ಸೋಮವಾರ, ಜೂಲೈ 6, 2020
21 °C

ಬೊಂಬಿಲ್‌ ವಾಡಿಯಲ್ಲಿ ಅಪ್ಪಟ ಹಾಸ್ಯ

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

ಬೊಂಬಿಲ್‌ ವಾಡಿಯಲ್ಲಿ ಅಪ್ಪಟ ಹಾಸ್ಯ

1942ರಲ್ಲಿ ನಮ್ಮ ದೇಶದ ಮತ್ತು ಜಾಗತಿಕ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಇತಿಹಾಸದ ಪುಟಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಆ ಕಾಲದ ಸನ್ನಿವೇಶಗಳನ್ನು ಹಾಸ್ಯಮಯವಾಗಿ ರಂಗದ ಮೇಲೆ ತಂದರೆ ಹೇಗಿರುತ್ತದೆ? ಅಂತಹ ಪ್ರಯತ್ನವನ್ನು ಸಮಷ್ಟಿ ರಂಗತಂಡ ಮಾಡುತ್ತಿದೆ. ಈ ತಂಡ ನಿರೂಪಿಸುತ್ತಿರುವ ‘ಮುಕ್ಕಾಮ್‌ಪೋಸ್ಟ್‌ ಬೊಂಬಿಲ್‌ ವಾಡಿ’ ರಂಗರೂಪಕ ‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮದಲ್ಲಿ ಪ್ರದರ್ಶನಗೊಳ್ಳುತ್ತಿದೆ.

‘ದೇಶದಲ್ಲಿ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಮತ್ತು ಜಗತ್ತಿನಲ್ಲಿ ಎರಡನೆ ಮಹಾಯುದ್ಧದ ಪರ್ವಕಾಲ. ಅಂದಿನ ಕಾಲದ ರಂಗತಂಡವೊಂದು ನಾಟಕದ ತಾಲೀಮು ಮಾಡುತ್ತಿರುತ್ತದೆ. ಆ ತಂಡದ ಮೇಲೆ ಸ್ವಾತಂತ್ರ್ಯ ಚಳವಳಿ ಪ್ರಭಾವ ಬೀರುತ್ತದೆ. ಅದರಿಂದಾಗಿ ರಂಗಕಲಾವಿದರು ಬ್ರಿಟಿಷ್‌ ಪೊಲೀಸ್‌ ಚೌಕಿ ಮೇಲೆ ಧ್ವಜಾರೋಹಣ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿ ಅವರು ಪಡುವ ಪರಿಪಾಟಲು ಹಾಸ್ಯ ರೂಪದಲ್ಲಿ ನಿರೂಪಿತವಾಗಿದೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪೂಜಾರಿ.

‘ಹಿಟ್ಲರ್‌ ಮತ್ತು ಅವನ ಆಪ್ತ ಗೊಬೆಲ್‌ನ ಹಾಸ್ಯಮಯ ಸಂಭಾಷಣೆಗಳು ಉತ್ತರ ಕರ್ನಾಟಕದ ಭಾಷೆಯಲ್ಲಿ ಈ ನಾಟಕದಲ್ಲಿವೆ. ಅಂದಿನ ಕಾಲಕ್ಕೆ ಕ್ರಿಕೆಟ್‌ ಬಗ್ಗೆ ಜನರ ಅಭಿಪ್ರಾಯಗಳು, ವ್ಯಕ್ತಿಯೊಬ್ಬ ಹೆಸರು ಬದಲಾಯಿಸಲು ಪಡುವ ಬವಣೆ ಇದರಲ್ಲಿ ನಗೆಯಾಗಿ ಮೂಡಿದೆ. ಊಹಿಸಲಾಗದಷ್ಟು ವ್ಯಂಗ್ಯದ ಸಂಭಾಷಣೆಗಳು ಇವೆ’ ಎಂಬುದು ಸಮಷ್ಟಿ ಸಂಚಾಲಕ ಗಂಗಾಧರ ಕರಿಕೆರೆ ಅವರ ಮಾತು.

2000ರಲ್ಲಿ ಕಟ್ಟಿದ ಸಮಷ್ಟಿ ತಂಡದಲ್ಲಿ ಈಗ ನೂರಕ್ಕೂ ಹೆಚ್ಚು ಹವ್ಯಾಸಿ ರಂಗಕಲಾವಿದರಿದ್ದಾರೆ. ಜನಖ್ಯಾತಿ ಪಡೆದ ನಾಟಕಪಠ್ಯಗಳನ್ನು ಬಿಟ್ಟು, ಅಪರೂಪದ ಕಥಾಹಂದರದ ಅಪ್ಪಟ ಮನರಂಜನಾತ್ಮಕ ರೂಪಕಗಳನ್ನು ಪ್ರದರ್ಶನಕ್ಕೆ ಅಣಿ ಮಾಡುವುದು ಈ ಹವ್ಯಾಸಿ ತಂಡದ ಹವ್ಯಾಸವಾಗಿದೆ. ‘ಸಂದೇಶಕ್ಕಿಂದ ಹಾಸ್ಯಕ್ಕೆ ನಮ್ಮ ಆದ್ಯತೆ’ ಎಂಬುದು ನಿರ್ದೇಶಕರ ನುಡಿ.

‘ಮೀಸ್‌ ಸುಧಾರಮೆ’, ‘ನೀರು ಕುಡಿಸಿದ ನೀರೆಯರು’ ನಾಟಕಗಳಿಂದ ಪ್ರೇಕ್ಷಕರನ್ನು ನಗಿಸಿ ಹಗುರಾಗಿಸಿದ ಈ ತಂಡ ಈಗ ಬ್ರಿಟಿಷ್‌ ಕಾಲದ ಪರಿಸ್ಥಿತಿ, ಅಂದಿನ ಅಧಿಕಾರಿಗಳ ಮನಸ್ಥಿತಿ, ಚಳವಳಿಗಾರರ ದುಸ್ಥಿತಿಯನ್ನು ಎರಡು ಗಂಟೆಗಳ ಹಾಸ್ಯದ ಮೂಲಕ ಪ್ರಸ್ತುತ ಪಡಿಸಲಿದೆ.

ಪರೇಶ ಮೊಕಾಶಿ ಮರಾಠಿಯಲ್ಲಿ ರಚಿಸಿದ್ದ ಈ ನಾಟಕವನ್ನು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಕೆ.ಆರ್‌.ಓಂಕಾರ್‌ ಕನ್ನಡಿಕರಣ ಮಾಡಿದ್ದಾರೆ. ಇದನ್ನು ನಿನಾಸಂ ತಂಡ ಏಳು ವರ್ಷಗಳ ಹಿಂದೆ ವರ್ಷದ ತಿರುಗಾಟದ ನಾಟಕವಾಗಿ ಪ್ರದರ್ಶಿಸಿತ್ತು.

**

ನಾಟಕದ ಕುರಿತು

* ನಾಟಕ: ಮುಕ್ಕಾಮ್‌ಪೋಸ್ಟ್‌ ಬೊಂಬಿಲ್‌ ವಾಡಿ

* ತಂಡ: ಸಮಷ್ಟಿ

* ರಚನೆ: ಪರೇಶ ಮೊಕಾಶಿ (ಮೂಲ–ಮರಾಠಿ) ಕನ್ನಡಕ್ಕೆ–ಕೆ.ಆರ್.ಓಂಕಾರ್‌

* ನಿರ್ದೇಶನ: ರವೀಂದ್ರ ಪೂಜಾರಿ

* ಪ್ರದರ್ಶನ ದಿನ: ಜನವರಿ 8

* ಸಮಯ: ಸಂಜೆ 7

* ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ

* ಟಿಕೆಟ್‌: www.bookmyshow.com (₹ 70)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.