ಬುಧವಾರ, ಜೂಲೈ 8, 2020
21 °C

ಮಾನದಂಡ ಏನು?

ಬಿ. ಎಂ. ಚಂದ್ರಶೇಖರಯ್ಯ Updated:

ಅಕ್ಷರ ಗಾತ್ರ : | |

ಕೇಂದ್ರ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಪ್ರಶಸ್ತಿಗಳ ಘೋಷಣೆಯಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಟಿ.ಪಿ. ಅಶೋಕ ಅವರ ಕೃತಿ ‘ಕಥನ ಭಾರತಿ’ ಮತ್ತು ಎಚ್‌.ಎಸ್‌. ಶ್ರೀಮತಿ ಅವರ ‘ಕಥಾಸಾಹಿತ್ಯ ಭಾಗ–1, ಭಾಗ–2’ ಆಯ್ಕೆಯಾಗಿದ್ದು, ಮುಂದಿನ ತಿಂಗಳು 12ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಈ ಕೃತಿಗಳನ್ನು ಪ್ರೊ. ತೇಜಸ್ವಿ ಕಟ್ಟೀಮನಿ, ಜ.ನಾ. ತೇಜಶ್ರೀ ಹಾಗೂ ಡಾ. ಕೆ.ಆರ್‌. ಸಂಧ್ಯಾ ರೆಡ್ಡಿ ಅವರು ಇದ್ದ ಕನ್ನಡ ವಿಭಾಗದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು ಎಂದು ಹೇಳಲಾಗಿದೆ.

ಈಗ ಇಲ್ಲಿ ಉತ್ತರ ಬೇಕಾಗಿರುವ ಪ್ರಶ್ನೆ ಏನೆಂದರೆ ಈ ಆಯ್ಕೆಗಳನ್ನು ಮಾಡಲು ಇರುವ ಮಾನದಂಡವೇನು? 2017ನೇ ಸಾಲಿನಲ್ಲಿ ಪ್ರಕಟವಾದ ಎಲ್ಲ ಕನ್ನಡ ಪುಸ್ತಕಗಳನ್ನು ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆಯೇ? ಅಕಾಡೆಮಿಯು ಪ್ರತಿವರ್ಷ ಪ್ರಕಟವಾದ ಕನ್ನಡದ ಕೃತಿಗಳನ್ನು ತಾನೇ ಸಂಗ್ರಹಿಸುತ್ತಿದೆಯೇ ಅಥವಾ ಪ್ರಶಸ್ತಿಗೆ ಆಸಕ್ತರು ತಮ್ಮ ಕೃತಿಗಳನ್ನು ಕಳುಹಿಸಲು ತಿಳಿಸಿ, ಪತ್ರಿಕಾ ಪ್ರಕಟಣೆ ನೀಡುತ್ತಿದೆಯೇ ಅಥವಾ ಆ ಬಗ್ಗೆ ಜಾಹೀರಾತು ಏನನ್ನಾದರೂ ನೀಡುತ್ತಿದೆಯೇ? ಇದಕ್ಕೆಲ್ಲಾ ಅಕಾಡೆಮಿಯೇ ಉತ್ತರ ನೀಡಬೇಕಾಗುತ್ತದೆ.

ಇತ್ತೀಚೆಗೆ ಈ ಪ್ರಶಸ್ತಿಗಳನ್ನು ಯಾವ ರೀತಿ, ಎಂತಹವರಿಗೆ ಕೊಡಲಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಗುಟ್ಟು! ಪ್ರಶಸ್ತಿಗಳನ್ನು ಕೊಡುವಾಗ ಅವರು ಖ್ಯಾತನಾಮರೇ, ಅವರಿಗೆ ಈ ಹಿಂದೆ ಯಾವ ಪ್ರಶಸ್ತಿ ಬಂದಿದೆ, ಬಂದಿಲ್ಲವಾದಲ್ಲಿ ಇದೂ ಬೇಡ ಎಂದು ನಿರ್ಧರಿಸಲಾಗುತ್ತದೆ. ಮುಂಚೂಣಿಯ ಸಾಹಿತಿಗಳಲ್ಲಿ ಕೂಡ ಪ್ರಶಸ್ತಿಗಳನ್ನು ಪಡೆಯಲು ‘ನನಗೆ ನೀ ನೆರವಾಗು, ನಿನಗೆ ನಾ ನೆರವಾಗುವೆನು!’ ಎಂಬ ಅಲಿಖಿತ ತತ್ವವನ್ನು ಆಚರಿಸಲಾಗುತ್ತದೆ! ಅವರನ್ನು ಬಿಟ್ಟು ಪ್ರಶಸ್ತಿಗಳು ಇನ್ನು ಯಾರ ಸನಿಹಕ್ಕೂ ಸುಳಿಯುವುದಿಲ್ಲ!

ಸಮಿತಿಯು ತನ್ನ ಎದುರಿಗೆ ಇರುವ ನಾಲ್ಕಾರು ಕೃತಿಗಳಲ್ಲಿ ಒಂದನ್ನು ಆರಿಸಿ ಪ್ರಶಸ್ತಿ ನೀಡುವುದಾದರೆ, ಅದು ಉಳಿದ ಅನೇಕ ಕೃತಿಕಾರರ ಸೃಜನಾತ್ಮಕ ಅಂತಃಸತ್ವವನ್ನು ಕೊಲೆ ಮಾಡಿದಂತಾಗುವುದಿಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.