ದೀಪಕ್‌ ಕೊಲೆಯಲ್ಲಿ ಸಚಿವ ರೈ ಕೈವಾಡ: ಯಡಿಯೂರಪ್ಪ

7

ದೀಪಕ್‌ ಕೊಲೆಯಲ್ಲಿ ಸಚಿವ ರೈ ಕೈವಾಡ: ಯಡಿಯೂರಪ್ಪ

Published:
Updated:
ದೀಪಕ್‌ ಕೊಲೆಯಲ್ಲಿ ಸಚಿವ ರೈ ಕೈವಾಡ: ಯಡಿಯೂರಪ್ಪ

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ‘ಮಂಗಳೂರಿನ ಕಾಟಿಪಳ್ಳದ ಕೈಕಂಬದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್‌ ರೈ ಅವರ ಕೈವಾಡವಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಶಾಂತ್‌ ಪೂಜಾರಿ, ರಾಜೀವ್‌ ಕೊಟ್ಯಾನ್‌, ಶರತ್‌ ಮಡಿವಾಳ ಸೇರಿದಂತೆ ಇದುವರೆಗೆ ಕರಾವಳಿ ಭಾಗದಲ್ಲಿ 21 ಮಂದಿ ಹಿಂದೂಗಳ ಕೊಲೆಯಾಗಿದೆ. ಕೇರಳ ಮಾದರಿಯಲ್ಲಿ ಘಟನೆಗಳು ಮುಂದುವರೆದಿವೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣ. ನಿಜವಾದ ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ದೀಪಕ್‌ ಕೊಲೆಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ದೊಡ್ಡ ಹೋರಾಟ ನಡೆಸಲಾಗುವುದು. ಮಂಗಳೂರಿನಲ್ಲಿ ಪಾದಯಾತ್ರೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇಷ್ಟರಲ್ಲೇ ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ದೀಪಕ್‌ ಶವ ತೆಗೆದುಕೊಂಡು ಹೋಗಲು ಕುಟುಂಬದವರೇ ಬಂದಿದ್ದರು. ಆದರೆ, ಸರ್ಕಾರದ ಕಡೆಯಿಂದ ಅವರ ಶವವನ್ನು ಮನೆಗೆ ತಲುಪಿಸಲಾಗಿದೆ. ಇದರಿಂದ ಗಲಭೆ ಸೃಷ್ಟಿಯಾಗಿದೆ. ನಂತರ ಜಿಲ್ಲಾ ಆಡಳಿತ ಕರ್ಫ್ಯೂ ವಿಧಿಸಿತು. ಇವೆಲ್ಲ ಅನುಮಾನಕ್ಕೆ ಎಡೆಮಾಡಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊಲೆಗಡುಕರಿಗೆ ಭಯ ಇಲ್ಲದಂತಾಗಿದೆ. ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ನಡೆಸಿದರೆ ಸತ್ಯ ಬಹಿರಂಗವಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry