ಆಧಾರ್ ಮಾಹಿತಿ ಬಿಕರಿ ವರದಿ; ಪತ್ರಕರ್ತೆ ವಿರುದ್ಧ ಎಫ್‌ಐಆರ್

7

ಆಧಾರ್ ಮಾಹಿತಿ ಬಿಕರಿ ವರದಿ; ಪತ್ರಕರ್ತೆ ವಿರುದ್ಧ ಎಫ್‌ಐಆರ್

Published:
Updated:
ಆಧಾರ್ ಮಾಹಿತಿ ಬಿಕರಿ ವರದಿ; ಪತ್ರಕರ್ತೆ ವಿರುದ್ಧ ಎಫ್‌ಐಆರ್

ನವದೆಹಲಿ: ದೇಶದ ನೂರು ಕೋಟಿ ಜನರ ಆಧಾರ್ ಮಾಹಿತಿಯನ್ನು ಕೆಲವರು ₹ 500ಕ್ಕೆ ಬಿಕರಿ ಮಾಡುತ್ತಿದ್ದಾರೆ ಎಂದು ತನಿಖಾ ವರದಿ ಪ್ರಕಟಿ ಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಮತ್ತು ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ವಿರುದ್ಧ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ದೆಹಲಿಯ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ.

‘ಪೇಟಿಎಂ ಮೂಲಕ ₹ 500 ಪಾವತಿಸಿದರೆ, ಅನಾಮಿಕ ವ್ಯಕ್ತಿಗಳು ವಾಟ್ಸ್‌ಆ್ಯಪ್ ಮೂಲಕ ಆಧಾರ್ ಮಾಹಿತಿಯನ್ನು ಒದಗಿಸುತ್ತಾರೆ. ಹೀಗೆ ಆಧಾರ್ ಮಾಹಿತಿಯನ್ನು ಖರೀದಿಸಿದ್ದಾಗಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ ವಿವರಿಸ ಲಾಗಿತ್ತು. ಪತ್ರಿಕೆಯ ವರದಿಗಾರ್ತಿ ಅಕ್ರಮವಾಗಿ ಆಧಾರ್ ಮಾಹಿತಿಯನ್ನು ಖರೀದಿಸಿದ್ದಾರೆ’ ಎಂದು ಆಧಾರ ಪ್ರಾಧಿಕಾರ ದೆಹಲಿ ಪೊಲೀಸರ ಸೈಬರ್ ಘಟಕಕ್ಕೆ ಜನವರಿ 5ರಂದು ದೂರು ನೀಡಿದ್ದತ್ತು. ಪತ್ರಿಕೆ, ವರದಿಗಾರ ಮತ್ತು ಆಧಾರ್ ಮಾಹಿತಿ ಮಾರಾಟ ಮಾಡಿದ ವ್ಯಕ್ತಿಗಳ ವಿರುದ್ಧ ಪೊಲೀಸರು ಅಂದೇ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪತ್ರಿಕೆ ಮತ್ತು ವರದಿಗಾರ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರ ವಿರುದ್ಧ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳಿಂದ ಆಕ್ಷೇಪ ಮತ್ತು ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ತನ್ನ ನಡೆಯನ್ನು ಆಧಾರ ಪ್ರಾಧಿಕಾರ ಸಮರ್ಥಿಸಿಕೊಂಡಿದೆ.

‘ಆಧಾರ್ ಮಾಹಿತಿಗೆ ಕನ್ನ ಹಾಕಿದ್ದು ಅಕ್ರಮವಾದ್ದರಿಂದ, ಕೃತ್ಯದ ವಿರುದ್ಧ ತನಿಖೆ ಆರಂಭವಾಗಿದೆ. ತನಿಖೆ ನಡೆದು, ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿ, ನ್ಯಾಯಾಲಯದಲ್ಲಿ ಅದು ಸಾಬೀತಾಗಬೇಕು. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳನ್ನು ಅಲ್ಲಿಯವರೆಗೂ ಅಪರಾಧಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಯುಐಡಿಎಐ ಹೇಳಿದೆ.

‘ಮಾಹಿತಿ ನೀಡಿದವರನ್ನೇ ಗುರಿ ಮಾಡುತ್ತಿದ್ದೇವೆ ಎಂದು ಭಾವಿಸುವುದು ಬೇಡ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ’ ಎಂದೂ ಪ್ರಾಧಿಕಾರ ಹೇಳಿದೆ.

‘ಮಾಹಿತಿದಾರನಿಗೇ ಗುಂಡಿಕ್ಕಿದ ಯುಐಡಿಎಐ’

‘ಮಾಹಿತಿಯನ್ನು ಕಡೆಗಣಿಸಿ, ಮಾಹಿತಿದಾರನಿಗೇ ಗುಂಡಿಕ್ಕುವ ಕೆಲಸವನ್ನು ಯುಐಡಿಎಐ ಮಾಡಿದೆ’ ಎಂದು ಯುಐಡಿಎಐನ ನಡೆಯನ್ನು ಭಾರತೀಯ ಸಂಪಾದಕರ ಕೂಟ ಟೀಕಿಸಿದೆ.

‘ಸಾರ್ವಜನಿಕರ ಹಿತಾಸಕ್ತಿಯಿಂದ ಇದು ಅತ್ಯಂತ ಮಹತ್ವದ ತನಿಖಾ ವರದಿ. ಪತ್ರಕರ್ತೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಬೆದರಿಸುವ ಕೆಲಸ. ಯುಐಡಿಎಐ ಆಂತರಿಕ ತನಿಖೆ ನಡೆಸಬೇಕಿತ್ತು. ಅದರ ಬದಲಿಗೆ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಎಫ್‌ಐಆರ್‌ ಅನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಕೂಟ ಆಗ್ರಹಿಸಿದೆ. ಆಧಾರ ಪ್ರಾಧಿಕಾರ ನಡೆಯನ್ನು ಖಂಡಿಸಿ ಚಂಡಿಗಡ ಪ್ರೆಸ್ ಕ್ಲಬ್ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry