ಮಂಗಳವಾರ, ಆಗಸ್ಟ್ 4, 2020
22 °C
ಕೀಟ ಲೋಕ

ಎಲೆಲೆ ಕೀಟ...

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಎಲೆಲೆ ಕೀಟ...

ಮನೆಯೊಳಗೋ ಹೊರಗೋ ಕಣ್ಣಿಗೆ ಕಂಡ ಕೀಟಗಳನ್ನೆಲ್ಲಾ ಸಾಯಿಸುವ ಹಟವನ್ನು ನಾವು ಬಿಡಬೇಕು. ಆರೋಗ್ಯಕ್ಕೆ ಮಾರಕವಾದ ಸೊಳ್ಳೆ, ನೊಣ, ಜಿರಳೆಗಳನ್ನು ಸಾಯಿಸಿ, ಆದರೆ ಕೀಟಗಳಿರುವುದೇ ಸಾಯಿಸುವುದಕ್ಕೆ ಎಂಬ ನಮ್ಮ ಮನೋಭಾವವನ್ನು ಬದಲಿಸಿಕೊಳ್ಳಬೇಕಿದೆ...’

ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಾಸುಕಿ ವಿ. ಬೆಳವಾಡಿ ಮಾತು ಶುರು ಮಾಡಿದ್ದೇ ಹೀಗೆ.

ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಮೂರು ದಿನ (ಜನವರಿ 5–7) ನಡೆಯಲಿರುವ ‘ವಿಸ್ಮಯ ಕೀಟ’ಗಳ ಪ್ರದರ್ಶನ ಸಾರ್ವಜನಿಕರಲ್ಲಿ ಕೀಟಗಳ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂಬುದು ಪ್ರದರ್ಶನದ ಆಶಯ.

‘ಕೀಟಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿ ಮನೆಯೂ ಕಾರ್ಯಪ್ರವೃತ್ತವಾಗಬೇಕು. ಕೀಟಗಳು ಇಲ್ಲದಿದ್ದರೆ ಪರಾಗಸ್ಪರ್ಶದ ಮೂಲಕ ನಮಗೆ ಹೂವು, ಹಣ್ಣು ಸಿಗುವುದು ಸಾಧ್ಯವೇ? ಇದೊಂದು ಉದಾಹರಣೆ ಮಾತ್ರ. ಕೃಷಿಕರಿಗೆ, ರೈತರಿಗೆ ಮತ್ತು ನಮಗೆಲ್ಲರಿಗೂ ಸ್ನೇಹಿತನಂತೆ ಕೆಲಸ ಮಾಡುವ ಅನೇಕ ಕೀಟಗಳು ಇವೆ. ಆದರೆ ಕೀಟನಾಶಕಗಳ ಬಳಕೆ ಮತ್ತು ನಮ್ಮ ನಗರೀಕರಣದ ವಿವಿಧ ಆಯಾಮಗಳು ಕೀಟಗಳಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಕೀಟಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆಯ ಕೊರತೆ ಇರುವುದೂ ಕೀಟಗಳ ನಾಶಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಪ್ರೊ.ಬೆಳವಾಡಿ ವಿವರಿಸುತ್ತಾರೆ. 

ಎಲ್ಲಾ ಕೀಟಗಳೂ ನಮಗೆ ಹಾನಿ ಮಾಡುವುದಿಲ್ಲ, ಉಪದ್ರವಕಾರಿಗಳಲ್ಲ. ಹಾನಿ ಮಾಡುವ ಕೀಟಗಳ ಪ್ರಮಾಣ ಬಹು ಕಡಿಮೆ. ಬಹುಪಾಲು ಕೀಟಗಳು ನಮಗೆ ಸಹಾಯ ಮಾಡುತ್ತವೆ. ಪ್ರಾಣಿ, ಪಕ್ಷಿಗಳ ಬಗ್ಗೆ ಜನರಿಗಿರುವ ತಿಳಿವಳಿಕೆಯನ್ನು ಹೋಲಿಸಿದರೆ ಕೀಟಗಳ ಕುರಿತ ಮಾಹಿತಿ ಕಡಿಮೆಯೇ. ಹಾಗಾಗಿ ಕೀಟಗಳ ಬಗ್ಗೆ ಎಲ್ಲರಿಗೂ ಮಾಹಿತಿ ತಲುಪಿಸಬೇಕಾದ ಅಗತ್ಯವಿದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಯುವಜನರು, ಗೃಹಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು. ಯಾವ ಋತುವಿನಲ್ಲಿ ಕಂಡುಬರುವ ಕೀಟಗಳು ಯಾವುವು ಮತ್ತು ಅವುಗಳಲ್ಲಿ ರೈತಸ್ನೇಹಿ ಕೀಟಗಳು ಯಾವುವು ಎಂಬ ಮಾಹಿತಿ ಕೊಡುವ ಉದ್ದೇಶದಿಂದ ರೈತರನ್ನೂ ಪ್ರದರ್ಶನಕ್ಕೆ ಆಹ್ವಾನಿಸಲಾಗಿದೆ. ಕೀಟಶಾಸ್ತ್ರ ವಿಭಾಗದಲ್ಲಿ ಸಂರಕ್ಷಿಸಿಡಲಾಗಿರುವ ನೂರಾರು ಕೀಟಗಳನ್ನು ಹಾಗೂ ನಮ್ಮ ಸುತ್ತಮುತ್ತ ಕಂಡುಬರುವ ತಾಜಾ ಕೀಟಗಳನ್ನೂ ಪ್ರದರ್ಶನದಲ್ಲಿ ನೋಡಬಹುದು ಎಂದು ಅವರು ಮಾಹಿತಿ ನೀಡುತ್ತಾರೆ.

ಬ್ರಿಟನ್‌ನ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ, ಅಮೆರಿಕದ ಸ್ಮಿತ್‌ ಸೋನಿಯನ್‌ ಇನ್‌ಸ್ಟಿಟ್ಯೂಟ್‌ ಸೇರಿದಂತೆ ಬೆರಳೆಣಿಯ ಸಂಸ್ಥೆಗಳು ಕೀಟಗಳ ಸಂಪೂರ್ಣ ಜೀವನಚಕ್ರದ ಅಧ್ಯಯನಕ್ಕೆ ಮುಡಿಪಾಗಿದೆ. ಕೃಷಿ ವಿ.ವಿ. ಕೀಟಶಾಸ್ತ್ರ ವಿಭಾಗವು ಕೀಟಗಳ ಸಂರಕ್ಷಣೆ, ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ. ವಿ.ವಿ.ಯ ಕೀಟಶಾಸ್ತ್ರ ಸಂಘದ ವತಿಯಿಂದ 1979ರಿಂದ ಕೀಟ ಪ್ರದರ್ಶನ ಆರಂಭಿಸಲಾಗಿದೆ. ಆದರೆ ಪ್ರತಿ ವರ್ಷ ಅಥವಾ ನಿಯಮಿತವಾಗಿ ನಡೆದಿಲ್ಲ.

ಈ ಬಾರಿ ಏರ್ಪಡಿಸಲಾಗಿರುವ ‘ವಿಸ್ಮಯಕೀಟ’ ಎಂಬ ಪ್ರದರ್ಶನ ಯಶಸ್ವಿಯಾದರೆ ಮುಂದೆ ನಿಯಮಿತವಾಗಿ ರಾಜ್ಯದ ವಿವಿಧೆಡೆ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಉದ್ದೇಶ ಸಂಘಕ್ಕಿದೆಯಂತೆ.ಎಲೆ ಜೀರುಂಡೆ

***

10 ಲಕ್ಷಕ್ಕೂ ಹೆಚ್ಚು ಪ್ರಭೇದದ ಕೀಟಗಳು ಪ್ರಪಂಚದಲ್ಲಿವೆ

70 ಸಾವಿರದಷ್ಟು ಪ್ರಭೇದದ ಕೀಟಗಳು ಭಾರತದಲ್ಲಿವೆ

ಸುಮಾರು 6 ಸಾವಿರ ಪ್ರಭೇದದ ಕೀಟಗಳು ಬೆಂಗಳೂರಿನಲ್ಲಿವೆ

ಸುಮಾರು 4 ಸಾವಿರ ಕೀಟಗಳನ್ನು ಕೃಷಿ ವಿ.ವಿ. ಕೀಟಶಾಸ್ತ್ರ ವಿಭಾಗದಲ್ಲಿ ಸಂರಕ್ಷಿಸಿಡಲಾಗಿದೆಎಲೆಯೊಂದು ಕೀಟವಾಗಿ...

***

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.