ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ– ಲಿಂಗಾಯತ ಧರ್ಮ: ತಜ್ಞರ ಸಮಿತಿ ತಡೆಗೆ ಹೈಕೋರ್ಟ್‌ ನಕಾರ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಕಾರ್ಯ ನಿರ್ವಹಣೆಗೆ ತಡೆ ನೀಡಲು ಹೈಕೋರ್ಟ್‌ ಸ್ಪಷ್ಟವಾಗಿ ಶುಕ್ರವಾರ ನಿರಾಕರಿಸಿದೆ.

ಈ ಸಂಬಂಧ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌)  ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

‘ತಜ್ಞರ ಸಮಿತಿ ಏನೇ ಕಾರ್ಯ ನಿರ್ವಹಿಸಿದರೂ ಅದು ಈ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

‘ತಜ್ಞರ ಸಮಿತಿಗೆ ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಚಟುವಟಿಕೆ ನಡೆಸಲು ಸ್ವತಂತ್ರವಿದೆ. ಈ ಸಮಿತಿಯನ್ನು ರಚಿಸಿರುವ ಅಲ್ಪಸಂಖ್ಯಾತ ಆಯೋಗಕ್ಕೆ ಶಾಸನಬದ್ಧ ಅಧಿಕಾರವಿದೆ. ಹೀಗಿರುವಾಗ ಈ ಪ್ರಕರಣದಲ್ಲಿ ಅರ್ಜಿದಾರರ ಆಕ್ಷೇಪಣೆಗಳು ಏನೇ ಇದ್ದರೂ ಅದನ್ನು ವಿವರವಾಗಿ ವಿಚಾರಣೆ ನಡೆಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದ್ದರಿಂದ ತಡೆ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಜಿ.ಆರ್.ಗುರುಮಠ, ‘ಸಮಿತಿಯಲ್ಲಿರುವ ಏಳು ಜನ ಸದಸ್ಯರು ಪೂರ್ವಗ್ರಹ ಪೀಡಿತ ಭಾವನೆಗಳನ್ನು ಹೊಂದಿದವರಾಗಿದ್ದಾರೆ. ಇಂತಹವರಿಂದ ಪಾರದರ್ಶಕ ವರದಿ ನಿರೀಕ್ಷೆ ಅಸಾಧ್ಯ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಮೇಶ್, ‘ಲಿಂಗಾಯತರು–ವೀರಶೈವರು ಬೇರೆ ಬೇರೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಗುರುಮಠ, ‘ಸ್ವಾಮಿ ಎರಡೂ ಒಂದೇ. ಅದು ಇಂಡಿಯಾ ಮತ್ತು ಭಾರತ ಇದ್ದಂತೆ’ ಎಂದರು.

‘ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ಸಮುದಾಯವನ್ನು ಏಳು ಜನ ನಾಸ್ತಿಕರ ಸಮಿತಿ ನಾಲ್ಕು ವಾರಗಳಲ್ಲಿ ಆಖೈರುಗೊಳಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ ಗುರುಮಠ, ‘ಸರ್ಕಾರದ ಈ ಕ್ರಮ ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ’ ಎಂದೂ ಆಕ್ಷೇಪಿಸಿದರು.

ಅರ್ಜಿದಾರರ ಪರ ಹಾಜರಿದ್ದ ಮತ್ತೊಬ್ಬ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಸರ್ಕಾರ ಮಲಗಿದ್ದವರನ್ನು ಬಡಿದೆಬ್ಬಿಸಿದೆ. ಇದರಿಂದಾಗಿ ಲಿಂಗಾಯತ ಮತ್ತು ವೀರಶೈವರು ಬೀದಿಗಿಳಿದು ಜಗಳ ಕಾಯುತ್ತಿದ್ದಾರೆ’ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

‘ಧರ್ಮದ ವಿಷಯದಲ್ಲಿ ಮಧ್ಯಪ್ರವೇಶಿಸಲು ಸರ್ಕಾರಕ್ಕೆ ಏನು ಅಧಿಕಾರ ಇದೆ’ ಎಂದು ಪ್ರಶ್ನಿಸಿದ ಹಾರನಹಳ್ಳಿ, ‘ಅಲ್ಪಸಂಖ್ಯಾತರ ಪ್ರಶ್ನೆ ಬೇರೆ. ಪ್ರತ್ಯೇಕ ಧರ್ಮದ ವಿಚಾರ ಬೇರೆ. ಜನರ ನಂಬಿಕೆಗೆ ವಿರುದ್ಧವಾಗಿ ಒಂದು ಸರ್ಕಾರ ಹೇಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಧರ್ಮದಲ್ಲಿಯೇ ನಂಬಿಕೆ ಇಲ್ಲದ ತಜ್ಞರು ಹೇಗೆ ತಾನೆ ಸರ್ವರೂ ಒಪ್ಪುವಂತಹ ವರದಿ ನೀಡಬಲ್ಲರು. ತಜ್ಞರ ಸಮಿತಿ ವರದಿಯನ್ನು ಸರ್ಕಾರ ಬಿಡುಗಡೆ ಮಾಡದಂತೆ ನಿರ್ದೇಶಿಸಬೇಕು' ಎಂದು ಕೋರಿದರು.

ಇದಕ್ಕೆ ಒಪ್ಪದ ರಮೇಶ್‌, ‘ಒಂದು ವೇಳೆ ತಜ್ಞರ ಸಮಿತಿ ವರದಿ ಕಾನೂನಿಗೆ ವಿರುದ್ಧವಾಗಿದೆ ಎಂದು ನಿಮಗೆ ಅನ್ನಿಸಿದರೆ ಇನ್ನೊಂದು ಅರ್ಜಿ ಹಾಕಿ ನೋಡೋಣ’ ಎಂದರು.

ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್, ‘ಸರ್ಕಾರದ ಕ್ರಮ ಕಾನೂನು ಬದ್ಧವಾಗಿಯೇ ಇದೆ. ತಜ್ಞರ ಸಮಿತಿ ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಇನ್ನೂ ಅದು ಮೊದಲ ಸಭೆಯನ್ನೇ ನಡೆಸಿಲ್ಲ. ಹೀಗಿರುವಾಗ ಅರ್ಜಿದಾರರು ಅವಸರವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ’ ಎಂದರು.

ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಶಶಿಧರ ಶ್ಯಾನುಭೋಗ ಹಾಗೂ ಬೆಂಗಳೂರಿನ ಸತೀಶ್ ಎಂಬುವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಪ್ರತಿವಾದಿಗಳಾದ ತಜ್ಞರ ಸಮಿತಿ ಉಪಾಧ್ಯಕ್ಷ ಸಿ.ಎಸ್‌.ದ್ವಾರಕನಾಥ್, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಪ್ರೊ.ಮುಜಾಪ್ಫರ್‌ ಅಸ್ಸಾದಿ, ರಾಮಕೃಷ್ಣ ಮರಾಠೆ, ಪುರುಷೋತ್ತಮ ಬಿಳಿಮಲೆ ಸೇರಿದಂತೆ ಕೇಂದ್ರ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಹಜ್‌ ಮತ್ತು ವಕ್ಫ್‌ ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೂ ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.

ನ್ಯಾ.ನಾಗಮೋಹನದಾಸ್ ಎಷ್ಟು ಗೌರವಾನ್ವಿತರು?

‘ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಅಧ್ಯಯನಕ್ಕೆ ರಚಿಸಿರುವ ತಜ್ಞರ ಸಮಿತಿಯನ್ನು ವಿರೋಧಿಸುವವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗುರುಮಠ, ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಎಷ್ಟು ಗೌರವಾನ್ವಿತರು ಎಂಬುದನ್ನು ನಾನು ತೆರೆದ ಕೋರ್ಟ್‌ನಲ್ಲಿ ಬಿಚ್ಚಿಡಬಲ್ಲೆ’ ಎಂದು ಸವಾಲೆಸೆದರು.

ಆಗ ನ್ಯಾಯಮೂರ್ತಿ ರಮೇಶ್ ಇಬ್ಬರನ್ನೂ ಸಮಾಧಾನಪಡಿಸಿದರು.

* ತಜ್ಞರ ಸಮಿತಿಯಲ್ಲಿರುವವರು ಒಂದು ನಿಲುವಿನ ಪರ ಗುರುತಿಸಿಕೊಂಡಿದ್ದಾರೆ. ಸಮಿತಿಯ ಶಿಫಾರಸನ್ನು ಒಪ್ಪುವ ಮಾತೇ ಇಲ್ಲ

–ಶಾಮನೂರು ಶಿವಶಂಕರ‍ಪ್ಪ, ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

* ತಜ್ಞರ ಸಮಿತಿ ಸಂಬಂಧ ಹೈಕೋರ್ಟ್‌ನಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸಿದ್ದೆವು. ಇದನ್ನು ಪರಿಗಣಿಸುವಂತೆ ಕೋರಲಾಗುವುದು

–ಜಿ.ಬಿ.ಪಾಟೀಲ, ಸಂಚಾಲಕ, ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT