ಮೋದಿ ಮೌನಿ ಬಾಬಾ: ಕಾಂಗ್ರೆಸ್‌ ಆರೋಪ

7
ಸಮಗ್ರ ತನಿಖೆ ನಡೆಸಲು ಲೋಕಸಭೆಯಲ್ಲಿ ಖರ್ಗೆ ಆಗ್ರಹ

ಮೋದಿ ಮೌನಿ ಬಾಬಾ: ಕಾಂಗ್ರೆಸ್‌ ಆರೋಪ

Published:
Updated:
ಮೋದಿ ಮೌನಿ ಬಾಬಾ: ಕಾಂಗ್ರೆಸ್‌ ಆರೋಪ

ನವದೆಹಲಿ: ‘ದಲಿತರ ಮೇಲೆ ದೇಶದಾದ್ಯಂತ ನಿರಂತರ ದಾಳಿಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಸರಿಯಲ್ಲ’ ಎಂದು ಲೋಕಸಭೆಯಲ್ಲಿ ಬುಧವಾರ ದೂರಿದ ಕಾಂಗ್ರೆಸ್‌, ದಲಿತರ ಮೇಲಿನ ದಾಳಿಗೆ ಆರ್‌ಎಸ್‌ಎಸ್‌ ಮತ್ತು ಖಟ್ಟರ್‌ ಹಿಂದುತ್ವವಾದಿಗಳೇ ಕಾರಣ ಎಂದು ಆರೋಪಿಸಿತು.

ಬಿಜೆಪಿ ಆಡಳಿತ ಇರುವ ಎಲ್ಲ ರಾಜ್ಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತನಾಡದೆ, ‘ಮೌನಿ ಬಾಬಾ’ ಆಗಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮರು ಆರೋಪ ಮಾಡುತ್ತಿದ್ದಂತೆಯೇ, ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಯಿತು.

ಮಹಾರಾಷ್ಟ್ರದಲ್ಲಿ ಭೀಮಾ– ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವ ಆಚರಣೆ ಸಂದರ್ಭ ನಡೆದ ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ನಡೆಸಬೇಕು. ಪ್ರಧಾನಿಯವರು ಕೂಡಲೇ ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ಕೋರಿ ಪ್ರತಿಭಟನೆಗಿಳಿದ ಕಾಂಗ್ರೆಸ್‌ ಸದಸ್ಯರು, ಬಿಜೆಪಿ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿಸಭಾತ್ಯಾಗ ಮಾಡಿದರು.

ಶೂನ್ಯವೇಳೆಯಲ್ಲಿ ಮಾತನಾಡಿದ ಖರ್ಗೆ, ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ದಲಿತರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ. ಸ್ವಾಭಿಮಾನದಿಂದ ತಲೆ ಎತ್ತಿ ಜೀವನ ನಡೆಸಲು ಯತ್ನಿಸುವ ದಲಿತರ ಶೋಷಣೆ ಮುಂದುವರಿದಿದೆ ಎಂದು ದೂರಿದರು.

ದೇಶದಲ್ಲಿ ಆಡಳಿತ ನಡೆಸಿದ ಕೆಲವು ಅರಸರು ದಲಿತರನ್ನು ಸೇನೆಯಿಂದ ಹೊರಗಿಡುವ ಪದ್ಧತಿ ಜಾರಿಯಲ್ಲಿತ್ತು. ಬ್ರಿಟಿಷರು ದಲಿತರನ್ನು ಸೇನೆಗೆ ಸೇರಿಸಿಕೊಂಡು, ಪೇಶ್ವೆಗಳ ವಿರುದ್ಧ 1818ರಲ್ಲಿ ಭೀಮಾ– ಕೋರೆಗಾಂವ್‌ ಬಳಿ ನಡೆಸಿದ ಯುದ್ಧದಲ್ಲಿ ದೊರೆತ ಗೆಲುವಿನ ಸಂಭ್ರಮವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಇದೇ ಮೊದಲ ಬಾರಿ ಅಲ್ಲಿ ಹಿಂಸಾಚಾರ ನಡೆದಿದೆ ಎಂದು ವಿವರಿಸಿದರು.

ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿರುವ ಹಿಂದುತ್ವವಾದಿಗಳು ಇಂತಹ ಹಿಂಸಾಚಾರಗಳಿಗೆ ಕಾರಣರಾಗುತ್ತಿದ್ದಾರೆ. ಮನುವಾದಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಆರೋಪ ನಿರಾಕರಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌, ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್‌ ತೀವ್ರ ಹತಾಶೆಯೊಂದಿಗೆ ಇಂತಹ ಸುಳ್ಳು ಆರೋಪದಲ್ಲಿ ತೊಡಗಿದೆ ಎಂದು ಹೇಳಿದರು.

ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್‌, ಹಿಂಸಾಚಾರದಿಂದ ನಲುಗಿರುವ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸುವ ಬದಲು

ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸುವ ಬದಲಿಗೆ, ತುಪ್ಪ ಸುರಿಯುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಘೋಷಣೆಯೊಂದಿಗೆ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ, ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

‘ಮೋದಿ ಮೌನಿ ಬಾಬಾ ಆಗಿದ್ದಾರೆ’ ಎಂದು ಖರ್ಗೆ ಹೇಳುತ್ತಿದ್ದಂತೆಯೇ ಕೋಲಾಹಲ ಇನ್ನಷ್ಟು ಹೆಚ್ಚಿತು.

ಸ್ಪೀಕರ್‌ ಎದುರಿನ ಜಾಗಕ್ಕೆ ಧಾವಿಸಿದ ಕಾಂಗ್ರೆಸ್‌ ಸದಸ್ಯರು, ‘ಪ್ರಧಾನಿ ಸದನಕ್ಕೆ ಬಂದು ಉತ್ತರ ನೀಡಲಿ’ ಎಂಬ ಘೋಷಣೆ ಕೂಗಲಾರಂಭಿಸಿದರು. ಆಗ ಬಿಜೆಪಿ– ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.

‘ನಿಮ್ಮ ಭಾಷೆ ಮತ್ತು ನಾಲಿಗೆಯ ಮೇಲೆ ಹಿಡಿತವಿರಲಿ’ ಎಂದು ಕಾಂಗ್ರೆಸ್‌ ಸದಸ್ಯರಿಗೆ ಎಚ್ಚರಿಕೆ ನೀಡಿದ ಸುಮಿತ್ರಾ ಮಹಾಜನ್‌, 15 ನಿಮಿಷ ಕಲಾಪ ಮುಂದೂಡಿದರು.

ಮತ್ತೆ ಕಲಾಪ ಆರಂಭವಾದಾಗಲೂ ಪ್ರತಿಭಟನೆ ಮುಂದುವರಿಯಿತು. ‘ಮಹಾರಾಷ್ಟ್ರದ ಹಿಂಸಾಚಾರ ಪ್ರಕರಣ ಕುರಿತು ಅಲ್ಲಿನ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ಆದರೂ ನೀವು ಪ್ರತಿಭಟನೆ ನಡೆಸುತ್ತಿರುವುದು ಏಕೆ’ ಎಂದು ಸ್ಪೀಕರ್‌ ಪ್ರಶ್ನಿಸುತ್ತಿದ್ದಂತೆಯೇ, ಕಾಂಗ್ರೆಸ್ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.

'ಒಳ್ಳೆಯ ವೈದ್ಯರನ್ನು ಕಳುಹಿಸುತ್ತೇನೆ'

ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ನಡುವೆ ನಡೆದ ಸಂಭಾಷಣೆಯು, ಕಲಾಪದಲ್ಲಿ ಭಾಗವಹಿಸಿದವರನ್ನು ನಗೆಗಡಲಲ್ಲಿ ತೇಲಿಸಿತು.

