಾಗ್‌ನಲ್ಲಿ ಕಸದ ಸಮಸ್ಯೆಯೂ ಇದೆ. ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಸಮಯದಲ್ಲಂತೂ ಇದು ಅಕ್ಷರಶಃ ಸಂತೆಯೇ. ವ್ಯಾಪಾರಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಏಕೆ ಹಿಂದೇಟು ಹಾಕುತ್ತಿದ್ದಾರೋ ಗೊತ್ತಾಗುತ್ತಿಲ್ಲ’ ಎನ್ನುವುದು ಸೋಮೇಶ್ವರ ಕಾಲೊನಿ ನಿವಾಸಿ ಅತೀಫ್ ಅವರ ಆಕ್ರೋಶ.

ಲಾಲ್‌ಬಾಗ್ ಪಶ್ಚಿಮದ್ವಾರ, ಪೂರ್ವದ್ವಾರ, ದಕ್ಷಿಣದ್ವಾರಗಳಲ್ಲೂ ಇದೇ ಪರಿಸ್ಥಿತಿ ಇದೆ. ಸುಂದರವಾದ ಪರಿಸರ ಹೀಗೆ ಹಾಳಾಗುತ್ತಿರುವುದಕ್ಕೆ ತೋಟಗಾರಿಕೆ ಇಲಾಖೆಯತ್ತ ಅವರು ಬೆಟ್ಟು ಮಾಡಿ ತೋರಿಸುತ್ತಾರೆ.

***
‘ಶಿಸ್ತು ರೂಢಿಸಿಕೊಳ್ಳಿ’

ವಾಯುವಿಹಾರಿಗಳ ಬೆಂಬಲದಿಂದಲೇ ಇಲ್ಲಿ ಸಣ್ಣಪುಟ್ಟ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ. ಶೇ 90ರಷ್ಟು ಜನ ಇದನ್ನು ಬೆಂಬಲಿಸುತ್ತಿದ್ದಾರೆ. ಕೇವಲ ಶೇ 10ರಷ್ಟು ಜನ ವಿರೋಧಿಸುತ್ತಿದ್ದಾರೆ. ಶನಿವಾರ–ಭಾನುವಾರ ವಿಪರೀತ ಎನಿಸುವಷ್ಟು ಗಜಿಬಿಜಿ ಇರುವುದು ನಿಜ. ತೆರವುಗೊಳಿಸಲು ಮುಂದಾದರೆ ವಾಯು ವಿಹಾರಿಗಳೇ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ವಾಯು ವಿಹಾರಿಗಳಿಗಾಗಿಯೇ ಪ್ರ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ, ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲುಸುವ ಮೂಲಕ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಾರೆ. ನಿಯಂತ್ರಣಕ್ಕೆ ಮುಂದಾದರೆ ಭದ್ರತಾ ಸಿಬ್ಬಂದಿ ಮೇಲೆಯೇ ಮುಗಿಬೀಳುತ್ತಾರೆ.

ಸಣ್ಣ ಪುಟ್ಟ ವ್ಯಾಪಾರ ಮಾಡಿ ಹೊಟ್ಟೆ ಹೊರೆಯುವ ಜನರಿಗೆ ಮಾನವೀಯತೆಯಿಂದ ಜಾಗ ನೀಡಲಾಗಿದೆ. ವ್ಯಾಪಾರಿಗಳು, ವಾಯುವಿಹಾರಿಗಳು ಶಿಸ್ತಿನಿಂದ ನಡೆದುಕೊಂಡರೆ ಯಾವುದೇ ತೊಂದರೆ ಇಲ್ಲ.

ಚಂದ್ರಶೇಖರ್,
ಉ‍ಪ ನಿರ್ದೇಶಕರು, ತೋಟಗಾರಿಕೆ ಇಲಾಖೆ (ಲಾಲ್‌ಬಾಗ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT