20 ಅಭ್ಯರ್ಥಿಗಳಿಗೆ ಶೇ 100 ಅಂಕ

7
‘ಕ್ಯಾಟ್‌‘: ಫಲಿತಾಂಶ ಪ್ರಕಟ

20 ಅಭ್ಯರ್ಥಿಗಳಿಗೆ ಶೇ 100 ಅಂಕ

Published:
Updated:

ನವದೆಹಲಿ: ದೇಶದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳ (ಬಿ–ಸ್ಕೂಲ್‌) ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್) ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 20 ಮಂದಿ ಶೇ 100ರಷ್ಟು ಅಂಕ ಗಳಿಸಿದ್ದಾರೆ.

ನವೆಂಬರ್‌ನಲ್ಲಿ ದೇಶದ 140 ನಗರಗಳಲ್ಲಿ ಪರೀಕ್ಷೆ ನಡೆದಿತ್ತು. 1,99,632 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಲಖನೌ ಐಐಎಂ ಪರೀಕ್ಷೆ ಆಯೋಜಿಸಿತ್ತು.

‘2016ರಲ್ಲಿಯೂ 20 ಅಭ್ಯರ್ಥಿಗಳು ಶೇ 100ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದರು. ಈ ಎಲ್ಲ ಅಭ್ಯರ್ಥಿಗಳೂ ಎಂಜಿನಿಯರಿಂಗ್‌ ಹಿನ್ನೆಲೆಯವರಾಗಿದ್ದರು. ಒಬ್ಬರೂ ವಿದ್ಯಾರ್ಥಿನಿಯರಿರಲಿಲ್ಲ. ಆದರೆ, ಈ ಬಾರಿ ಶೇ 100 ರಷ್ಟು ಅಂಕ ಪಡೆದಿರುವ 20 ಅಭ್ಯರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿನಿಯರಿದ್ದು, ಎಂಜಿನಿಯರಿಂಗ್‌ಯೇತರ ಮೂವರು ಅಭ್ಯರ್ಥಿಗಳು ಇದ್ದಾರೆ’ ಎಂದು ಲಖನೌ ಐಐಎಂನ ಪ್ರಕಟಣೆ ತಿಳಿಸಿದೆ.

ದೇಶದಾದ್ಯಂತ 20 ಐಐಎಂಗಳಿದ್ದು, ಪ್ರತಿ ವರ್ಷ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಅಧ್ಯಯನಕ್ಕೆ 4,000 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುತ್ತಿದೆ. ಅಲ್ಲದೇ, ದೇಶದಲ್ಲಿರುವ 102 ಬಿ–ಸ್ಕೂಲ್‌ಗಳು ಕೂಡ ಕ್ಯಾಟ್‌ ಫಲಿತಾಂಶದ ಆಧಾರದ ಮೇಲೆಯೇ ದಾಖಲಾತಿ ಪ್ರಕ್ರಿಯೆ ನಡೆಸುತ್ತಿವೆ.

ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ ಪ್ರವೇಶಿಸಲು ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನು ಅರ್ಹತಾ ಮಾನದಂಡವಾಗಿ ಪರಿಗಣಿಸಲಾಗುತ್ತದೆ.

ಕರ್ನಾಟಕ ಅತಿ ಹೆಚ್ಚು ಬಿ–ಸ್ಕೂಲ್‌ಗಳನ್ನು (ಒಟ್ಟು 17) ಹೊಂದಿರುವ ರಾಜ್ಯವಾಗಿದೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಐಐಎಂ–ಬಿ ಕೂಡ ಇದೆ. ಇಲ್ಲೆಲ್ಲ ಕ್ಯಾಟ್‌ ಫಲಿತಾಂಶ ಆಧರಿಸಿಯೇ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತದೆ.

ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕ್ಯಾಟ್‌ ಪರೀಕ್ಷೆ ಬರೆದವರ ಸಂಖ್ಯೆ ಹೆಚ್ಚಾಗಿತ್ತು ಎಂದು ಪ್ರಕಟಣೆ ಹೇಳಿದೆ.

ವಿದೇಶದಲ್ಲೂ ಕ್ಯಾಟ್‌ಗೆ ಮನ್ನಣೆ: ಸಿಂಗಪುರ ಮ್ಯಾನೇಜ್‌ಮೆಂಟ್‌ ವಿಶ್ವವಿದ್ಯಾಲಯವು ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಕ್ಯಾಟ್‌ ಅಂಕಗಳನ್ನು ಪರಿಗಣಿಸುತ್ತದೆ.

*

ಮೊಬೈಲ್‌ಗೆ ಅಂಕಪಟ್ಟಿ

ಅಭ್ಯರ್ಥಿಗಳು ಕ್ಯಾಟ್‌ ಅಧಿಕೃತ ವೆಬ್‌ಸೈಟ್‌ (www.iimcat.ac.in) ಸಂಪರ್ಕಿಸಿ ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಲ್ಲದೆ ಪ್ರತಿ ಅಭ್ಯರ್ಥಿಗಳ ಮೊಬೈಲ್‌ ಸಂಖ್ಯೆಗೆ ಅವರು ಪಡೆದಿರುವ ಅಂಕಪಟ್ಟಿಯನ್ನು ಎಸ್‌ಎಂಎಸ್‌ ಮೂಲಕ ಕಳುಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry