ಗುರುವಾರ , ಆಗಸ್ಟ್ 13, 2020
27 °C

‌ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯ: ವರ್ಷಾರಂಭದಲ್ಲಿ ಸೋಲಿನ ಕಹಿ

ಪಿಟಿಐ Updated:

ಅಕ್ಷರ ಗಾತ್ರ : | |

‌ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯ: ವರ್ಷಾರಂಭದಲ್ಲಿ ಸೋಲಿನ ಕಹಿ

ಕೇಪ್‌ಟೌನ್‌: ಆತಿಥೇಯರನ್ನು ಎರಡನೇ ಇನಿಂಗ್ಸ್‌ನಲ್ಲಿ 130 ರನ್‌ಗಳಿಗೆ ಕೆಡವಿ ಕೇಕೆ ಹಾಕಿದ ವಿರಾಟ್‌ ಕೊಹ್ಲಿ ಬಳಗದವರು ಕೆಲವೇ ತಾಸುಗಳಲ್ಲಿ ಕಳೆಗುಂದಿದರು. ಎರಡನೇ ಇನಿಂಗ್ಸ್‌ನಲ್ಲಿ 135 ರನ್‌ಗಳಿಗೆ ಪತನ ಕಂಡ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿತು.

ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ 208 ರನ್‌ಗಳ ಜಯದ ಗುರಿ ಬೆನ್ನತ್ತಿದ ಭಾರತ ಹೊಸ ವರ್ಷದ ಮೊದಲ ಪಂದ್ಯದಲ್ಲಿ 72 ರನ್‌ಗಳಿಂದ ನಿರಾಸೆ ಕಂಡಿತು. ವಿರಾಟ್ ಕೊಹ್ಲಿ ವಿವಾಹದ ನಂತರ ಆಡಿದ ಮೊದಲ ಪಂದ್ಯ ಇದಾಗಿತ್ತು.

ಮೊದಲ ಎರಡು ದಿನ ಉಭಯ ತಂಡಗಳು ಸಮಬಲದಿಂದ ಹೋರಾಡಿದ್ದವು. ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 286 ರನ್‌ಗಳಿಗೆ ಆಲೌಟ್ ಮಾಡಿದ್ದ ಭಾರತ 209 ರನ್‌ ಗಳಿಸಿ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ದಿನದಾಟದ ಮುಕ್ತಾಯದ ವೇಳೆ ಎದುರಾಳಿಗಳ ಎರಡು ವಿಕೆಟ್‌ಗಳನ್ನು ಕಬಳಿಸಿತ್ತು. ಹೀಗಾಗಿ ಪಂದ್ಯ ರೋಚಕ ಘಟ್ಟ ತಲುಪಿತ್ತು.

ಮೂರನೇ ದಿನವಾದ ಭಾನುವಾರ ಪೂರ್ತಿ ಮಳೆಗೆ ಆಹುತಿಯಾಗಿತ್ತು. ಸೋಮವಾರ ಬೆಳಿಗ್ಗೆ ಅಮೋಘ ಬೌಲಿಂಗ್ ಮಾಡಿದ ಭಾರತದ ವೇಗಿಗಳು ದಕ್ಷಿಣ ಆಫ್ರಿಕಾಗೆ ಭಾರಿ ಪೆಟ್ಟು ನೀಡಿದ್ದರು. ಹೀಗಾಗಿ ತಂಡ ಸುಲಭ ಗೆಲುವಿನ ಗುರಿ ಪಡೆದಿತ್ತು. ಆದರೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡು ಸೋಲಿಗೆ ಶರಣಾಯಿತು.

ನಿರೀಕ್ಷೆ ಮೂಡಿಸಿದ ಅಶ್ವಿನ್–ಭುವನೇಶ್ವರ್‌: ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಆರಂಭವೇ ನಿರಾಶಾದಾಯಕವಾಗಿತ್ತು. ಡೇಲ್‌ ಸ್ಟೇನ್ ಅನುಪಸ್ಥಿತಿಯಲ್ಲಿ ವೇಗಿತ್ರಯರಾದ ವೆರ್ನಾನ್ ಫಿಲ್ಯಾಂಡರ್, ಮಾರ್ನೆ ಮಾರ್ಕಲ್‌ ಮತ್ತು ಕಗಿಸೊ ರಬಾಡ ಪ್ರವಾಸಿ ತಂಡವನ್ನು ನಿರಂತರ ಕಾಡಿದರು. ಮುರಳಿ ವಿಜಯ್ ಮತ್ತು ಶಿಖರ್ ಧವನ್‌ ರನ್‌ ಗಳಿಸಲು ಪರದಾಡಿದರು. ಫಿಲ್ಯಾಂಡರ್ ಬೌಲಿಂಗ್‌ನಲ್ಲಿ ವಿಜಯ್‌ ಎರಡು ಬಾರಿ ಅಂಪೈರ್ ತೀರ್ಪು ಮರುಪರಿಶೀಲನೆಯ ಮೂಲಕ ಬಚಾವಾದರು.

ಆದರೆ ತಂಡದ ಮೊತ್ತ 30 ರನ್‌ ಆಗಿದ್ದಾಗ ಮಾರ್ಕೆಲ್‌ಗೆ ಧವನ್‌ ವಿಕೆಟ್ ಒಪ್ಪಿಸಿದರು. ಇದೇ ಮೊತ್ತಕ್ಕೆ ವಿಜಯ್‌ ಕೂಡ ಔಟಾದರು. ವಿಜಯ್‌ ವಿಕೆಟ್ ಕಬಳಿಸಿದ ನಂತರ ಫಿಲ್ಯಾಂಡರ್ ಬಿರುಗಾಳಿಯಾದರು. ಜೀವನಶ್ರೇಷ್ಠ 42ಕ್ಕೆ6 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಹರಿಣಗಳ ನಾಡಿನಲ್ಲಿ ಮೂರನೇ ಟೆಸ್ಟ್ ಪಂದ್ಯ ಗೆಲ್ಲುವ ಭಾರತದ ಕನಸನ್ನು ನುಚ್ಚುನೂರು ಮಾಡಿದರು.

ವಿರಾಟ್ ಕೊಹ್ಲಿ 28 ರನ್‌ ಗಳಿಸಿದ್ದು ಬಿಟ್ಟರೆ ಅಗ್ರ ಕ್ರಮಾಂಕದ ಆರು ಮಂದಿಗೆ 20 ರನ್‌ಗಳ ಗಡಿಯನ್ನು ಕೂಡ ದಾಟಲಾಗಲಿಲ್ಲ. ಒಂಬತ್ತು ರನ್‌ ಗಳಿಸಿದ್ದಾಗ ರಬಾಡ ಅವರಿಂದ ಜೀವದಾನ ಪಡೆದ ರೋಹಿತ್‌ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 82 ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡಿದ್ದ ತಂಡದಲ್ಲಿ ರವಿಚಂದ್ರನ್‌ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್‌ ಎಂಟನೇ ವಿಕೆಟ್‌ಗೆ 49 ರನ್‌ ಸೇರಿಸಿ ಭರವಸೆ ಮೂಡಿಸಿದರು. ಆದರೆ ಅಶ್ವಿನ್ ಔಟಾದ ನಂತರ ನಾಲ್ಕು ರನ್‌ಗಳ ಅಂತರದಲ್ಲಿ ತಂಡ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭುವನೇಶ್ವರ್‌ ಕುಮಾರ್ ಔಟಾಗದೆ ಉಳಿದರು.

ಬೂಮ್ರಾ–ಶಮಿ ಮಿಂಚಿನ ದಾಳಿ

ಸೋಮವಾರ ಬೆಳಿಗ್ಗೆ ಜಸ್‌ಪ್ರೀತ್ ಬೂಮ್ರಾ ಮತ್ತು ಮಹಮ್ಮದ್ ಶಮಿ ಮಿಂಚಿನ ದಾಳಿ ನಡೆಸಿದರು. 65 ರನ್‌ಗಳಿಗೆ ಎದುರಾಳಿಗಳ ಕೊನೆಯ ಎಂಟು ವಿಕೆಟ್‌ಗಳನ್ನು ಉರುಳಿಸಲು ನೆರವಾದರು.

ದಿನದ ಎರಡಣೇ ಓವರ್‌ನಲ್ಲಿ ಹಾಶೀಂ ಆಮ್ಲಾ ಅವರನ್ನು ರೋಹಿತ್ ಶರ್ಮಾ ಅವರ ಮುಷ್ಠಿಯಲ್ಲಿ ಸಿಲುಕಿಸಿದ ಶಮಿ ಎಂಟು ಓವರ್‌ಗಳ ನಂತರ ರಬಾಡ ವಿಕೆಟ್ ಕೂಡ ಉರುಳಿಸಿದರು. 29ನೇ ಓವರ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿ ಕೂಡ ಔಟಾದರು. ಈ ಸಂದರ್ಭದಲ್ಲಿ ಆ ತಂಡ 82ಕ್ಕೆ 5 ಎಂಬ ಸ್ಥಿತಿಗೆ ತಲುಪಿತ್ತು. ನಂತರ 48 ರನ್‌ ಸೇರಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ಆಲೌಟಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.