ಮಂಗಳವಾರ, ಆಗಸ್ಟ್ 11, 2020
27 °C
ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿಯಿಂದ ಇಂದಿನಿಂದ ಸರಣಿ ಸಭೆ

ಮಾಧ್ಯಮ ಬಳಕೆ: ಕಾಂಗ್ರೆಸ್‌ ನಾಯಕರಿಗೆ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಸಿಕೊಳ್ಳುವ ಕುರಿತು ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಪಾಠ ಮಾಡಲು ಎಐಸಿಸಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಸೋಮವಾರ ನಗರಕ್ಕೆ ಬರಲಿದ್ದಾರೆ.

ಮೂರು ದಿನ ನಗರದಲ್ಲಿ ಠಿಕಾಣಿ ಹೂಡಲಿರುವ ಪ್ರಿಯಾಂಕ, ಸರ್ಕಾರ ಸಾಧನೆಗಳು ಮತ್ತು ಪಕ್ಷದ ಚಟುವಟಿಕೆಯನ್ನು ಮತದಾರರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ತುರ್ತಾಗಿ ರೂಪಿಸಿಬೇಕಾದ ಕಾರ್ಯತಂತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮಾಧ್ಯಮ ವಿಭಾಗ ಮತ್ತು ಸಾಮಾಜಿಕ ಜಾಲ ತಾಣಗಳನ್ನು ನಿರ್ವಹಿಸುವ ತಂಡದ ಜೊತೆ ಪ್ರಿಯಾಂಕ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಪಕ್ಷದ ನಾಯಕರು ಮಾಧ್ಯಮಗಳನ್ನು ಬಳಸಿಕೊಂಡ ರೀತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಸಚಿವರು, ಶಾಸಕರು ಹಾಗೂ ಪಕ್ಷದ ವಿವಿಧ ಘಟಕಗಳ ಮುಂಚೂಣಿ ನಾಯಕರ ಜೊತೆಯೂ ಅವರು ಚರ್ಚೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿದರೆ ಒಂದಿಬ್ಬರು ಸಚಿವರು ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಇಲಾಖೆಗಳ ಸಾಧನೆಗಳ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಕೂಡಾ ಕೆಲವು ಸಚಿವರು ಮುಂದಾಗಿಲ್ಲ. ಅಷ್ಟೇ ಅಲ್ಲ, ಅನೇಕ ಶಾಸಕರು ಬಾಯಿ ಬಿಡುತ್ತಿಲ್ಲ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಪ್ರಿಯಾಂಕ  ಸಲಹೆಗಳನ್ನು ನೀಡಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ದೆಹಲಿ ಸಭೆಯಲ್ಲಿ ರಾಹುಲ್‌ ರಾಜ್ಯ ಪ್ರವಾಸ ದಿನ ಅಂತಿಮ:

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇದೇ 13ರಂದು ದೆಹಲಿಯಲ್ಲಿ ರಾಜ್ಯದ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಲಿದೆ. ಚುನಾವಣೆ ಗಮನದಲ್ಲಿಟ್ಟು ಪಕ್ಷ ಈವರೆಗೆ ಆಯೋಜಿಸಿರುವ ಮತ್ತು ಮುಂದೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾಹುಲ್‌ ಅವರ ರಾಜ್ಯ ಪ್ರವಾಸದ ದಿನ ಕೂಡಾ ಇದೇ ಸಂದರ್ಭದಲ್ಲಿ ಅಂತಿಮಗೊಳ್ಳಲಿದೆ ಎಂದೂ ಮೂಲಗಳು ತಿಳಿಸಿವೆ.

ರಾಹುಲ್‌ ಉಪಸ್ಥಿತಿಯಲ್ಲಿ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ, ಬೆಂಗಳೂರಿನಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ರಾಹುಲ್‌ ರಾಜ್ಯ ಪ್ರವಾಸಕ್ಕೆ ಇದೇ 27ರಿಂದ ಮೂರು ದಿನವನ್ನು ಸಂಭವನೀಯ ದಿನವಾಗಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.