ಶೂನ್ಯವೇಳೆಯಲ್ಲಿ ಮಾತನಾಡಲು ಅವಕಾಶಪಡೆದ ಖರ್ಗೆ, ‘ಮಹಾರಾಷ್ಟ್ರದಲ್ಲಿ ನಡೆದಿರುವ ಹಿಂಸಾಚಾರದ ಕುರಿತು ಸಮಗ್ರ ಚರ್ಚೆ ನಡೆಸಲು ನಾನು ನಿಲುವಳಿ ಸೂಚನೆ ಮಂಡಿಸಿದ್ದೆ. ಆದರೆ ಅದು ಅಸ್ವೀಕಾರ ಆಯಿತು’ ಎಂದು ತಿಳಿಸಿ ವಿಷಯ ಪ್ರಸ್ತಾಪಿಸಲು ತೊಡಗಿದರು.

‘ಅಸ್ವೀಕಾರ’ ಎಂಬ ಪದವನ್ನು ‘ಸ್ವೀಕಾರ’ ಎಂದು ಕೇಳಿಸಿಕೊಂಡ ಸ್ಪೀಕರ್‌, ‘ಇಲ್ಲ ಇಲ್ಲ ನೀವು ಸಲ್ಲಿಸಿರುವ ನಿಲುವಳಿ ಸೂಚನೆ ಸ್ವೀಕಾರ ಆಗಿಲ್ಲ’ ಎಂದು ಸ್ಪಷ್ಟನೆ ನೀಡಲೆತ್ನಿಸಿದರು.

‘ನಾನೂ ಕೂಡ ಅದನ್ನೇ ಹೇಳಿದ್ದೇನೆ. ಅದು ಅಸ್ವೀಕಾರ ಆಗಿದೆ’ ಎಂದು ಖರ್ಗೆ ಪ್ರತಿಕ್ರಿಯೆ ನೀಡಿದರಲ್ಲದೆ, ‘ಮೇಡಂ ನನಗೂ ಚೆನ್ನಾಗಿ ಹಿಂದಿ ಮಾತನಾಡಲು ಬರುತ್ತದೆ’ ಎಂದು ಕಟಕಿಯಾಡಿದರು.

‘ಅಯ್ಯೋ ನಿಮಗೆ ನನಗಿಂತ ಚೆನ್ನಾಗಿಯೇ ಹಿಂದಿ ಬರುತ್ತದೆ. ನಿಮ್ಮ ಮಾತು ಕೇಳಿ ಕೇಳಿ ಅನೇಕ ಸಲ ನನ್ನ ಕಿವಿಗಳು ಬಂದ್‌ ಆಗುತ್ತವೆ’ ಎಂದು ಸ್ಪೀಕರ್‌ ಕಾಲೆಳೆಯಲು ಯತ್ನಿಸಿದಾಗ, ಸದನದಲ್ಲಿದ್ದ ಬಹುತೇಕ ಸದಸ್ಯರಲ್ಲಿ ನಗೆ ಉಕ್ಕಿತು.

ಸ್ಪೀಕರ್‌ ಮಾತಿನ ಹಿಂದಿನ ಕೀಟಲೆಯನ್ನು ಅರಿತ ಖರ್ಗೆ, ‘ನಿಮ್ಮ ಕಿವಿ ಪರೀಕ್ಷಿಸಿಕೊಳ್ಳಲು ನಾನು ಒಳ್ಳೆಯ ವೈದ್ಯರನ್ನು ಕಳುಹಿಸುತ್ತೇನೆ ಬಿಡಿ ಮೇಡಂ’ ಎಂದು ಮರು ಉತ್ತರ ನೀಡಿದಾಗ, ಸದಸ್ಯರಿಗೆ ನಗೆಯನ್ನು ತಡೆಯಲಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry