ಶನಿವಾರ, ಜೂಲೈ 4, 2020
21 °C

ಪಂಕ್ತಿಸೇವೆ ನಡೆಸಲು ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಕ್ತಿಸೇವೆ ನಡೆಸಲು ಒತ್ತಾಯಿಸಿ ಪ್ರತಿಭಟನೆ

ಕೊಳ್ಳೇಗಾಲ: ಚಿಕ್ಕಲ್ಲೂರು ಜಾತ್ರೆ ಯಲ್ಲಿ ನಡೆಯುವ ಪಂಕ್ತಿ ಸೇವೆಗೆ ಅಡ್ಡಿಪಡಿಸಬಾರದು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ಶಾಸಕ ಆರ್. ನರೇಂದ್ರ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದವು.

ನಗರದ ವಾಸವಿ ಕಾಲೇಜು ಸಮೀಪವಿರುವ ಶಾಸಕ ನರೇಂದ್ರ ಅವರ ಮನೆ ಮುಂಭಾಗ ಸಮಾವೇಶಗೊಂಡ ಸಿದ್ದಪ್ಪಾಜಿ, ಮಂಟೇಸ್ವಾಮಿ ಪರಂಪರೆ ಹೋರಾಟ ಸಮಿತಿ, ರೈತ ಸಂಘ, ಹಸಿರುಸೇನೆ, ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಘೋಷಣೆ ಕೂಗಿದರು.

ಹಲವು ಶತಮಾನಗಳಿಂದ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆ ನಡೆಸಲಾಗುತ್ತಿದೆ. ಆದರೆ, ಕಳೆದೆರಡು ವರ್ಷದಿಂದ ಪ್ರಾಣಿ ದಯಾ ಸಂಘದಿಂದ ನ್ಯಾಯಾಲಯ ಹಾಗೂ ಜಿಲ್ಲಾಡಳಿತಕ್ಕೆ ಸುಳ್ಳು ದಾಖಲೆ ನೀಡಿ ಸಹಪಂಕ್ತಿ ಭೋಜನಕ್ಕೆ ಅಡ್ಡಿಪಡಿಸುವ ಮೂಲಕ ಭಕ್ತರ ಭಾವನೆ ಮತ್ತು ಆಹಾರ ಪದ್ಧತಿಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಿದ್ದಪ್ಪಾಜಿ ಪರಂಪರೆಯಲ್ಲಿ ಪ್ರಾಣಿ ಬಲಿ ಕೊಡುವ ಪದ್ದತಿಯೇ ಇಲ್ಲ. ಚಿಕ್ಕಲ್ಲೂರಿನ ದೇವಸ್ಥಾನದಲ್ಲಿ ಬಲಿಪೀಠವೇ ಇಲ್ಲ. ಹಿಂದುಳಿದ ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಾಮೂಹಿಕವಾಗಿ ಜಾತಿ ಭೇದ ಮರೆತು ಮಾಡುವ ಪಂಕ್ತಿ ಸೇವೆಗೆ ಜಿಲ್ಲಾಡಳಿತ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು.

ದೇವರ ಸೇವೆಗೆಂದು ಬರುವ ಭಕ್ತರಿಗೆ ತಪಾಸಣೆಯ ನೆಪದಲ್ಲಿ ಪೊಲೀಸರು ನೀಡುತ್ತಿರುವ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕು. ಶಾಸಕ ನರೇಂದ್ರ ಅವರು ಈ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿಸಬೇಕು. ಇಲ್ಲವಾದಲ್ಲಿ ಚಿಕ್ಕಲ್ಲೂರು ಜಾತ್ರೆಯ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ, ಪೊಲೀಸ್‌ ಠಾಣೆಗೆ ತೆರಳಿ ಡಿವೈಎಸ್‌ಪಿ ಪುಟ್ಟಮಾದಯ್ಯ ಅವರಿಗೆ ಮನವಿ ಸಲ್ಲಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್, ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಶೈಲೇಂದ್ರ, ಜಯ ಕರ್ನಾಟಕ ಸಂಘದ ಟೌನ್ ಅಧ್ಯಕ್ಷ ಪ್ರಭುಸ್ವಾಮಿ, ನಾಗರಿಕ ಸಮಿತಿ ಅಧ್ಯಕ್ಷ ನಟರಾಜ್‌ಮಾಳಿಗೆ, ನಗರಸಭೆ ಸದಸ್ಯ ರಂಗಸ್ವಾಮಿ, ಮುಖಂಡರಾದ ದೇವಾನಂದ್, ಸಿದ್ದಪ್ಪ, ಜಲಾವುಲ್ಲಾ, ಮಣಿ, ರಾಜಶೇಖರ್, ದಿಲೀಪ್‌ಕುಮಾರ್, ನಾಗಸುಂದರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.