ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌ ಮಸೂದೆ ತುಟಿ ಬಿಚ್ಚದ ಕಾಂಗ್ರೆಸ್‌!

Last Updated 2 ಜನವರಿ 2018, 19:41 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ತ್ರಿವಳಿ ತಲಾಖ್‌ ಮಸೂದೆಯನ್ನು ರಾಜ್ಯಸಭೆಯ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಡ ಹಾಕುತ್ತಿರುವ ವಿರೋಧ ಪಕ್ಷಗಳ ಜೊತೆ ಸೇರಬೇಕೇ ಬೇಡವೇ ಎಂಬ ವಿಚಾರದಲ್ಲಿ ಕಾಂಗ್ರೆಸ್‌ ಇಕ್ಕಟ್ಟಿಗೆ ಸಿಲುಕಿದೆ.

ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಮಸೂದೆಯು ಬುಧವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

ಮಸೂದೆಯನ್ನು ಸದನದ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್‌ಯೇತರ ವಿರೋಧ ಪಕ್ಷಗಳು ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಒತ್ತಾಯಿಸಿವೆ.

ಆದರೆ, ತನ್ನ ನಿಲುವಿನ ಬಗ್ಗೆ ಕಾಂಗ್ರೆಸ್‌ ಇದುವರೆಗೂ ತುಟಿ ಬಿಚ್ಚಿಲ್ಲ. ‘ಬುಧವಾರ ಬೆಳಗ್ಗೆ ಈ ಬಗ್ಗೆ ನಿರ್ಧರಿಸಲಾಗುವುದು’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ವಿರೋಧ ಪಕ್ಷಗಳ ಬೇಡಿಕೆಗೆ ಮೋದಿ ಸರ್ಕಾರ ಮಣಿಯುವ ಸಾಧ್ಯತೆ ಕಾಣುತ್ತಿಲ್ಲ. ಮಸೂದೆಯನ್ನು ಮತಕ್ಕೆ ಹಾಕಲು ಅದು ಯತ್ನಿಸುವ ಸಾಧ್ಯತೆ ಇದೆ.

‘ವಿರೋಧ ಪಕ್ಷಗಳು ಈ ಮಸೂದೆ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಒಂದೋ ಪರವಾಗಿರಬೇಕು, ಇಲ್ಲ ವಿರೋಧಿಸಬೇಕು’ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.

ಒಂದೇ ಉಸಿರಿಗೆ ಮೂರು ಬಾರಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದನ್ನು ಈ ಮಸೂದೆ ನಿರ್ಬಂಧಿಸುತ್ತದೆ. ಒಂದು ವೇಳೆ ಉಲ್ಲಂಘಿಸಿದರೆ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲೂ ಇದು ಅವಕಾಶ ನೀಡುತ್ತದೆ.

ಗೊಂದಲದಲ್ಲಿ ಕಾಂಗ್ರೆಸ್‌–ಟೀಕೆ: ‘ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಹೋಗಿ, ಹತ್ತು ಹೆಜ್ಜೆ ಹಿಂದಕ್ಕೆ ಬರುತ್ತಿದೆ. ತ್ರಿವಳಿ ತಲಾಖ್‌ ವಿಚಾರದಲ್ಲಿ ಅದು ಗೊಂದಲದಲ್ಲಿದೆ. ಮುಸ್ಲಿಂ ಮಹಿಳೆಯರಿಗೆ ಖುಷಿಯಾಗಿದೆ. ಆದರೆ, ಕಾಂಗ್ರೆಸ್‌ ಯಾಕೆ ಬೇಸರದಲ್ಲಿದೆ ಎಂದು ಅರ್ಥವಾಗುತ್ತಿಲ್ಲ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ವ್ಯಂಗ್ಯವಾಡಿದ್ದಾರೆ.

‘ಹಿಂದೂ ವಿರೋಧಿ’ ಎಂಬ ಹಣೆಪಟ್ಟಿಯನ್ನು ಕಿತ್ತುಹಾಕಲು ಯತ್ನಿಸುತ್ತಿರುವ ಕಾಂಗ್ರೆಸ್‌, ಲೋಕಸಭೆಯಲ್ಲಿ ಮಸೂದೆಗೆ ಕೆಲವು ತಿದ್ದುಪಡಿಗಳು ತರಬೇಕು ಎಂದು ಆಗ್ರಹಿಸಿತ್ತಾದರೂ ಮಸೂದೆಯ ಪರವಾಗಿ ಮತಹಾಕಿತ್ತು.

ಮೂರು ಬಾರಿ ತಲಾಖ್‌ ಹೇಳಿದ ಮುಸ್ಲಿ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ನಿಯಮವನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ.

ಸಂರಕ್ಷಿತ ಸ್ಮಾರಕ: ಮಸೂದೆ ಅಂಗೀಕಾರ
ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ನಿರ್ಬಂಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ. ಈ ಮಸೂದೆಗೆ ಕಾಂಗ್ರೆಸ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಚೆಕ್ಸ್ ಬೌನ್ಸ್‌– ಮಸೂದೆ ಮಂಡನೆ: ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿನ ವಿಳಂಬ ಕಡಿತಗೊಳಿಸುವ ಮತ್ತು ಮಧ್ಯಂತರ ಪರಿಹಾರ ಪಾವತಿಸಲು ಅವಕಾಶ ಕೊಡುವ ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್ಸ್‌ (ತಿದ್ದುಪಡಿ) ಮಸೂದೆ–2017 ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT