ಬುಧವಾರ, ಆಗಸ್ಟ್ 5, 2020
21 °C

ಬ್ರಹ್ಮಗಿರಿ ಬೆಟ್ಟ ಪ್ರವೇಶ ನಿಷೇಧಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಕಾವೇರಿ ಮಾತೆಯ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಒಂದು ವಾರದೊಳಗೆ ನಿಷೇಧಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಪ್ರವೇಶದ ಗೇಟಿಗೆ ಬೀಗ ಜಡಿದು ಪ್ರತಿಭಟಿಸುತ್ತೇವೆ ಎಂದು ಮಣವಟ್ಟಿರ ದೊರೆ ಸೋಮಣ್ಣ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತ ಋಷಿಗಳು ತಪಸ್ಸು ಮಾಡಿದ ಪವಿತ್ರ ಸ್ಥಳವನ್ನು ಪ್ರವಾಸಿಗರು ಮೋಜು ಮಸ್ತಿ ಹೆಸರಿನಲ್ಲಿ ದುರ್ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಮತ್ತಿತರ ಕಸವನ್ನು ಹಾಕಿ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಇದರಿಂದ ಕಾವೇರಿಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಲಿದೆ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಮೂರು ಕುಂಡಿಕೆಗಳು ಸಹ ಈಗ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಮುಂದುವರೆದರೆ ಕೊಡಗಿನ ಜನತೆಗೆ ಅಗಸ್ತ್ಯ ಋಷಿ ಶಾಪ ನೀಡಿದಂತಾಗುತ್ತದೆ ಎಂದರು.

ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಕ್ಷೇತ್ರದಲ್ಲಿರುವ ಲೋಪ ದೋಷಗಳನ್ನು ಪರಿಹರಿಸಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಕಾರ್ಯವಾಗಬೇಕಿದೆ. ತಲಕಾವೇರಿ ಕ್ಷೇತ್ರದ ಪಕ್ಕದಲ್ಲಿ ಪರವಾನಗಿ ಇಲ್ಲದ ಅಂಗಡಿ ಮುಂಗಟ್ಟುಗಳನ್ನು ಕೂಡಲೇ ಜಿಲ್ಲಾಡಳಿತ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಭಾಗಮಂಡಲದ ತ್ರಿವೇಣಿ ಸಂಗಮದ ಬಳಿಯಲ್ಲಿ ಪ್ರವಾಸಿಗರು ಅಡುಗೆ ಮಾಡಿ ಊಟದ ಎಂಜಲನ್ನು ಕಾವೇರಿ ನದಿಗೆ ಹಾಕದಂತೆ ನಿರ್ಬಂಧ ಹೇರಬೇಕು.ಸಂಗಮದ ಹೊರಭಾಗದಲ್ಲಿ ಸಿ.ಸಿ.ಕ್ಯಾಮೆರಾವನ್ನು ಅಳವಡಿಸುವುದರ ಮೂಲಕ ಕ್ಷೇತ್ರಕ್ಕೆ ಆಗಮಿಸುವವರ ಚಲನವಲನಗಳನ್ನು ಗಮನಿಸುವ ಕಾರ್ಯವಾಗಬೇಕು. ಕ್ಷೇತ್ರಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ದೇವರ ಪೂಜಾ ವಿಧಿವಿಧಾನಗಳನ್ನು ಸುಗಮವಾಗಿ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಬಾದುಮಂಡ ಮುತ್ತಪ್ಪ, ಪಾಡಿಯಮ್ಮಂಡ ಯೋಗಿಶ್ ಮೊಣ್ಣಮ್ಮಯ್ಯ, ಮಣವಟ್ಟಿರ ಪಾಪು ಚಂಗಪ್ಪ, ಮಣವಟ್ಟಿರ ಹರೀಶ್ ಬಿದ್ದಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.