ಶನಿವಾರ, ಆಗಸ್ಟ್ 8, 2020
23 °C

ಸುತ್ತೂರು ಜಾತ್ರೆ, ಸಾಂಸ್ಕೃತಿಕ ಯಾತ್ರೆ ಜ. 13ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಮತ್ತು ಧಾರ್ಮಿಕ ಸಾಂಸ್ಕೃತಿಕ ಯಾತ್ರೆ ಜ. 13ರಿಂದ 18ರ ವರೆಗೆ ನಡೆಯಲಿದೆ.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಾತ್ರೆಯ ಅಂಗವಾಗಿ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಲಕ್ಷ ದೀಪೋತ್ಸವ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಎಸ್.ಎಂ. ಜಂಭುಕೇಶ್ವರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿ ಮೇಳ, ಚಿತ್ರಸಂತೆ, ಸಾಮೂಹಿಕ ವಿವಾಹ, ಜಾನುವಾರು ಜಾತ್ರೆ, ಕಲಾತಂಡಗಳಿಂದ ಪ್ರದರ್ಶನ, ಸಾಂಸ್ಕೃತಿಕ ಮೇಳ, ಸೊಬಾನೆ, ಗಾಳಿಪಟ, ಕುಸ್ತಿ, ದೇಸಿ ಆಟಗಳು, ಚಿತ್ರ ಬರೆಯುವುದು ಹಾಗೂ ಸಿರಿಧಾನ್ಯ ಆಹಾರ ತಯಾರಿಸುವ ಸ್ಪರ್ಧೆಗಳು ಜಾತ್ರೆಯ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.

ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸ್ಥಾಪಿಸಿರುವ ಮಾಹಿತಿ ಕೇಂದ್ರ, ಬೀಜ ಉಗ್ರಾಣ, ಬೀಜ ಬ್ಯಾಂಕ್, ಗೋಶಾಲೆ ಹಾಗೂ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನ ಸಂಪನ್ಮೂಲ ಕೇಂದ್ರಗಳು ಉದ್ಘಾಟನೆಗೊಳ್ಳಲಿವೆ ಎಂದು ಹೇಳಿದರು.

ಸಮಿತಿಯ ಪ್ರೊ.ಮಲೆಯೂರು ಗುರುಸ್ವಾಮಿ, ‘ಜ. 14ರಂದು ಸರ್ವಧರ್ಮ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಇದರಲ್ಲಿ ಭಾಗವಹಿಸುವ ವಧುವಿಗೆ ಮಾಂಗಲ್ಯ, ಸೀರೆ, ಕಾಲುಂಗುರ ಹಾಗೂ ವರನಿಗೆ ಪಂಚೆ,  ಶರ್ಟ್‌ ಉಚಿತವಾಗಿ ನೀಡಲಾಗುತ್ತದೆ. 16 ವರ್ಷದಿಂದ ನಡೆಯುತ್ತಿರುವ ಸಾಮೂಹಿಕ ವಿವಾಹದಲ್ಲಿ ಇದುವರೆಗೆ 2,600ಕ್ಕೂ ಹೆಚ್ಚು ಮಂದಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ತಿಳಿಸಿದರು.

ಚಿನ್ನದ ಲೇಪನವಿರುವ ಕಳಸ, ಆಧುನಿಕ ತಂತ್ರಜ್ಞಾನದ ಬ್ರೇಕ್ ಹಾಗೂ ಟರ್ನಿಂಗ್ ಸೌಲಭ್ಯವಿರುವ ನೂತನ ಮಹಾರಥವನ್ನು ಆದಿ ಜಗದ್ಗುರು ಶಿವಯೋಗಿಗಳಿಗೆ ಜಾತ್ರೆಯಲ್ಲಿ ಸಮರ್ಪಿಸಲಾಗುವುದು. ಹೆಸರಾಂತ ರಥ ಶಿಲ್ಪಿಗಳಾದ ಬೆಂಗಳೂರಿನ ಬಸವರಾಜ್ ಎಸ್. ಬಡಿಗೇರ ಅವರು ರಥವನ್ನು ತಯಾರಿಸಿದ್ದಾರೆ. 15ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಜಾತ್ರಾ ಮಹೋತ್ಸವದ ಏಳು ದಿನವೂ ರಾಜ್ಯದ ಪ್ರಸಿದ್ಧ ಗಾಯಕರು, ಸಾಂಸ್ಕೃತಿಕ ತಂಡಗಳಿಂದ ಸುಗಮ ಸಂಗೀತ, ನಾಟಕ, ವಚನ ಗಾಯನ, ಭಕ್ತಿ ಸಂಗೀತ, ಭರತನಾಟ್ಯ, ನೃತ್ಯ ರೂಪಕ, ಯೋಗ ನಮಸ್ಕಾರ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಸಮಿತಿಯ ಡಾ. ಅರುಣ ಬಳಮಟ್ಟಿ, ಡಾ. ಎಂ. ಪ್ರಭು ಹಾಗೂ ವೀರಭದ್ರಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.