ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡುಪಿ ಪರ್ಬ’ ಕಾರಣ

Last Updated 8 ಜನವರಿ 2018, 6:02 IST
ಅಕ್ಷರ ಗಾತ್ರ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮಲ್ಪೆ ಕಡಲ ಕಿನಾರೆಯನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಆಯೋಜಿಸಿದ್ದ 3 ದಿನಗಳ ‘ಉಡುಪಿ ಪರ್ಬ’ ಹಾಗೂ ‘ಸಾಹಸ ಉತ್ಸವ’ ಸ್ಥಳೀಯರ ಹಾಗೂ ಪ್ರವಾಸಿಗರ ಮನ ಸೂರೆಗೊಂಡಿತು.

ಮಲ್ಪೆ ಅಭಿವೃದ್ಧಿ ಸಮಿತಿ, ನಗರಸಭೆ ಈ ವರೆಗೆ ಬೀಚ್ ಉತ್ಸವವನ್ನು ಆಯೋಜಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಬೆಂಗಳೂರು, ಉಡುಪಿ ನಿರ್ಮಿತಿ ಕೇಂದ್ರ ಒಂದು ವೇದಿಕೆಗೆ ಬಂದು ವಿನೂತನ ಕಾರ್ಯಕ್ರಮಗಳನ್ನು ಮೂಲಕ ಆಯೋಜಿಸಿದ್ದು ವಿಶೇಷವಾಗಿತ್ತು. ಮನರಂಜನೆ, ಸಾಹಸ, ಕ್ರೀಡೆಗಳ ಸಮ್ಮಿಲನದ ಈ ಉತ್ಸವ ವಿಭಿನ್ನ ಎನಿಸಿತು. ಪ್ರವಾಸೋದ್ಯಮದ ಎಲ್ಲ ಸಾಧ್ಯತೆಗಳನ್ನು ತೆರೆದಿಡುವಲ್ಲಿ ಒಂದೊಳ್ಳೆ ಪ್ರಯತ್ನವಾಗಿತ್ತು.

ದೇವಸ್ಥಾನಗಳ ಜಿಲ್ಲೆ ಎಂದೇ ಖ್ಯಾತವಾಗಿರುವ ಉಡುಪಿಯಲ್ಲಿ ಕಡಲ ಕಿನಾರೆ, ಪಶ್ಚಿಮ ಘಟ್ಟದ ತಪ್ಪಲು, ಹಿನ್ನೀರು ಸಹ ಇರುವುದು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ, ಪ್ರಚಾರಪಡಿಸುವ ಹಾಗೂ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನಗಳು ಮಾತ್ರ ನಿರೀಕ್ಷೆಯಂತೆ ನಡೆಯುತ್ತಿಲ್ಲ ಎಂಬ ಆರೋಪ ಇದೆ.

ಈಗಾಗಲೇ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸುವುದು ಹಾಗೂ ಹೊಸ ಪ್ರವಾಸಿಗರನ್ನು ಸೆಳೆಯಲು ಇನ್ನಷ್ಟು ಪ್ರಯತ್ನ ಮಾಡಬೇಕು ಎಂಬ ಬೇಡಿಕೆ ಬಲವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಉತ್ಸವ ಮಹತ್ವದ್ದೆನಿಸುತ್ತದೆ.

ಸತತ ಮೂರು ದಿನಗಳ ಕಾಲ ಮಲ್ಪೆ ಕಡಲ ಕಿನಾರೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇಶದ ಖ್ಯಾತ ಡ್ರಮ್ಸ್ ವಾದಕ ಶಿವಮಣಿ ಅವರು ಮೊದಲ ದಿನ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸಾವಿರಾರು ಜನರನ್ನು ರಂಜಿಸಿತು. ಕಡಲ ಅಬ್ಬರವನ್ನೂ ಮೀರಿಸುಂತೆ ಕಿವಿಗಡಚಿಕ್ಕುವ ಸಂಗೀತ ಹೊಮ್ಮಿಸಿ ಏಕ ವ್ಯಕ್ತಿ ನೀಡಿದ ಪ್ರದರ್ಶನ ಹುಬ್ಬೇರಿಸುವಂತೆ ಮಾಡಿತು.

ಕರಾವಳಿಯ ವಿಶೇಷ ಖಾದ್ಯಗಳನ್ನು ಹೊರಗಿನವರಿಗೆ ಪರಿಚಯಿಸಲು ಆಹಾರ ಮೇಳ ಸಹ ನಡೆಯಿತು. ಶ್ವಾನ ಪ್ರಿಯರನ್ನು ರಂಜಿಸಲು ನಡೆದ ವಿವಿಧ ತಳಿಯ ಶ್ವಾನ ಪ್ರದರ್ಶನಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಪಶುಸಂಗೋಪನಾ ಇಲಾಖೆ ಇದ್ನು ಆಯೋಜಿಸಿತ್ತು.

ಸಾಹಸ ಪ್ರವಾಸೋದ್ಯಮ ಎಂಬ ಪರಿಕಲ್ಪನೆಗೆಯಲ್ಲಿ ರಾಷ್ಟ್ರ ಮಟ್ಟದ ಓಪನ್ ವಾಟರ್ ಸ್ವಿಮ್ಮಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜೂನಿಯರ್ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ಮಂದಿ ದೇಶದ ವಿವಿಧ ಮೂಲೆಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಕಡಲನ್ನು ಮೀರಿ ಸಾಗುವ ಈ ಸ್ಪರ್ಧೆ ಸಾಹಸ ಪ್ರಿಯರಿಗೆ ರೋಮಾಂಚನ ನೀಡಿತು. ಇಲ್ಲಿ ವಿಜೇತರಾದವರು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಪಡೆದ ಕಾರಣ ಇದರ ಮಹತ್ವ ಇನ್ನಷ್ಟು ಹೆಚ್ಚಿತ್ತು. ಗಾಳಿ ಪಟ, ಮರಳು ಶಿಲ್ಪ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಇದರಲ್ಲಿಯೂ ಉತ್ಸಾಹದಿಂದ ಭಾಗವಹಿಸಿದರು.

ಜಿಲ್ಲೆಯಲ್ಲಿ ಹೆಲಿ ಟೂರಿಸಂಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ. ಇದಕ್ಕೆ ಪೂರಕವೆಂಬಂತೆ ಡಾ. ಆರ್‌. ವಿಶಾಲ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ‘ಹೆಲಿ ಟೂರಿಸಂ’ಗೆ ಚಾಲನೆ ನೀಡಿದ್ದರು. ಪ್ರವಾಸೋದ್ಯಮ ಮಾತ್ರವಲ್ಲ, ಆರೋಗ್ಯ ಸೇರಿದಂತೆ ಇತರೆ ತುರ್ತು ಪರಿಸ್ಥಿತಿಗಳಲ್ಲಿ ಶೀಘ್ರ ಸಂಚಾರಕ್ಕೆ ಅವಕಾಶ ಸಿಗಲಿ ಎಂಬುದು ವಿಶಾಲ್ ಅವರ ಆಶಯವಾಗಿತ್ತು. ಆದರೆ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಬಾರದ ಕಾರಣ ಅದನ್ನು ನಿಲ್ಲಿಸಲಾಗಿತ್ತು.

ಉತ್ಸವದ ನೆಪದಲ್ಲಿ ಕೆಲ ದಿನಗಳ ಕಾಲ ಹೆಲಿ ಕಾಪ್ಟರ್ ಪ್ರಯಾಣಕ್ಕೂ ಅವಕಾಶವಿತ್ತು. ದೇಗುಲ, ಕಡಲು ಹಾಗೂ ಒಟ್ಟಾರೆ ಪ್ರಕೃತಿಯ ಸೊಬಗನ್ನು ವೈಮಾನಿಕ ನೋಟದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ ಇದಾಗಿತ್ತು. ಕುಂದಾಪುರದಲ್ಲಿಯೂ ಹೆಲಿ ಕಾಪ್ಟರ್ ಪ್ರಯಾಣಕ್ಕೆ ಅವಕಾಶ ಇತ್ತು.

ಪ್ರವಾಸೋದ್ಯಮಕ್ಕೆ ಒತ್ತು ನೀಡಿದರೆ ಜಿಲ್ಲೆಯ ಆರ್ಥಿಕತೆಯೂ ತನ್ನಿಂದತಾನೆ ಏಳಿಗೆ ಕಾಣುತ್ತದೆ ಎಂಬ ನಂಬಿಕೆ ಎಲ್ಲರದ್ದಾಗಿದೆ. ಹೋಟೆಲ್ ಉದ್ಯಮಿ, ಟೂರಿಸ್ಟ್‌ ವಾಹನ, ಹೋಂ ಸ್ಟೇ, ಸಣ್ಣ ವ್ಯಾಪಾರ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ರಂಗಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಸ್ಥಳೀಯರಿಗೆ ಇದರಿಂದ ಹೆಚ್ಚಿನ ಉದ್ಯೋಗ ಅವಕಾಶಗಳೂ ಲಭಿಸುತ್ತವೆ.

ಈ ನಿಟ್ಟಿನಲ್ಲಿ ಇನ್ನಷ್ಟು ಉತ್ತೇಜನವನ್ನು ಪ್ರವಾಸೋದ್ಯಮ ಬಯಸುತ್ತದೆ. ಈಗ ಮಾಡಿರುವ ಪ್ರಯತ್ನ ಒಂದು ಜಿಗಿತ ಮಾತ್ರ, ಈ ದಾರಿಯಲ್ಲಿ ಇನ್ನಷ್ಟು ಮುಂದೆ ಸಾಗಬೇಕಿದೆ ಎಂಬುದು ಸಹ ಅಷ್ಟೇ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT