ಸೋಮವಾರ, ಆಗಸ್ಟ್ 3, 2020
25 °C

ಜೀವನದ ಅವಿಭಾಜ್ಯ ಅಂಗವಾದ ವಿಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವನದ ಅವಿಭಾಜ್ಯ ಅಂಗವಾದ ವಿಜ್ಞಾನ

ದಾವಣಗೆರೆ: ವೈಜ್ಞಾನಿಕ ಮನೋಭಾವ ಮನುಷ್ಯನಲ್ಲಿರುವ ಸಂಕುಚಿತ ಮನಸ್ಥಿತಿಯನ್ನು ದೂರ ಮಾಡುತ್ತದೆ. ವಿಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಜಲಗಿ ಹೇಳಿದರು.

ನಗರದ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ‘ತರಂಗ’ ರಾಜ್ಯಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ರಾಜ್ಯ ಬಾಲ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈಜ್ಞಾನಿಕ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಲೇ ಇವೆ. ಹೊಸ ತಂತ್ರಜ್ಞಾನ ಗಳು ರೂಪುಗೊಳ್ಳುತ್ತಿದೆ. ಆರೋಗ್ಯ, ಶಿಕ್ಷಣ, ಕೃಷಿ ಹೀಗೆ ಎಲ್ಲ ಕ್ಷೇತ್ರಗಳೂ ವಿಜ್ಞಾನದ ಭಾಗವೇ ಆಗಿದೆ ಎಂದರು.

ಮೂಢನಂಬಿಕೆಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಶ್ಲೇಷಿಸಿ ಸರಿ ತಪ್ಪುಗಳನ್ನು ತಿಳಿ ಹೇಳಬಹುದು. ಆಹಾರ ಪದ್ಧತಿ, ಶಿಕ್ಷಣ ವ್ಯವಸ್ಥೆ, ಹೀಗೆ ಭವಿಷ್ಯಕ್ಕೆ ಪೂರಕವಾದ ಸಂಶೋಧನೆಗಳಿಗೆ ವಿಜ್ಞಾನ ಅತ್ಯಗತ್ಯ ಎಂದರು.

ಬಿಎಸ್‌ಸಿ ಪ್ರಥಮ ದರ್ಜೆ ಕಾಲೇಜು ಅಧ್ಯಕ್ಷ ಬಿ.ಸಿ.ಶಿವಕುಮಾರ್ ಮಾತನಾಡಿ, ‘ವಿಜ್ಞಾನದಿಂದ ಜನರ ಜೀವನಮಟ್ಟ ಸುಧಾರಿಸಿದೆ. ಮೂಲ ವಿಜ್ಞಾನದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕು. ಭೂಮಿ, ಪರಿಸರ ಉಳಿವಿಗೂ ಮೂಲ ವಿಜ್ಞಾನ ಅವಶ್ಯ. ಶಿಕ್ಷಕರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ವಿಷಯ ಪರಿವೀಕ್ಷಕ ಎಂ.ಮಂಜುನಾಥ ಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳು ಮೂಡಬೇಕು. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿಜ್ಞಾನ ಕುರಿತ ಆಸಕ್ತಿಯನ್ನು ಗುರುತಿಸಿ ಪೂರಕ ವಾತಾವರಣ ಕಲ್ಪಿಸಬೇಕು’ ಎಂದರು.

ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಬಿ.ರಂಗಸ್ವಾಮಿ ಮಾತನಾಡಿ, ವೈಜ್ಞಾನಿಕ ಕ್ಷೇತ್ರದ ಆವಿಷ್ಕಾರಗಳಿಂದ ರಾಷ್ಟ್ರ ಪ್ರಗತಿಯತ್ತ ಸಾಗುತ್ತಿದೆ. ಬದಲಾವಣೆಗೆ ಎಲ್ಲರೂ ಕೈಜೋಡಿಬೇಕು ಎಂದರು.

ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ 60 ಮಾದರಿಗಳು ಪ್ರದರ್ಶನಗೊಂಡವು. ಈ ಪೈಕಿ 8 ಮಾದರಿಗಳು ಪ್ರಶಸ್ತಿಗೆ ಆಯ್ಕೆಯಾದವು. 10 ವಿದ್ಯಾರ್ಥಿಗಳಿಗೆ ಬಾಲವಿಜ್ಞಾನಿ ಪ್ರಶಸ್ತಿ ನೀಡಲಾಯಿತು. ಪ್ರಥಮ ಬಹುಮಾನ ₹10,000, ದ್ವಿತೀಯ ಬಹುಮಾನ ₹5000, ತೃತೀಯ ಬಹುಮಾನ ₹ 3001 ಹಾಗೂ ಸಮಾಧಾನಕರ ಬಹುಮಾನವಾಗಿ ₹500 ಚೆಕ್‌ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಥಣಿ ವೀರಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ವಿಜಯಕುಮಾರ್, ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಂಕರ್ ಹಲಗತ್ತಿ, ತರಂಗ ವಿಜ್ಞಾನ ಮಾದರಿ ಸ್ಪರ್ಧೆ ರಾಜ್ಯ ಸಂಯೋಜಕ ಡಾ.ಲಿಂಗರಾಜ ರಾಮಾಪುರ, ಅಕಾಡೆಮಿ ಜಿಲ್ಲಾ ಸಮಿತಿ ಸದಸ್ಯ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಅವರೂ ಇದ್ದರು.

ಗಮನ ಸೆಳೆದ ಮಾದರಿಗಳು

ಸೌರಶಕ್ತಿ ಬಳಕೆ, ಭೂಕಂಪನದ ಮುನ್ನ ಮಾಹಿತಿ ನೀಡುವ ಸಾಧನ, ತ್ಯಾಜ್ಯ ಮರುಬಳಕೆ, ಜೈವಿಕ ಇಂಧನ ತಯಾರಿಕೆ, ತ್ಯಾಜ್ಯ ಸಂಸ್ಕರಣೆ, ಕೃಷಿ ಉಪಯೋಗಿ ತಂತ್ರಜ್ಞಾನ, ಮಳೆ ನೀರು ಸಂಗ್ರಹ ವಿಧಾನ, ಅಂತರ್ಜಲ ಮರುಪೂರಣ ಹಾಗೂ ಬಳಕೆ, ಸ್ವಯಂಚಾಲಿತ ರಸ್ತೆ ದೀಪ ವ್ಯವಸ್ಥೆ ಹೀಗೆ ಹತ್ತಾರು ವಿಜ್ಞಾನ ಮಾದರಿಗಳು ಗಮನ ಸೆಳೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.