ಅಕ್ರಮ ಪಂಪ್‌ಸೆಟ್‌ ಅಳವಡಿಕೆಗೆ ಇಲ್ಲ ತಡೆ

7

ಅಕ್ರಮ ಪಂಪ್‌ಸೆಟ್‌ ಅಳವಡಿಕೆಗೆ ಇಲ್ಲ ತಡೆ

Published:
Updated:
ಅಕ್ರಮ ಪಂಪ್‌ಸೆಟ್‌ ಅಳವಡಿಕೆಗೆ ಇಲ್ಲ ತಡೆ

ದಾವಣಗೆರೆ: ಕೊನೆ ಭಾಗಕ್ಕೆ ನೀರು ಹರಿಯುತ್ತಿಲ್ಲ ಎಂಬ ರೈತರ ವೇದನೆಯ ನಡುವೆಯೇ ನಾಲೆಯ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ ಅಳವಡಿಕೆ ಎಗ್ಗಿಲ್ಲದೆ ಸಾಗಿದೆ. ತಾಲ್ಲೂಕಿನ ಮಾಯಕೊಂಡ, ಅಣಬೇರು, ನಲ್ಕುಂದ, ವಿಠಲಾಪುರ ಗ್ರಾಮಗಳ ರೈತರು ಫಸಲಿಗೆ ಬಂದ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹತ್ತಾರು ಕಿ.ಮೀ ದೂರದಲ್ಲಿ ಹರಿಯುವ ಭದ್ರಾ ಬಲದಂಡೆ ನಾಲೆಗೆ ಅಕ್ರಮ ಪಂಪ್‌ಸೆಟ್‌ಗಳನ್ನು ಅಳವಡಿಸುತ್ತಿದ್ದಾರೆ. ಇದು ಕೊನೆ ಭಾಗದ ರೈತರನ್ನು ಮತ್ತಷ್ಟು ಕಂಗೆಡಿಸಿದೆ.

ನಾಲ್ಕಾರು ಅಡಿಕೆ ಬೆಳೆಗಾರರು ಸೇರಿ, ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ರಾತ್ರೋ ರಾತ್ರಿ ಜೆಸಿಬಿ ಮೂಲಕ ಕಾಲುವೆ ತೋಡಿಸಿ, ಅದರಲ್ಲೇ ಮೂರು–ನಾಲ್ಕು ಪಿವಿಸಿ ಕೊಳವೆ ಮಾರ್ಗಗಳನ್ನು ಅಳವಡಿಸುತ್ತಿದ್ದಾರೆ.

ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗದ ಕಾರಣ ಕಳೆದ ಮೂರು ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಬೆಳೆಯಲಾಗಿರಲಿಲ್ಲ. ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಈ ನಡುವೆ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಪಂಪ್‌ಸೆಟ್‌ ಅಳವಡಿಕೆ, ನಾಲೆಯ ಕೊನೆ ಭಾಗಕ್ಕೂ ನೀರು ಹರಿಸಲು ಸವಾಲಾಗಿದೆ.

ಜಿಲ್ಲೆಯ ಒಣ ಬೇಸಾಯ ಮಾಡುವ ಪ್ರದೇಶದಲ್ಲಿ ಅಡಿಕೆ ಬೆಳೆಯುವಷ್ಟು ಮಳೆಯಾಗುವುದಿಲ್ಲ. ಕೆರೆಗಳೂ ಬತ್ತಿವೆ. ಅಂತರ್ಜಲ ಮಟ್ಟವೂ ಕುಸಿದಿದೆ. ಹೀಗಿದ್ದರೂ ರೈತರು ಅಡಿಕೆ ಬೆಳೆದು, ಭದ್ರಾ ನಾಲೆಯ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಬಾರಿ ಬೇಸಿಗೆ ಬರುವ ಮುನ್ನವೇ ಮಾಯಕೊಂಡ ಹಾಗೂ ಚನ್ನಗಿರಿ ಭಾಗಗಳ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದ ಪಾರಾಗುವ ಉದ್ದೇಶದಿಂದ ರೈತರು ಭದ್ರಾ ನಾಲೆಯ ಮೊರೆ ಹೋಗಿದ್ದಾರೆ.

ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ ಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಭದ್ರಾ ಬಲದಂಡೆ ನಾಲೆಯನ್ನೇ ಆಶ್ರಯಿಸಿದೆ. ಬಲದಂಡೆ ನಾಲೆಗೆ 2,600 ಕ್ಯುಸೆಕ್‌ಗೂ ಹೆಚ್ಚು ನೀರು ಹರಿಸಿದರೂ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಅಡಿಕೆ, ಬಾಳೆ ಬೆಳೆಯಲು ನಾಲೆಯುದ್ದಕ್ಕೂ ಅಳವಡಿಸಿರುವ ಸಾವಿರಾರು ಪಂಪ್‌ಸೆಟ್‌ಗಳೇ 1,000 ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹೀರಿಕೊಳ್ಳುತ್ತಿವೆ ಎಂದು ಕೊನೆ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ ಎನ್ನುತ್ತಾರೆ ರೈತ ಮುಖಂಡ ಬಿ.ಎಂ.ಸತೀಶ್‌.

ಸತತವಾಗಿ ಬರ ಬಂದಿದ್ದರಿಂದ ಕೊಳವೆಬಾವಿಗಳು ಬತ್ತಿ ಹೋದವು. ಹೀಗಾಗಿ ಭದ್ರಾ ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಪಂಪ್‌ಸೆಟ್‌ ಅಳವಡಿಸುವವರು ಹೆಚ್ಚಿದ್ದಾರೆ. ಕಳೆದ ವರ್ಷ ಸುಮಾರು 10 ಸಾವಿರ ಅಕ್ರಮ ಪಂಪ್‌ಸೆಟ್‌ಗಳಿದ್ದವು. ಈ ವರ್ಷ 20 ಸಾವಿರ ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಪಂಪ್‌ಸೆಟ್‌ಗಳಿಗೂ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲಾಗಿದೆ ಎಂದು ದೂರುತ್ತಾರೆ ಅವರು.

ಅಕ್ರಮ ಪಂಪ್‌ಸೆಟ್‌ ಅಳವಡಿಸಿರುವ ರೈತರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು. ಕೊಳವೆ ಮಾರ್ಗ ಅಳವಡಿಕೆಗೆ ಅವಕಾಶ ನೀಡಿರುವ ಹೊಲದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಅವರದ್ದು.

ಅಡಿ ಲೆಕ್ಕದಲ್ಲಿ ಕೃಷಿ ಭೂಮಿ ಮಾರಾಟ

ನಾಲೆ ಬದಿಯ ಜಮೀನುಗಳ ಮಾಲೀಕರು ಅಕ್ರಮವಾಗಿ ಪಂಪ್‌ಸೆಟ್‌ ಅಳವಡಿಸಿಕೊಳ್ಳುವವರಿಗೆ ಅಡಿ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ಮಾರುತ್ತಿದ್ದಾರೆ. ಪಂಪ್‌ಹೌಸ್‌ ನಿರ್ಮಾಣ, ವಿದ್ಯುತ್‌ ಸಂಪರ್ಕ ಎಲ್ಲವೂ ಅಕ್ರಮವಾಗಿ ನಡೆಯುತ್ತಿವೆ ಎನ್ನುತ್ತಾರೆ ಅಣಬೇರು ಗ್ರಾಮಸ್ಥರೊಬ್ಬರು.

ಅಣಬೇರು ಗ್ರಾಮದಲ್ಲಿ ಹರಿದು ಹೋಗುವ ಭದ್ರಾ ನಾಲೆಯುದ್ದಕ್ಕೂ ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಲಾಗುತ್ತಿದೆ. ನಾಲೆಗೆ ಹಾಕಿರುವ ಕಾಂಕ್ರೀಟ್‌ ತಡೆಗೋಡೆಯಲ್ಲಿ ರಂಧ್ರ ಕೊರೆದು ಕೊಳವೆಗಳನ್ನು ಇಳಿಬಿಡಲಾಗುತ್ತಿದೆ. ಜಮೀನಿನಲ್ಲಿ ಹೊಂಡ, ಬಾವಿಗಳನ್ನು ತೆಗೆದು, ನಾಲೆಯ ನೀರನ್ನು ತುಂಬಿಸಿ, ಹತ್ತಾರು ಕಿ.ಮೀ ದೂರದ ಊರುಗಳಲ್ಲಿರುವ ತೋಟಗಳಿಗೆ ಪಂಪ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಒಂಟಿಯಾಳ್‌ ವಿಠಲಾಪುರದ ನಿವಾಸಿಯೊಬ್ಬರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry