ಮಯಂಕ್ ಆಟಕ್ಕೆ ಮಣಿದ ಗೋವಾ

7
ಸೈಯದ್‌ ಮುಷ್ತಾಕ್ ಅಲಿ ಟಿ–20 ಕ್ರಿಕೆಟ್‌: ಕರ್ನಾಟಕ ಶುಭಾರಂಭ

ಮಯಂಕ್ ಆಟಕ್ಕೆ ಮಣಿದ ಗೋವಾ

Published:
Updated:
ಮಯಂಕ್ ಆಟಕ್ಕೆ ಮಣಿದ ಗೋವಾ

ವಿಶಾಖಪಟ್ಟಣ: ಮಯಂಕ್ ಅಗರ ವಾಲ್‌ (55) ಅವರ ಮಿಂಚಿನ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡ ಗೋವಾ ಎದುರಿನ ಪಂದ್ಯದಲ್ಲಿ ಶುಭಾರಂಭ ಮಾಡಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆದ ದಕ್ಷಿಣ ವಲಯ ಅಂತರ ರಾಜ್ಯ ಟಿ–20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ವಿನಯ್ ಕುಮಾರ್ ಪಡೆ 49 ರನ್‌ಗಳಿಂದ ಜಯಭೇರಿ ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 172 ರನ್ ಕಲೆಹಾಕಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಗೋವಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 123 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮಿಥುನ್ ದಾಳಿ: ಗೋವಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಮಧ್ಯಮ ವೇಗದ ಬೌಲರ್ ಅಭಿಮನ್ಯು ಮಿಥುನ್‌ ಪೆಟ್ಟು ನೀಡಿದರು. ಸ್ವಪ್ನಿಲ್ ಅಸ್ನೋಡ್ಕರ್ (1), ಶಗುನ್ ಕಾಮತ್‌ (28) ಮಿಥುನ್ ಅವರ ಬೌಲಿಂಗ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರು. ಬೌಲಿಂಗ್ ಮಾಡಿದ ನಾಲ್ಕು ಓವರ್‌ಗಳಲ್ಲಿ ಮಿಥುನ್ 13 ರನ್‌ಗಳನ್ನು ನೀಡಿದರು ಅಲ್ಲದೇ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಗೋವಾ ತಂಡ ಪ್ರಯಾಸದಿಂದ 100ರ ಗಡಿ ದಾಟಿತು. ಮಧ್ಯಮ ಹಾಗೂ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಶ್ರೇಯಸ್ ಅರವಿಂದ್‌ (22ಕ್ಕೆ2) ತಡೆದರು.

ಕೇವಲ 12 ಎಸೆತಗಳಲ್ಲಿ 20ರನ್ ದಾಖಲಿಸಿದ್ದ ಗೋವಾ ತಂಡದ ಆಲ್‌ರೌಂಡ್ ಆಟಗಾರ ದರ್ಶನ್ ಮಿಸಾಲ್ ಅವರಿಗೆ ಅರವಿಂದ್ ಪೆವಿಲಿಯನ್ ಹಾದಿ ತೋರಿದರು. ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ಬಾರಿಸಿದ್ದ ಮಿಸಾಲ್, ವಿನಯ್ ಕುಮಾರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೊನೆಯ ನಾಲ್ವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲಿಲ್ಲ. ಕೆ.ಗೌತಮ್‌ (19ಕ್ಕೆ1) ಹಾಗೂ ವಿನಯ್‌ ಕುಮಾರ್ (35ಕ್ಕೆ1) ಕೂಡ ಪ್ರಭಾವಿ ಬೌಲಿಂಗ್‌ ದಾಳಿ ನಡೆಸಿದರು.

ಮಯಂಕ್ ಮಿಂಚು: ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್ ಅಗರವಾಲ್‌ (55, 35ಎ, 8ಬೌಂ, 2ಸಿ) ಅವರ ಅರ್ಧಶತಕದ ಆಟದಿಂದ ಕರ್ನಾಟಕ ತಂಡ ಸವಾಲಿನ ಮೊತ್ತ ಕಲೆಹಾಕಿತು. ಮಯಂಕ್ ಹಾಗೂ ಆರ್‌. ಸಮರ್ಥ್‌ (28) ಜೋಡಿ ಮೊದಲ ವಿಕೆಟ್‌ಗೆ 90 ರನ್‌ ಕಲೆಹಾಕಿತು. ಮನೀಷ್‌ ಪಾಂಡೆ (24, 17ಎ, 2ಸಿ) ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.

ಈ ನಡುವೆ ದರ್ಶನ್ ಮಿಸಾಲ್ (27ಕ್ಕೆ3) ಕರ್ನಾಟಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಕೊನೆಯ ಓವರ್‌ಗಳಲ್ಲಿ ಸ್ಟುವರ್ಟ್‌ ಬಿನ್ನಿ (28, 16ಎ, 2ಬೌಂ, 1ಸಿ) ಹಾಗೂ ಪ್ರವೀಣ್‌ ದುಬೆ (17) ರನ್ ವೇಗ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 (ಆರ್.ಸಮರ್ಥ್‌ 28, ಮಯಂಕ್‌ ಅಗರವಾಲ್‌ 55, ಮನೀಷ್ ಪಾಂಡೆ 24, ಕರುಣ್ ನಾಯರ್‌ 11, ಸ್ಟುವರ್ಟ್ ಬಿನ್ನಿ 28, ಪ್ರವೀಣ್ ದುಬೆ 17; ದರ್ಶನ್ ಮಿಸಾಲ್‌ 27ಕ್ಕೆ3).

ಗೋವಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 123 (ಸ್ವಪ್ನಿಲ್ ಅಸ್ನೋಡ್ಕರ್ 1, ಶಗುನ್ ಕಾಮತ್‌ 28; ಅಭಿಮನ್ಯು ಮಿಥುನ್‌ 13ಕ್ಕೆ2, ಆರ್‌.ವಿನಯ್‌ ಕುಮರ್‌ 35ಕ್ಕೆ1, ಶ್ರೇಯಸ್ ಅರವಿಂದ್‌ 22ಕ್ಕೆ2, ಕೆ.ಗೌತಮ್‌ 15ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 49ರನ್‌ಗಳ ಜಯ ಮತ್ತು 4 ಪಾಯಿಂಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry