ಶರಣ ಸಂಸ್ಕೃತಿ ತೆರೆದಿಟ್ಟ ಚಿಣ್ಣರು

7

ಶರಣ ಸಂಸ್ಕೃತಿ ತೆರೆದಿಟ್ಟ ಚಿಣ್ಣರು

Published:
Updated:

ಕಲಬುರ್ಗಿ: ವಚನ ಗಾಯನ, ವಚನ ನೃತ್ಯ, ರೂಪಕ, ಜಾನಪದ ನೃತ್ಯ, ಕೊರವಂಜಿ ವೇಷ, ಕೋಲಾಟ, ಭಜನೆ, ಭಾವಗೀತೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿನ ಬಸವ ಸಮಿತಿಯು ಭಾನುವಾರ ಸಾಕ್ಷಿಯಾಯಿತು.

ದಿ. ಅಣ್ಣಾರಾವ್ ಶರಣಪ್ಪ ಪಾಟೀಲ ಸರಡಗಿ ಸ್ಮರಣಾರ್ಥ ನಡೆದ 534ನೇ ದತ್ತಿ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ರೂಪಕ ಮತ್ತು ವಚನ ಗಾಯನ ಮೂಲಕ ಬಾಲ ಕಲಾವಿದರು ಯಕ್ಷ ಲೋಕವನ್ನೇ ಸೃಷ್ಟಿಸಿದರು. ತಮ್ಮ ನೃತ್ಯ, ಅಭಿನಯ ಮೂಲಕ ನೆರೆದಿದ್ದ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು.

ಗಿರಿಜಾದೇವಿ ನೃತ್ಯ ಕಲಾಮಂದಿರದ ಬಾಲ ಕಲಾವಿದೆಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ‘ಕಲ್ಯಾಣವೆಂಬ ಪ್ರಣತೆಯಲ್ಲಿ’ ವಚನಕ್ಕೆ ನೃತ್ಯ ಪ್ರದರ್ಶಿಸಿದರು. ಅಮರ ಕಲಾ ವೃಂದದವರು ಪ್ರದರ್ಶಿಸಿದ ‘ಮುದನೂರು ದಾಸಿಮಯ್ಯ’ ರೂಪಕ ಅತ್ಯಾಕರ್ಷವಾಗಿತ್ತು. ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಭಾವಗೀತೆ, ಕೊರವಂಜಿ ವೇಷ, ಭಜನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಲಬುರ್ಗಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ವೀರಣ್ಣ ದಂಡೆ ಅವರನ್ನು ಬಸವ ಸಮಿತಿ ವತಿಯಿಂದ ಗೌರವಿಸಲಾಯಿತು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಆಡಳಿತಾಧಿಕಾರಿ ಎಸ್.ಐ. ಬಾವಿಕಟ್ಟಿ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ದತ್ತಿ ದಾಸೋಹಿ ನಾಗೇಂದ್ರಪ್ಪ ಅಣ್ಣಾರಾವ ಪಾಟೀಲ ಸರಡಗಿ ಇದ್ದರು. ಎಚ್.ಕೆ.ಉದ್ದಂಡಯ್ಯ ಕಾರ್ಯಕ್ರಮ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry