ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಳುಜಾಳಾದ ಅಸ್ಪಷ್ಟ ಮಸೂದೆ’

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗದೇ ಸದ್ಯ ಮುಸ್ಲಿಂ ಮಹಿಳೆಯರ ಪಾಲಿಗೆ ತ್ರಿಶಂಕು ಸ್ವರ್ಗವಾಗಿರುವ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್‌ ನಿಷೇಧ ಮಸೂದೆ)ಯಲ್ಲಿ ಇರುವ ಅಂಶಗಳೇನು? 1985ರ ಶಾಬಾನು ಪ್ರಕರಣದಿಂದ 2017ರ ಶಹಬಾನೋ ಪ್ರಕರಣದವರೆಗೆ ಸುಪ್ರೀಂಕೋರ್ಟ್‌ನಲ್ಲಿ ಸುದೀರ್ಘ ಹೋರಾಟ ನಡೆಸುತ್ತ ಬಂದಿರುವ ಮುಸ್ಲಿಂ ಮಹಿಳೆಯರ ರಕ್ಷಣೆಗೆಂದೇ ರೂಪಿತಗೊಂಡಿರುವ ಈ ಮಸೂದೆ ನಿಜವಾಗಿಯೂ ಅವರ ಪರವಾಗಿ ಇದೆಯೇ? ಇದ್ದರೆ ಮಸೂದೆಯ ವಿರುದ್ಧ ಅಪಸ್ವರವೇಕೆ? ಮಸೂದೆ ಏನು ಹೇಳುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್‌ ಉತ್ತರಿಸಿದ್ದಾರೆ.

* ತ್ರಿವಳಿ ತಲಾಖ್‌ ಬಗ್ಗೆ ನಿಮ್ಮ ಅನಿಸಿಕೆ...?

ಮಹಿಳೆಯರನ್ನು ನಿಂತಕಾಲಲ್ಲೇ ಮನೆಯಿಂದ ಹೊರಗಟ್ಟುವ ಈ ಪದ್ಧತಿ ಅತ್ಯಂತ ಕ್ರೂರವಾದದ್ದು.

* ಹಾಗಿದ್ದರೆ ಈಗ ರೂಪುಗೊಂಡಿರುವ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) (ತ್ರಿವಳಿ ತಲಾಖ್‌ ನಿಷೇಧ) ಮಸೂದೆ–2017 ಪರವಾಗಿ ನೀವಿದ್ದೀರಿ ಎಂದಾಯಿತು?

ಮಸೂದೆ ಹೇಗಿರಬೇಕೋ ಹಾಗಿದ್ದರೆ ನಾನು ತುಂಬು ಮನಸ್ಸಿನಿಂದಸ್ವಾಗತಿಸುತ್ತಿದ್ದೆ. ಆದರೆ ಕೇವಲ ಮೂರು ಅಧ್ಯಾಯ ಹಾಗೂ ಏಳು ಕಲಮುಗಳನ್ನು ಹೊಂದಿರುವ ಈ ಮಸೂದೆಯಲ್ಲಿ ಬುಡದಿಂದ ತುದಿಯವರೆಗೂ ಗೊಂದಲವಿದೆಯೇ ವಿನಾ ಪರಿಹಾರವಿಲ್ಲ. ತರಾತುರಿಯಲ್ಲಿ ರೂಪಿಸಿರುವ ಈ ಮಸೂದೆ ತುಂಬಾ ಜಾಳುಜಾಳಾಗಿದೆ.

* ಲಕ್ಷಾಂತರ ಮುಸ್ಲಿಂ ಮಹಿಳೆಯರು ಮಸೂದೆಯನ್ನು ಶ್ಲಾಘಿಸುತ್ತಿರುವಾಗ ನಿಮ್ಮ ವಿರೋಧವೇಕೆ?

ಲೋಪಗಳು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲವಲ್ಲ! ಇದು ಮಹಿಳೆಯರ ಪರವಾಗಿ ಇದೆ ಎನ್ನುವುದೇ ವಿಜೃಂಭಿಸುತ್ತಿದೆ.

* ಮಸೂದೆಯಲ್ಲಿರುವ ಗೊಂದಲಗಳೇನು?

ಯಾವುದೇ ಶಿಕ್ಷೆ ನೀಡುವ ಮೊದಲು ಆ ಕೃತ್ಯ ಅಪರಾಧ ಎನಿಸಿಕೊಳ್ಳಬೇಕಾಗುತ್ತದೆ. ಆದರೆ, ತ್ರಿವಳಿ ತಲಾಖ್‌ ಅಪರಾಧ ಎಂದು ಮಸೂದೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಾಗಿ, ನೇರವಾಗಿ ಶಿಕ್ಷೆಯ ಪ್ರಮಾಣ ವಿವರಿಸಲಾಗಿದೆ. ಇದರರ್ಥ ಅಪರಾಧ ಮಾಡದೆಯೇ ಗಂಡಸು ಶಿಕ್ಷೆ ಅನುಭವಿಸಬೇಕು ಎಂದಾಗುತ್ತದೆ. ಇದನ್ನೇ ಅಪರಾಧಿ ಎನಿಸಿಕೊಂಡವ ಪ್ರಶ್ನೆ ಮಾಡಿ ಪಾರಾಗಲು ಸಾಧ್ಯವಿದೆಯಲ್ಲವೇ?

ಅದು ಹೋಗಲಿ ಎಂದರೆ, ಗಂಡ ಜೈಲಿಗೆ ಹೋದ ಮೇಲೆ ಹೆಂಡತಿಯ ಸ್ಥಾನಮಾನ ಏನಾಗುತ್ತದೆ ಎಂಬ ಬಗ್ಗೆ ಇದರಲ್ಲಿ ಉಲ್ಲೇಖವಿಲ್ಲ. ತ್ರಿವಳಿ ತಲಾಖ್‌ ಅನ್ನು ವಿಚ್ಛೇದನ ಎಂದುಕೊಳ್ಳಬೇಕೇ ಅಥವಾ ಗಂಡನನ್ನು ಜೈಲಿಗೆ ಕಳುಹಿಸಿ ತಕ್ಕ ಪಾಠ ಕಲಿಸಿದೆ ಎಂದು ವಿವಾಹವನ್ನು ಸಿಂಧುವಾಗಿ ಇಟ್ಟುಕೊಳ್ಳಬೇಕೇ? ಈ ಬಗ್ಗೆ ಮಸೂದೆ ಮೌನವಾಗಿದೆ. ತ್ರಿವಳಿ ತಲಾಖ್‌ ಅನ್ನು ವಿಚ್ಛೇದನ ಎಂದುಕೊಂಡು ಮಹಿಳೆ ಪುನಃ ಮದುವೆಯಾದರೆ, ಹೊಸ ಕಾನೂನಿನ ಅಸ್ಪಷ್ಟತೆಯ ಪ್ರಯೋಜನ ಪಡೆದು ಹೆಂಡತಿ ವಿರುದ್ಧ ಐಪಿಸಿ ಅಡಿ ದ್ವಿಪತಿತ್ವದ ಕೇಸು ದಾಖಲಿಸಬಹುದಾಗಿದೆ!

ವಿಚ್ಛೇದನ ಕೊಡುವ ಗಂಡ ಹೆಂಡತಿ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಜೀವನಾಂಶ ಕೊಡಬೇಕು ಎಂದು ಮಸೂದೆಯ 5ನೇ ಕಲಮಿನಲ್ಲಿ ವಿವರಿಸ
ಲಾಗಿದೆ. ಇದು ಒಳ್ಳೆಯದೇ. ಆದರೆ, ಅವನೇ ಜೈಲಿಗೆ ಹೋದರೆ ಜೀವನಾಂಶ ಹೇಗೆ, ಯಾವಾಗ ನೀಡಬೇಕು ಎಂಬ ಬಗ್ಗೆ ವಿವರಣೆ ಇಲ್ಲ. ವಿಚ್ಛೇದನದ ನಂತರ ತಂದೆ ಅಥವಾ ಸಹೋದರರಿಂದ ಜೀವನಾಂಶ ಪಡೆಯಲು ಮುಸ್ಲಿಂ ಮಹಿಳೆಯರ ರಕ್ಷಣೆ ಕಾಯ್ದೆ 1986ರ ಅಡಿ ಮಹಿಳೆ ಅರ್ಹಳು. ಅವರ‍್ಯಾರೂ ಇಲ್ಲದಿದ್ದರೆ ‘ವಕ್ಫ್ ಬೋರ್ಡ್‌’ ಜೀವನಾಂಶ ಕೊಡುತ್ತದೆ. ಆದರೆ, ಈ ಹೊಸ ಕಾನೂನು ಬಂದ ಮೇಲೆ ಹಳೆಯ ಕಾನೂನು ಅಸ್ತಿತ್ವದಲ್ಲಿ ಇರುತ್ತದೆಯೇ ಇಲ್ಲವೇ. ಮಹಿಳೆ ವಕ್ಫ್ ಬೋರ್ಡ್‌ ಸಹಾಯ ಪಡೆಯಬಹುದೇ. ಅಥವಾ ಜೈಲಿಗೆ ಹೋದ ಗಂಡನನ್ನೇ ನೆಚ್ಚಿಕೊಂಡಿರಬೇಕೇ. ಇದಕ್ಕೂ ಮಸೂದೆಯಲ್ಲಿ ಉತ್ತರವಿಲ್ಲ. ಮಸೂದೆಯ 7ನೇ ಕಲಮಿನ ಅನ್ವಯ ಮಕ್ಕಳ ಜವಾಬ್ದಾರಿಯನ್ನು ತಾನೇ ಹೊತ್ತು, ಅತ್ತ ಜೀವನಾಂಶವೂ ಇಲ್ಲದೇ, ಇತ್ತ ವೈವಾಹಿಕ ಜೀವನದ ಸ್ಥಾನಮಾನದ ಅರಿವೂ ಇಲ್ಲದೇ ಗಂಡನನ್ನು ಜೈಲಿಗೆ ಕಳುಹಿಸಿದ್ದಕ್ಕೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

* ತ್ರಿವಳಿ ತಲಾಖ್‌ ನೀಡಿದ ಗಂಡನೊಬ್ಬ ಶಿಕ್ಷೆಗೆ ಹೆದರಿ ಹೆಂಡತಿಯನ್ನು ವಾಪಸ್‌ ಕರೆಸಿಕೊಂಡ ಘಟನೆ ಮೊನ್ನೆ ನಡೆದಿದೆ. ಇದೊಂದು ಒಳ್ಳೆಯ ಬೆಳವಣಿಗೆಯಲ್ಲವೇ?

ಕಾನೂನನ್ನು ಹೊರಗಿಟ್ಟು ನೋಡುವುದಾದರೆ ನಿಜಕ್ಕೂ ಒಳ್ಳೆಯದೇ. ಆದರೆ ನಾವು ನಿಂತಿರುವುದು ಕಾನೂನಿನ ಆಧಾರದ ಮೇಲಲ್ಲವೇ. ಈಗಿರುವ ಕಾನೂನಿನ ಪ್ರಕಾರ, ತ್ರಿವಳಿ ತಲಾಖ್‌ ನೀಡಿದ ಬಳಿಕ ಆಕೆ ಹೆಂಡತಿಯಾಗಿ ಉಳಿಯುವುದಿಲ್ಲ. ಈ ರೀತಿ ವಿಚ್ಛೇದನ ನೀಡಿದಾಗ, ಪುನಃ ಗಂಡ- ಹೆಂಡತಿ ಎನಿಸಿಕೊಳ್ಳಬೇಕಿದ್ದರೆ ಹೆಂಡತಿಯಾದಾಕೆ ಪರ ಪುರುಷನೊಂದಿಗೆ ಇದ್ದು ಆತನನ್ನು ಬಿಟ್ಟು ಮೊದಲ ಗಂಡನ ಜೊತೆ ಬರಬೇಕು ಎನ್ನುತ್ತದೆ ಮುಸ್ಲಿಂ ಕಾನೂನು. ಇದು ಅತ್ಯಂತ ಕೆಟ್ಟ ಪದ್ಧತಿಯಾಗಿದ್ದರೂ ಕಾನೂನು ಇರುವುದು ಹಾಗೆ. ಹಾಗಿದ್ದ ಮೇಲೆ ಈ ಪ್ರಕರಣದಲ್ಲಿ ಹೆಂಡತಿಯ ಗತಿಯೇನು. ಆಕೆಯನ್ನು ಗಂಡನ ಮನೆಯವರು ಕಾನೂನುಬದ್ಧವಾಗಿ ಒಪ್ಪುತ್ತಾರೆಯೇ. ಮುಂದೆ ನಡೆಯುವುದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲವಲ್ಲ!

* ನಿಮ್ಮ ಪ್ರಕಾರ ಕೇಂದ್ರ ಎಡವಿದ್ದೆಲ್ಲಿ?

ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟ ನಂತರ ಕರಡು ರೂಪಿಸುವ ಸಂಬಂಧ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಬೇಕಿತ್ತು. ಕಾನೂನು ಪಂಡಿತರನ್ನು, ವಿವಿಧ ಕ್ಷೇತ್ರಗಳ ತಜ್ಞರನ್ನು ಕರೆದು ಕಾನೂನಿನ ಸಾಧಕ ಬಾಧಕಗಳನ್ನು ಪರಿಶೀಲಿಸಬೇಕಿತ್ತು. ಹಾಗೆ ಮಾಡದೇ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿರುವುದರಿಂದ ಇಂಥ ಲೋಪವಾಗಿದೆ. ಇತ್ತ ಮುಸ್ಲಿಂ ಸಂಘಟನೆಗಳಾಗಲೀ, ಮುಸ್ಲಿಂ ನಾಯಕರು, ಪಂಡಿತರು, ಕಾನೂನು ತಜ್ಞರಾಗಲೀ ತಮಗೊಂದು ಇಂಥ ಕಾನೂನು ಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ. ಒಟ್ಟಿನಲ್ಲಿ ಎಲ್ಲವೂ ರಾಜಕೀಯ ಲೇಪಿತವಾಗಿದೆ. ಮಹಿಳೆ
ಯರ ನಿಜವಾದ ರಕ್ಷಣೆ ಮಾಡುವ ಮನಸ್ಸು ಯಾರಿಗೂ ಇದ್ದಂತೆ ಕಾಣಿಸುತ್ತಿಲ್ಲ.

* ಸ್ಪಷ್ಟ ಕಾನೂನೊಂದು ರೂಪುಗೊಂಡರೆ ಅದರಲ್ಲಿ ತ್ರಿವಳಿ ತಲಾಖ್‌ ನೀಡುವ ಗಂಡಸಿಗೆ ಶಿಕ್ಷೆ ಆಗಬೇಕು ಎನ್ನುವ ಅಂಶ ಇರಬೇಕು ಎನ್ನುತ್ತೀರಾ?

ಇದರ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್‌ ನಿಷೇಧವಿದೆ. ಕೆಲವೆಡೆ ಶಿಕ್ಷೆಯೂ ಇದೆ. ಅವುಗಳನ್ನೆಲ್ಲಾ ಪರಿಶೀಲಿಸಿ ನಮ್ಮ ನೆಲಕ್ಕೆ ಯಾವುದು ಸೂಕ್ತವೋ ಅಂಥ ಕಾನೂನು ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT