ಶನಿವಾರ, ಜೂಲೈ 4, 2020
21 °C

ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ರೈತರು ಬೇಸಿಗೆ ಬೆಳೆ ತೆಗೆಯಲು ನಾಲೆಗಳಿಗೆ ಶೀಘ್ರ ನೀರು ಹರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ರೈತ ದಳ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧ ಎದುರು ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ನೀರಾವರಿ ನಿಗಮದ ವಿರುದ್ಧ ಘೋಷಣೆ ಕೂಗಿದರು. ‘ಕಳೆದ ಬಾರಿ ಸಾಕಷ್ಟು ಮಳೆ ಸುರಿದು ಕೆಆರ್‌ಎಸ್‌ ಜಲಾಶಯಕ್ಕೆ ನೀರು ಹರಿದು ಬಂತು. ಆದರೆ ರಾಜ್ಯ ಸರ್ಕಾರ ಲಭ್ಯ ನೀರನ್ನು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರ ಹೊಟ್ಟೆಯ ಮೇಲೆ ಹೊಡೆದಿದೆ. ನೀರು ಇದ್ದರೂ ಕೊಡದೇ ಕೃತಕ ಬರ ಸೃಷ್ಟಿಸಿ ಮೋಸ ಮಾಡಿದೆ.

ಇದರಿಂದ ಸಹಸ್ರಾರು ರೈತರು ನಷ್ಟ ಅನುಭವಿಸಿದ್ದಾರೆ. ಜೀವನ ನಿರ್ವಹಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಬೆಳೆ ನಷ್ಟ ಅನುಭವಿಸಿರುವ ಎಲ್ಲ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌ ಒತ್ತಾಯಿಸಿದರು.

‘ಬೇಸಿಗೆ ಹಂಗಾಮು ಬೆಳೆ ತೆಗೆಯಲು ಇದು ಸೂಕ್ತ ಸಮಯ. ಕೆಆರ್‌ಎಸ್‌ ಜಲಾಶಯದಲ್ಲಿ ಒಂದು ಬೆಳೆಗೆ ಆಗುವಷ್ಟು ನೀರು ಲಭ್ಯ ಇದೆ. ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳಿಗೆ ನೀರು ಹರಿಸುವ ಮೂಲಕ ಒಟ್ಲು ಪಾತಿ ಸಿದ್ಧ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು.

ನಂತರ ಬೆಳೆ ತೆಗೆಯಲು ನೀರು ಹರಿಸುವ ಮತ್ತು ನಿಲ್ಲಿಸುವ ದಿನಾಂಕವನ್ನು ಕ್ರಮ ಬದ್ಧವಾಗಿ ರೈತರಿಗೆ ತಿಳಿಸಬೇಕು. ನೀರು ವ್ಯರ್ಥವಾಗದಂತೆ ವೈಜ್ಞಾನಿಕ ವಿಧಾನ ಬಳಸಿ ಬೆಳೆಗೆ ನೀರು ಕೊಡಬೇಕು. ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ವಿತರಿಸಲು ಕ್ರಮ ವಹಿಸಬೇಕು. ವಿಳಂಬ ಧೋರಣೆ ಅನುಸರಿಸಿದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ’ ಎಂದು ಜೆಡಿಎಸ್‌ ರೈತದಳ ಘಟಕದ ಅಧ್ಯಕ್ಷ ಡಿ.ಎಂ.ರವಿ ಎಚ್ಚರಿಸಿದರು.

ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ. ಸ್ವಾಮಿಗೌಡ ಮಾತನಾಡಿದರು. ರವಿಕುಮಾರ್‌, ನಿಂಗೇಗೌಡ, ಲೋಕೇಶ್‌, ಚಂದ್ರಶೇಖರ್‌,ಕೆ.ಶೆಟ್ಟಹಳ್ಳಿ ಸುರೇಶ್‌, ಮರಳಾಗಾಲ ಪ್ರಭಾಕರ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಎ.ಆರ್‌. ಶಿವಶಂಕರ್‌, ನಿಜಲಿಂಗು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.