ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ತಿಂಗಳಲ್ಲಿ 37,125 ಪ್ರಕರಣ

ತಂಬಾಕು ನಿಯಂತ್ರಣ ಕಾಯ್ದೆ: 2016ನೇ ವರ್ಷಕ್ಕೆ ಹೋಲಿಸಿದರೆ 2017ರಲ್ಲಿ ಮೂರು ಪಟ್ಟು ಹೆಚ್ಚು ಪ್ರಕರಣ
Last Updated 4 ಜನವರಿ 2018, 20:09 IST
ಅಕ್ಷರ ಗಾತ್ರ

ಬೆಂಗಳೂರು: ತಂಬಾಕು ನಿಯಂತ್ರಣ ಕಾಯ್ದೆಯಡಿ (ಕೋಟ್ಪಾ) ಕಳೆದ ವರ್ಷ 37,125 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರ ಪ್ರಕರಣಗಳೇ ಹೆಚ್ಚಾಗಿವೆ.

ನಗರ ಅಪರಾಧ ದಾಖಲಾತಿ ಘಟಕದ (ಸಿಸಿಆರ್‌ಬಿ) 2017ರ ನವೆಂಬರ್‌ವರೆಗಿನ ಅಂಕಿಅಂಶದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಅದರ ಪ್ರಕಾರ, 2016ನೇ ವರ್ಷಕ್ಕೆ ಹೋಲಿಸಿದರೆ 2017ರಲ್ಲಿ ಮೂರು ಪಟ್ಟು ಹೆಚ್ಚು ಪ್ರಕರಣಗಳು ಈ ಕಾಯ್ದೆಯ ಐದು ಸೆಕ್ಷನ್‌ಗಳಡಿ ದಾಖಲಾಗಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ (ಸೆಕ್ಷನ್–4) ಆರೋಪದಡಿ 36,804 ಪ್ರಕರಣಗಳು, ತಂಬಾಕು ಮಾರಾಟದ ಕುರಿತು ಜಾಹೀರಾತು ನೀಡಿದ (ಸೆಕ್ಷನ್–5) ಆರೋಪದಡಿ 1 ಪ್ರಕರಣ, ತಂಬಾಕು ದುಷ್ಪರಿಣಾಮದ ಬಗ್ಗೆ ಪ್ಯಾಕೆಟ್‌ಗಳ ಮೇಲೆ ಮಾಹಿತಿ ನೀಡದೆ.

ಮಾರಾಟ ಮಾಡಿದ (ಸೆಕ್ಷನ್–6ಎ) ಆರೋಪದಡಿ 38 ಪ್ರಕರಣಗಳು, ಶಾಲಾ–ಕಾಲೇಜುಗಳ ಆವರಣದಲ್ಲಿ ತಂಬಾಕು ಮಾರಿದ (ಸೆಕ್ಷನ್–6ಬಿ) ಆರೋಪದಡಿ 171 ಪ್ರಕರಣಗಳು ಹಾಗೂ ತಂಬಾಕು ಪ್ಯಾಕೆಟ್‌ಗಳ ಮೇಲೆ ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಎಚ್ಚರಿಕೆ ಸಂದೇಶ ಮುದ್ರಿಸಿದ (ಸೆಕ್ಷನ್–7) ಆರೋಪದಡಿ 111 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೆಕ್ಷನ್–4, 6ಎ ಹಾಗೂ 6ಬಿ ಅಡಿ ದಾಖಲಾದ ಪ್ರಕರಣಗಳಿಗೆ ತಲಾ ₹200 ದಂಡ ವಿಧಿಸಲಾಗಿದೆ. ಅದೇ ರೀತಿ ಸೆಕ್ಷನ್ 5 ಹಾಗೂ 7ರ ಅಡಿ ದಾಖಲಾದ ಪ್ರಕರಣಗಳಿಗೆ ತಲಾ ₹1,500 ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನಗರದ ಎಂಟು ವಿಭಾಗಗಳ ಪೈಕಿ ಆಗ್ನೇಯ ವಿಭಾಗದಲ್ಲಿ 10,356 ಧೂಮಪಾನಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ದಕ್ಷಿಣ, ಕೇಂದ್ರ, ಈಶಾನ್ಯ, ಪೂರ್ವ, ಉತ್ತರ, ಪಶ್ಚಿಮ, ವೈಟ್‌ಫೀಲ್ಡ್‌ ವಿಭಾಗಗಳು ನಂತರದ ಸ್ಥಾನದಲ್ಲಿವೆ.

ಕೋಟ್ಪಾ ಪರಿಣಾಮಕಾರಿಯಾಗಿ ಅನುಷ್ಠಾನ: ‘ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿಯೇ ಹೆಚ್ಚು ತಂಬಾಕು ವ್ಯಸನಿಗಳಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ. ಹೀಗಾಗಿ, ಕೋಟ್ಪಾ ಕಾಯ್ದೆಯನ್ನು ನಗರ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ’ ಎಂದು ರಾಜ್ಯ ತಂಬಾಕು ನಿಯಂತ್ರಣದ ಉನ್ನತ ಸಮಿತಿ ಸದಸ್ಯ ಡಾ. ಯು.ಎಸ್.ವಿಶಾಲ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿ ದಂಡ ಕಟ್ಟಿದವರ ಪೈಕಿ ಯುವಕರೇ ಹೆಚ್ಚು. ಇದಕ್ಕೆ ಕಾರಣ ತಂಬಾಕು ಉತ್ಪನ್ನಗಳ ಉದ್ದಿಮೆಗಳು. ನಾನಾ ತಂತ್ರಗಳ ಮೂಲಕ ಈ ಉದ್ದಿಮೆಗಳು ಯುವಕರನ್ನು ಆಕರ್ಷಿಸಿ ಸುಲಭವಾಗಿ ದುಶ್ಚಟಗಳಿಗೆ ಬೀಳಿಸುತ್ತವೆ. ನಗರ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತಿದೆ’ ಎಂದು ಹೇಳಿದರು.

ಮಾದಕವಸ್ತುಗಳ ಚಟಕ್ಕೆ ಬೀಳುವ ಶೇಕಡ 95ರಷ್ಟು ಮಂದಿ ಆರಂಭದಲ್ಲಿ ತಂಬಾಕು ಜಗಿಯುತ್ತಾರೆ, ಇಲ್ಲವೇ ಸಿಗರೇಟ್‌ ಸೇದುತ್ತಾರೆ ಎಂಬುದು ಅಧ್ಯಯನದ ಮೂಲಕ ಸಾಬೀತಾಗಿದೆ. ಹೀಗಾಗಿ, ತಳಮಟ್ಟದಿಂದ ತಂಬಾಕು ವ್ಯಸನಿಗಳ ಪ್ರಮಾಣ ಇಳಿಕೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಂಬಾಕು ಬಳಕೆಯ ಪರಿಣಾಮದ ಕುರಿತು ಜನಜಾಗೃತಿಯ ಹೊರತಾಗಿಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗೃಹ ಮತ್ತು ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕ ಆರೋಗ್ಯ ಸಂಸ್ಥೆ (ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌) ನೋಡಲ್‌ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯವೇ ಮೊದಲು
ತಂಬಾಕು ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಂಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ವಿಶಾಲ್ ರಾವ್ ತಿಳಿಸಿದರು.

ಮೂರು ವರ್ಷಗಳ ಹಿಂದೆ ತಂಬಾಕು ಸೇವನೆ ಮಾಡುವವರ ಸಂಖ್ಯೆ ಜಿಲ್ಲಾವಾರು ಹೆಚ್ಚಾಗಿತ್ತು. ಹೀಗಾಗಿ, ‍ಪರಿಣಾಮಕಾರಿಯಾಗಿ ಕೋಟ್ಪಾ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶಿಸಿತ್ತು. ಅದರಂತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಕೋಟ್ಪಾ ಅಡಿ ನಗರದಲ್ಲಿ ದಾಖಲಾದ ಪ್ರಕರಣಗಳು
ವರ್ಷ   ಪ್ರಕರಣ    ದಂಡ (₹ಗಳಲ್ಲಿ)
2015–  20,129 – 36,41,960
2016–  12,226  – 22,64,410
2017–  37,125  – 63,76,480

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT