ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಜಾತ್ರೆಗಳ ಜಾತ್ರೆ, ಜಾತ್ರೆಗಳ ತೊಟ್ಟಿಲು’ ಎಂದೇ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಜಯಪುರದ ಸಿದ್ಧೇಶ್ವರ ಜಾತ್ರೆ ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.

ನೆಲದ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಈ ಜಾತ್ರೆಯಲ್ಲಿ, ಸಮತೆಯ ಸಿದ್ಧರಾಗಿ ಬಾಳಿದ ಸಿದ್ಧರಾಮರ ಜೀವನ ವಿಧಾನವೂ ಅಡಕವಾಗಿ ಆಚರಣೆಗೊಳ್ಳುವುದು ವಿಶೇಷ. ‘ಸುಖ-ದುಃಖಗಳನ್ನು ಸಮಾನವಾಗಿ ಕಾಣುತ್ತ ತಮ್ಮ ಕಾಯಕ ಮಾಡುತ್ತಿದ್ದರೆ ಕಪಿಲಸಿದ್ಧ ಮಲ್ಲಿಕಾರ್ಜುನ ಕಾಯುತ್ತಾನೆ’ ಎಂಬ ಸೊನ್ನಲಿಗೆ ಸಿದ್ಧರಾಮನ ಮಾತು ಭಕ್ತಾದಿಗಳಿಗೆ ದಾರಿದೀಪ.

ಸಂಕ್ರಾಂತಿ ಸೊಬಗಿನ ಜತೆಜತೆಗೆ ಉತ್ತರ ಕರ್ನಾಟಕದ ವೈಭವ ಜಾತ್ರೆಯಲ್ಲಿ ಮೇಳೈಸಲಿದ್ದು, ಇದನ್ನು ಕಣ್ತುಂಬಿ ಕೊಳ್ಳಲು, ಉತ್ತರ ಕರ್ನಾಟಕವೂ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಭಕ್ತರು ತಂಡೋಪತಂಡವಾಗಿ ಬರುತ್ತಾರೆ.

ಇಲ್ಲಿ ರಥೋತ್ಸವವಿಲ್ಲ...

ಸೊನ್ನಲಿಗೆ ಶಿವಯೋಗಿ ಸಿದ್ಧರಾಮ ರೈತರ ಆರಾಧ್ಯ ದೈವ. ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲ ರೈತರು, ವ್ಯಾಪಾರಸ್ಥರು ಸಿದ್ಧೇಶ್ವರನನ್ನು ಆರಾಧಿಸುತ್ತಾರೆ. ಸಿದ್ಧರಾಮನ ಬದುಕಿನ ಘಟನಾವಳಿಗಳೇ ಜಾತ್ರೆಯಲ್ಲಿ ಆಚರಣೆಗೊಳ್ಳುತ್ತವೆ. ಈ ಜಾತ್ರೆಯಲ್ಲಿ ರಥೋತ್ಸವದ ಕಲ್ಪನೆಯೇ ಇಲ್ಲ.

ಸೊಲ್ಲಾಪುರ ಹೊರತುಪಡಿಸಿದರೆ ಬೃಹತ್ ಪ್ರಮಾಣದಲ್ಲಿ ಸಿದ್ಧರಾಮೇಶ್ವರರ ಜಾತ್ರೆ ನಡೆಯುವುದು ವಿಜಯಪುರದಲ್ಲೇ.

1918ರಿಂದ ಸಿದ್ಧೇಶ್ವರ ಸಂಸ್ಥೆಯ ಆಡಳಿತ ಮಂಡಳಿ ನೇತೃತ್ವದಲ್ಲಿ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ
ಸಂಘಟಿಸಲಾಗುತ್ತಿದೆ. ನಂದಿ ಧ್ವಜಗಳ ಉತ್ಸವ, ಪಲ್ಲಕ್ಕಿ ಮೆರವಣಿಗೆ, 770 ಲಿಂಗಗಳಿಗೆ ಎಣ್ಣೆ ಮಜ್ಜನ, ಅಭಿಷೇಕ, ಅಕ್ಷತಾರ್ಪಣೆ–ಭೋಗಿ, ಹೋಮ, ದನಗಳ ಜಾತ್ರೆ, ಕಲಾ ಪ್ರದರ್ಶನ, ಭಾರ ಎತ್ತುವ ಸ್ಪರ್ಧೆ, ಜಂಗಿ ಕುಸ್ತಿ ಜಾತ್ರೆಗೆ ಕಳೆ ಕಟ್ಟಲಿವೆ.

ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದ ಬಣಜಿಗರು 19ನೇ ಶತಮಾನದಲ್ಲಿ ವಿಜಯಪುರದೊಟ್ಟಿಗೆ ನಿಕಟ ಸಂಪರ್ಕ ಹೊಂದಿ ತಮ್ಮ ವಹಿವಾಟನ್ನು ಇಲ್ಲಿಯೂ ವಿಸ್ತರಿಸಿದ್ದರು. ಸಿದ್ಧರಾಮೇಶ್ವರನ ದರ್ಶನ ಪಡೆದ ಬಳಿಕವೇ ತಮ್ಮ ನಿತ್ಯದ ದಿನಚರಿ, ವಹಿವಾಟು ಆರಂಭಿಸುವುದು ಸೊಲ್ಲಾಪುರದಲ್ಲಿನ ವರ್ತಕರ ಸಂಪ್ರದಾಯವಾಗಿತ್ತು. ವಿಜಯಪುರದಲ್ಲಿ ವ್ಯಾಪಾರ ವೃದ್ಧಿಯಾದಂತೆ ಇಲ್ಲಿಯೇ ಆಸ್ತಿ ಗಳಿಸಿ, ನೆಲೆಸಿದರು. ಈ ಸಂದರ್ಭ ತಮ್ಮ ಆರಾಧ್ಯ ದೈವ ದರ್ಶನ ಸಿಗದಿರುವುದು ಹಲವರನ್ನು ಚಿಂತೆಯಾಗಿ ಕಾಡುತ್ತಿತ್ತು.

ತಮ್ಮ ಸಂಪ್ರದಾಯಕ್ಕೆ ಚ್ಯುತಿಯಾಗುತ್ತಿದೆ ಎಂಬುದನ್ನು ಅರಿತ ವ್ಯಾಪಾರಿ ಸಮೂಹ ವಿಜಯಪುರದಲ್ಲಿಯೇ ಸಿದ್ಧರಾಮೇಶ್ವರನ ದೇಗುಲ ನಿರ್ಮಾಣಕ್ಕೆ 1890ರಲ್ಲಿ ಮುನ್ನುಡಿ ಬರೆದು, ಅಲ್ಲಿಯಂತೆಯೇ ಇಲ್ಲಿಯೂ ಪಂಚರ ಸಮಿತಿ ರಚಿಸಿತು.

ಸೊಲ್ಲಾಪುರದ ವ್ಯಾಪಾರಿಗಳಲ್ಲಿ ಪ್ರಮುಖರಾದ ಮಲ್ಲಪ್ಪ ಚನ್ನಬಸಪ್ಪ ವಾರದ, ರೇವಣಸಿದ್ದಪ್ಪ ರಾಮಪ್ಪ ಜಮ್ಮಾ, ನಾಗಪ್ಪ ಬಂಡೆಪ್ಪ ಕಾಡಾದಿ, ಶಾಂತಮಲ್ಲಪ್ಪ ಬಸಲಿಂಗಪ್ಪ ಉಂಬರಜಿ, ಪತಾಟೆ ಚನ್ನಮಲ್ಲಪ್ಪ ದೇಗುಲ ನಿರ್ಮಾಣದ ಸಾರಥ್ಯ ವಹಿಸಿದ್ದರು.


ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಸಿದ್ಧೇಶ್ವರ ದೇಗುಲ

ಸ್ಥಳೀಯರು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರು ಇದಕ್ಕೆ ಸಾಥ್‌ ನೀಡಿದ್ದರು. ಎರಡೂ ಕಡೆಯವರು ಒಟ್ಟಾಗಿ ಜಾಗ ಗುರುತಿಸಿ, ಸುಂದರ ದೇಗುಲ ನಿರ್ಮಿಸಿದ ಬಳಿಕ, ಸಿದ್ಧರಾಮೇಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲು ಆರಂಭಿಸಿದ್ದರು. ಕೆಲ ವರ್ಷದ ಬಳಿಕ ಪಂಚರ ಸಮಿತಿಯ ಧರ್ಮದರ್ಶಿಗಳು ಸೊಲ್ಲಾಪುರದಲ್ಲಿ ನಡೆಯುವಂತೆಯೇ ವಿಜಯಪುರದಲ್ಲಿಯೂ ಜಾತ್ರೆ ಆಚರಿಸಲು ನಿರ್ಧರಿಸಿದರು. ಅದರಂತೆ 1918ರ ಸಂಕ್ರಮಣದಲ್ಲಿ ಮೊದಲ ಜಾತ್ರೆ ನಡೆಯಿತು. 2018ರಲ್ಲಿ ನಡೆಯುವ ಜಾತ್ರೆ 101ನೆಯದ್ದು.

ನಂದಿ ಧ್ವಜ

ನಂದಿ ಧ್ವಜ ಕೋಲು ಜಾತ್ರೆಯ ವಿಶೇಷ. ಆರಂಭದಲ್ಲಿ ಐದು ನಂದಿ ಧ್ವಜ ಕೋಲುಗಳ ಉತ್ಸವ ನಡೆಯುತ್ತಿತ್ತು. ಮಹಾತ್ಮಗಾಂಧಿ ನುಡಿಯಂತೆ ದಲಿತರಿಗೂ ಜಾತ್ರೆಯಲ್ಲಿ ಅವಕಾಶ ಕೊಡಲಿಕ್ಕಾಗಿ, ಎರಡು ನಂದಿ ಧ್ವಜಗಳ ಸಂಖ್ಯೆ ಹೆಚ್ಚಿಸಿದ್ದರಿಂದ, ಇದೀಗ ಜಾತ್ರೆಯುದ್ದಕ್ಕೂ ಏಳು ನಂದಿ ಕೋಲುಗಳ ಮೆರವಣಿಗೆ ನಡೆಯುತ್ತದೆ.

ಏಳು ನಂದಿ ಕೋಲುಗಳ ನಡುವೆ ಇರುವುದೇ ಪಡಿನಂದಿಕೋಲು. ಇದನ್ನು 11 ಕಳಸ ಕನ್ನಡಿಯಿಂದ ಅಲಂಕರಿಸುತ್ತಾರೆ. ಸಿದ್ಧರಾಮನ ಯೋಗದಂಡ ಎಂದೇ ಪೂಜಿಸುತ್ತಾರೆ. ಈ ಪಡಿ ನಂದಿಕೋಲಿನ ಜತೆಯೇ ಸಿದ್ಧರಾಮನನ್ನು ಪ್ರೀತಿಸಿದ ಕುಂಬಾರ ಕನ್ಯೆ ಗುಂಡವ್ವನ ವಿವಾಹ ನಡೆಯುವುದು. ಈ ಘಟನೆ ಬಳಿಕ ಆಕೆಗೆ ತನ್ನ ತಪ್ಪಿನ ಅರಿವಾಗಿ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ. ಇದರ ಸಂಕೇತವಾಗಿಯೇ ಜಾತ್ರೆಯಲ್ಲಿ ಯೋಗದಂಡದೊಂದಿಗೆ ಗುಂಡವ್ವನ ಲಗ್ನ ಮಾಡಿದ ಬಳಿಕ, ಹೋಮ ನಡೆಸಲಾಗುತ್ತದೆ.

ವಿಜಯಪುರ ಹೊರ ವಲಯ ತೊರವಿ ಬಳಿ ನಡೆಯುವ ಜಾನುವಾರು ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳ ಜಾನುವಾರು ಬರುತ್ತವೆ. ರೈತರ ಕೃಷಿ ಸಲಕರಣೆಗಳ ವಹಿವಾಟು ಬಿರುಸಿನಿಂದ ನಡೆಯಲಿದೆ. ಹೊಸ ಎತ್ತಿನ ಬಂಡಿಗಳ ಬಜಾರ್‌ ಇಲ್ಲಿಯೇ ತೆರೆದಿರುತ್ತದೆ.

***
ಜ 11ರಿಂದ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಗಣಪತಿ ಪೂಜೆಯೊಂದಿಗೆ ಆರಂಭಗೊಳ್ಳಲಿದೆ. 12ರಂದು ನಂದಿ ಧ್ವಜಗಳ ಉತ್ಸವ, 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ, 13ರಂದು ಅಕ್ಷತಾರ್ಪಣೆ–ಭೋಗಿ, 14ರಂದು ಹೋಮ, ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ, 15ರಂದು ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ, 16ರಂದು ಭಾರ ಎತ್ತುವ ಸ್ಪರ್ಧೆ, ಜಾನುವಾರು ಜಾತ್ರೆ, ಕೃಷಿ ಉತ್ಪನ್ನಗಳ ಪ್ರದರ್ಶನ 18ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT