ಬುಧವಾರ, ಆಗಸ್ಟ್ 5, 2020
21 °C

ಕತ್ತಲೆಯಲ್ಲೇ ಬಿಇಒ ಕಚೇರಿ...

ವಾಗೀಶ್ ಕುರುಗೋಡು Updated:

ಅಕ್ಷರ ಗಾತ್ರ : | |

ಕತ್ತಲೆಯಲ್ಲೇ ಬಿಇಒ ಕಚೇರಿ...

ಕುರುಗೋಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡು ಮೂರು ತಿಂಗಳು ಕಳೆದರೂ ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ವಿದ್ಯುತ್‌ ಸೌಕರ್ಯ ದೊರಕಿಲ್ಲ. ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಕುರಿತು ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮವೂ ಸ್ಪಷ್ಟ ಉತ್ತರ ನೀಡದೇ ಇರುವುದು ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದೆ, ನಿಗಮವು ₹40 ಲಕ್ಷ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಿದೆ.

ವಿದ್ಯುತ್ ಸಂಪರ್ಕವಿಲ್ಲದ ಕಾರಣ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ಇಂಟರ್‌ನೆಟ್‌ ಬಳಕೆಯೂ ಇಲ್ಲ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಶಿಕ್ಷಕರ ಮತ್ತು ಕಚೇರಿ ಸಿಬ್ಬಂದಿ ವೇತನದ ಬಿಲ್‌ ತಯಾರಿಕೆ, ಶಿಕ್ಷಕರ ಮಾಹಿತಿ ಸಂಗ್ರಹ ಕಾರ್ಯವೆಲ್ಲಕ್ಕೂ ಹಿನ್ನಡೆ ಉಂಟಾಗಿದೆ. ಸಮಸ್ಯೆಯನ್ನು ಪರಿಹರಿಸಲು ನಿಗಮದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಾಲ್ಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಪ್ಪನವರ ನಾಗರಾಜ ಆಗ್ರಹಿಸಿದರು.

15 ವರ್ಷದ ಹಿಂದೆ ವಿಂಗಡನೆ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಡಳಿತ ವ್ಯಾಪ್ತಿಯಲ್ಲಿ ಹೆಚ್ಚು ಶಾಲೆಗಳಿದ್ದ ಕಾರಣ 2003–04ನೇ ಸಾಲಿನಿಂದ ಕಚೇರಿಯನ್ನು ಪೂರ್ವ ಮತ್ತು ಪಶ್ಚಿಮ ವಲಯ ಎಂದು ವಿಭಾಗಿಸಿ ಆಡಳಿತವನ್ನು ಆರಂಭಿಸಲಾಗಿತ್ತು.

ಬಳ್ಳಾರಿ ನಗರದ ಕೆಲವು ಶಾಲೆಗಳು ಹಾಗೂ ಕುರುಗೋಡು ಭಾಗದ ಶಾಲೆಗಳು ಪಶ್ಚಿಮ ವಲಯದ ವ್ಯಾಪ್ತಿಯಲ್ಲಿದ್ದವು. ಕುರಗೋಡು ಭಾಗದ ಹೆಚ್ಚು ಶಾಲೆಗಳಿರುವ ಕಾರಣ ಆಡಳಿತಾತ್ಮಕವಾಗಿ ಶಿಕ್ಷಕರಿಗೆ ಅನುಕೂಲಗೊಳಿಸುವ ಉದ್ದೇಶದಿಂದ 2010ರಲ್ಲಿ ಕುರುಗೋಡು ಪಟ್ಟಣದಲ್ಲಿ ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಹಳೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿತ್ತು.

ಈ ವಲಯದಲ್ಲಿ ಈಗ ಬಳ್ಳಾರಿ ನಗರವೂ ಸೇರಿದಂತೆ ಕುರುಗೋಡು ಮತ್ತು ಸುತ್ತಮುತ್ತಲಿನ 98 ಗ್ರಾಮಗಳಲ್ಲಿ ಪ್ರೌಢಶಾಲೆಗಳು, 22 ಸರ್ಕಾರಿ, 14 ಅನುದಾನಿತ ಮತ್ತು 48 ಅನುದಾನ ರಹಿತ ಸೇರಿ ಒಟ್ಟು 84 ಪ್ರಾಥಮಿಕಶಾಲೆಗಳು, 128 ಸರ್ಕಾರಿ, 11 ಖಾಸಗಿ ಅನುದಾನಿತ ,92ಖಾಸಗಿ ಅನುದಾನ ರಹಿತ ಸೇರಿ ಒಟ್ಟು 231 ಶಾಲೆಗಳಿವೆ.

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 950 ಹುದ್ದೆಗಳ ಪೈಕಿ 793 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 157 ಶಿಕ್ಷಕರ ಕೊರತೆ ಇದೆ. ಪ್ರೌಢಶಾಲೆಯಲ್ಲಿ 144 ಹುದ್ದೆಗಳ ಪೈಕಿ 28 ಶಿಕ್ಷಕರ ಕೊರತೆ ಇದೆ.

ಕೊರತೆಯೂ ನೀಗಿದೆ: ವಿಶಾಲ ಕಾರ್ಯವ್ಯಾಪ್ತಿಯುಳ್ಳ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ ಎನ್ನುವ ಕೊರಗು ಕಚೇರಿಯನ್ನು ಆರಂಭಿಸಿದ ದಿನದಿಂದಲೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರು ಮೂಲ ಸ್ಥಳಗಳಿಗೆ ತೆರಳಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ವಿಶೇಷ.

* *

ಎರಡು ದಿನದೊಳಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ಭರವಸೆ ನೀಡಿದ್ದಾರೆ

ಖೈರುನ್ನೀಸಾ ಬೇಗಂ,

ಬಿಇಒ, ಕುರುಗೋಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.